ಉಳಿದವರು ಕಂಡಂತೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ...
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ನಿರೀಕ್ಷೆಗೆ ಹೆಚ್ಚಿನ ಬಲ ಬರುತ್ತಿರುವಂತೆಯೇ ಪರರಾಷ್ಟ್ರಗಳೂ ಇದಕ್ಕೆ ಸ್ಪಂದಿಸಲು ಶುರುಮಾಡಿವೆ. ಮೋದಿ ಅವರ ಅಭಿವೃದ್ಧಿಯ ಮಾದರಿ ಮುಂದೆ 2002ರ ಗಲಭೆ ಮಾಸುತ್ತಾ ಹೋಗುತ್ತಿದೆ. 'ವಾಜಪೇಯಿ ಅನುಸರಿಸಿದ ವಿದೇಶಾಂಗ ನೀತಿಯನ್ನೇ ನಾನೂ ಅನುಸರಿಸುತ್ತೇನೆ' ಎಂಬ ಮೋದಿಯವರ ಮಾತು ಹಲವು ರಾಷ್ಟ್ರಗಳಿಗೆ ಹೆಚ್ಚಿನ ಭರವಸೆ ನೀಡಿದೆ. ಪೂರ್ವ ಏಷ್ಯಾ ರಾಷ್ಟ್ರಗಳಂತೂ ಮೋದಿಗೆ ಚಿಯರ್ ಲೀಡರ್ಸ್ ಇದ್ದಂತೆ. ಒಟ್ಟಾರೆಯಾಗಿ ಮೋದಿ ಪ್ರಧಾನಿಯಾದರೆ ವಿವಿಧ ರಾಷ್ಟ್ರಗಳ ಜತೆಗಿನ ಸಂಬಂಧ ಹೇಗಿರಬಹುದು ಎಂಬ ಬಗ್ಗೆ ಒಂದಿಷ್ಟು ಮಾಹಿತಿ...
ಜಪಾನ್
ಜಪಾನ್ ಪ್ರಧಾನಿ ಶಿನ್ಝೋ ಅಬೆ ಜತೆ ದೀರ್ಘಕಾಲದಿಂದಲೂ ನರೇಂದ್ರ ಮೋದಿ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ಇವರಿಬ್ಬರಿಗೂ ಚೀನಾ ವಿರುದ್ಧ ವೈಷಮ್ಯವಿದೆ.
ದಶಕಗಳಿಂದಲೂ ಭಾರತ ಮತ್ತು ಚೀನಾದ ನಡುವೆ ಗಡಿ ವಿವಾದವಿದೆ. ಗಡಿ ವಿಚಾರಕ್ಕೆ ಸಂಬಂಧಿಸಿ ಚೀನಾದ ವಿರುದ್ಧ ಕಠಿಣ ನಿಲುವು ತಾಳುವುದಾಗಿ ಮೋದಿ ಹೇಳಿದ್ದಾರೆ. ಇದೇ ವೇಳೆ, ಪೂರ್ವ ಚೀನಾ ಸಮುದ್ರದಲ್ಲಿನ ಹಲವು ದ್ವೀಪಗಳಿಗೆ ಸಂಬಂಧಿಸಿ ಜಪಾನ್ ಪ್ರಧಾನಿ ಅಬೆ ಅವರೂ ಚೀನಾದೊಂದಿಗೆ ಮುನಿಸಿಕೊಂಡಿದ್ದಾರೆ. ಹಾಗಾಗಿ ಶತ್ರುವಿನ ಶತ್ರು ಮಿತ್ರ ಎಂಬಂತೆ ಭಾರತವು ಜಪಾನ್ಗೆ ಆತ್ಮೀಯ ಮಿತ್ರನಾಗಬಹುದು.
2007ರಲ್ಲಿ ಅಂದರೆ ಪ್ರಧಾನಿಯಾಗಿ ಅಬೆ ಅವರ ಮೊದಲ ಆಡಳಿತಾವಧಿಯಲ್ಲಿ ಮೋದಿ ಟೋಕಿಯೋಗೆ ಭೇಟಿ ನೀಡಿದ್ದರು. ನಂತರ 2012ರಲ್ಲಿ ಅಬೆ ವಿರೋಕ್ಷಪಕ್ಷದ ನಾಯಕನಾಗಿದ್ದಾಗಲೂ ಮೋದಿ ಅಲ್ಲಿಗೆ ತೆರಳಿದ್ದರು.
