ಸ್ಪೀಕರ್ ಆಗಲು ಒಪ್ಪದ ಆಡ್ವಾಣಿ
ಬರೋಬ್ಬರಿ ಮೂರು ಗಂಟೆ ಸಭೆ.-ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಬರೋಬ್ಬರಿ ಮೂರು ಗಂಟೆ ಸಭೆ.
-ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮತ್ತು ಆರ್ಎಸ್ಎಸ್ ಮುಖಂಡರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ, ಹಾಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕೇಂದ್ರ ಸಂಪುಟದಲ್ಲಿ ಎರಡನೇ ಸ್ಥಾನ ಪಡೆಯುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಯಿತು. ಅದರ ಜತೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ನೇರವಾಗಿ ನರೇಂದ್ರ ಮೋದಿಯವರೇ ಸರ್ಕಾರ ರಚನೆ ಮತ್ತು ಇತರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ. ಈ ಮೂಲಕ ಆರ್ಎಸ್ಎಸ್ ಮತ್ತು ಸರ್ಕಾರದ ನಡುವೆ ಯಾವುದೇ ಮಧ್ಯವರ್ತಿಗಳು ಪ್ರಮುಖ ಪಾತ್ರವಹಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೋದಿಗೇ ಅಧಿಕಾರ
ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬ ಅಂತಿಮ ನಿರ್ಧಾರನ್ನು ಮೋದಿಯವರೇ ಕೈಗೊಳ್ಳಲಿದ್ದಾರೆ. ಆರ್ಎಸ್ಎಸ್ ನಾಯಕರು ಮೋದಿಗೆ ಈ ಅಧಿಕಾರ ನೀಡಿದ್ದಾರೆ.
ಆಡ್ವಾಣಿಯೇ ತಲೆನೋವು
ಆಡ್ವಾಣಿ, ಜೋಶಿಗೆ ಯಾವ ಸ್ಥಾನ ನೀಡಬೇಕು ಎನ್ನುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ಆಡ್ವಾಣಿ ಅವರನ್ನು ಲೋಕಸಭೆ ಸ್ಪೀಕರ್ ಮಾಡುವ ಇರಾದೆ ನಾಯಕರದ್ದಾಗಿದೆ. ಆದರೆ ಆದನ್ನು ಸ್ವೀಕರಿಸಲು ಆಡ್ವಾಣಿ ಸಿದ್ಧರಿಲ್ಲ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಗುರುವಾರ ಸಂಜೆಯ ವೇಳೆಗೆ ರಾಜನಾಥ್ ಸಿಂಗ್ ಆಡ್ವಾಣಿ ನಿವಾಸಕ್ಕೆ ತೆರಳಿ ಮನವೊಲಿಸಿದರು.