ಚೀನಾ
ಮೋದಿ ಅವರು ಅಧಿಕಾರಕ್ಕೇರಿದರೆ ಭಾರತ ಮತ್ತು ಚೀನಾ ಇನ್ನಷ್ಟು ಹತ್ತಿರವಾಗಲಿದೆ. ಆದರೆ ಮೋದಿಯವರ ಗೆಲವು ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಪಾಲಿಗೆ ನುಂಗಲಾರದ ತುತ್ತಾಗಲಿದೆ ಎಂದು ಇತ್ತೀಚೆಗಷ್ಟೇ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆಯೊಂದು ವರದಿ ಮಾಡಿದೆ.
ಅರುಣಾಚಲ ಪ್ರದೇಶದ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, 'ಚೀನಾ ಮೊದಲು ತನ್ನ ವಿಸ್ತರಣಾ ನೀತಿಯನ್ನು ಕೈಬಿಡಲಿ' ಎಂದಿದ್ದರು. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದ ಚೀನಾ ಪತ್ರಿಕೆ, ಮೋದಿ ಹೇಳಿಕೆಯನ್ನು ಒಂದು ವರ್ಗದ ಜನ ವೈಭವೀಕರಿಸುತ್ತಿದ್ದಾರೆ ಎಂದಿದೆ.
ಚೀನಾದ ಹಲವು ಉದ್ದಿಮೆಗಳು ಗುಜರಾತ್ನಲ್ಲಿ ಹೂಡಿಕೆ ಮಾಡಿವೆ. ಈ ಮೂಲಕ ಗುಜರಾತ್ನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನೂ ನೀಡಿವೆ.
ಅಮೆರಿಕ
ಗುಜರಾತ್ ಗಲಭೆ ಸಂಬಂಧ 2005ರಲ್ಲಿ ಅಮೆರಿಕವು ಮೋದಿಗೆ ವೀಸಾ ನಿರಾಕರಿಸಿತ್ತು. 9 ವರ್ಷಗಳ ಕಾಲ ಮೋದಿಗೆ ನಿಷೇಧ ಹೇರಿದ್ದ ಅಮೆರಿಕ ಇತ್ತೀಚೆಗಷ್ಟೇ ಅವರ ಬಗ್ಗೆ ಮೃದುಧೋರಣೆ ತಾಳಿತ್ತು. ಫೆಬ್ರವರಿಯಲ್ಲಿ ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿದ್ದ ನ್ಯಾನ್ಸಿ ಪೊವೆಲ್ ಅವರು ಮೋದಿಯನ್ನು ಭೇಟಿಯಾಗಿದ್ದರು.
ಭಾರತದ ಚುನಾವಣೆಯ ಬಳಿಕ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೋ ಅದರ ಜತೆ ಉತ್ತಮ ಸಂಬಂಧ ಹೊಂದಲಿದ್ದೇವೆ ಎಂಬ ಸುಳಿವನ್ನೂ ಅಮೆರಿಕ ನೀಡಿದೆ.
'ಭಾರತದ ಮುಂದಿನ ಪ್ರಧಾನಿ ಜತೆ ನಾವು ತುಂಬಾ ಆತ್ಮೀಯವಾಗಿ ಕೆಲಸ ಮಾಡಲಿದ್ದೇವೆ. ಅದಕ್ಕೆ ನಾನೇ ಗ್ಯಾರಂಟಿ ಕೊಡುತ್ತೇನೆ' ಎಂದಿದ್ದಾರೆ ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರೆ ಮೇರಿ ಹಾರ್ಫ್.
ಪಾಕಿಸ್ತಾನ
- ನಾನು ಚುನಾವಣೆಯಲ್ಲಿ ಗೆದ್ದರೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಬರುವಂತೆ ಮಾಡಿ, 1993ರ ಮುಂಬೈ ಸ್ಫೋಟದ ವಿಚಾರಣೆಗೆ ಇಂಬು ಕೊಡುತ್ತೇನೆ ಎಂದು ಮೋದಿ ಹೇಳಿದ್ದರು.
- ಮೋದಿ ಅವರ ಈ ಹೇಳಿಕೆಯನ್ನು ಪಾಕ್ನ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್, 'ಬೇಜವಾಬ್ದಾರಿಯುತ ಹಾಗೂ ನಾಚಿಕೆಗೇಡಿನ ಹೇಳಿಕೆ' ಎಂದು ಬಣ್ಣಿಸಿದ್ದರು.
- ಹೀಗಿದ್ದಾಗ್ಯೂ, ಪಾಕ್ನ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರು, ಮೋದಿ ಅವರು ಭಾರತದ ಮುಂದಿನ ಪ್ರಧಾನಿಯಾಗಬೇಕು. ಅವರಷ್ಟೇ ಶಾಂತಿ ಮಾತುಕತೆಗೆ ಬೇಕಾದ ಬಲಿಷ್ಠ ನಾಯಕತ್ವ ಒದಗಿಸಲು ಸಾಧ್ಯ ಎಂದಿದ್ದಾರೆ.