ಸ್ವಂತ ಬಲದ ಮೇಲೆ ಮೋದಿ ಸರ್ಕಾರ
ನವದೆಹಲಿ: ಸುಸ್ಥಿರ ಅಭಿವೃದ್ಧಿ ಮತ್ತು ಸುಭದ್ರ ಸರ್ಕಾರದ ಭರವಸೆಯೊಂದಿಗೆ ರಾಷ್ಟ್ರವ್ಯಾಪಿ ಮಿಂಚಿನ ಸಂಚಾರ ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ರಾಷ್ಟ್ರದ ಜನತೆ ಸ್ಪಷ್ಟ ಬಹುಮತದ ಆದೇಶ ನೀಡಿದ್ದಾರೆ. 285 ಸ್ಥಾನ ಪಡೆದಿರುವ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಮರ್ಥವಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡೆಸಿದ ರಾಷ್ಟ್ರದ ಅಭಿವೃದ್ಧಿ ಎಂಬ ಸಕಾರಾತ್ಮಕ ಪ್ರಚಾರದ ಸುನಾಮಿಗೆ ಆಡಳಿತಾರೂಢ ಯುಪಿಎ ತತ್ತರಿಸಿ ಹೋಗಿದೆ. ಒಂದೂಕಾಲು ಶತಮಾನದಷ್ಟು ಇತಿಹಾಸವಿರುವ ಕಾಂಗ್ರೆಸ್ ಅತ್ಯಂತ ಕಡಮೆ ಸ್ಥಾನ ಪಡೆದು ಮೂಲೆಗುಂಪಾಗಿದೆ.
ನರೇಂದ್ರ ಮೋದಿ ಅಬ್ಬರದ ಅಲೆಗೆ ಪ್ರಾದೇಶಿಕ ಪಕ್ಷಗಳು ತರಗೆಲಗಳಂತೆ ಉದುರಿ ಹೋಗಿವೆ. ಎಐಎಡಿಎಂಕೆ ಮತ್ತು ಬಿಜೆಡಿ ಹೊರತುಪಡಿಸಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಜೆಡಿಯು ಸೇರಿದಂತೆ ಹತ್ತಾರು ಪ್ರಾದೇಶಿಕ ಪಕ್ಷಗಳು ನೆಲೆ ಕಳೆದುಕೊಂಡಿವೆ.
ಮೂರು ದಶಕಗಳ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರದಲ್ಲಿ ಏಕ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಗೆಲವಿನ ರೂವಾರಿ ನರೇಂದ್ರ ದಾಮೋದರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಇದರೊಂದಿಗೆ ಮೂರು ದಶಕಗಳಿಂದ ರಾಷ್ಟ್ರದಲ್ಲಿ ಅಸ್ಥಿರತೆಯ ತೂಗುಯ್ಯಾಲೆಯನ್ನೇ ನಿರ್ಮಿಸಿದ್ದ 'ಸಮ್ಮಿಶ್ರ ಸರ್ಕಾರ ಯುಗ' ಇತಿಹಾಸ ಸೇರಲಿದೆ.
ಸ್ವತಃ ಆ ಪಕ್ಷದ ನಾಯಕರೂ ನಿರೀಕ್ಷಿಸದಷ್ಟು ರಾಷ್ಟ್ರವ್ಯಾಪಿ ಬೆಂಬಲ ಬಿಜೆಪಿಗೆ ಸಿಕ್ಕಿದೆ. ರಾಷ್ಟ್ರದ ದಶ ದಿಕ್ಕುಗಳಲ್ಲೂ ಬಿಜೆಪಿ ತನ್ನ ಖಾತೆ ತೆರೆದಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ತನ್ನ ಗೆಲವಿನ ಹೆಜ್ಜೆ ದಾಖಲಿಸಿದೆ. ಇದುವರೆಗೂ ಖಾತೆಯೇ ತೆರೆಯದ ತಮಿಳುನಾಡು, ಜಮ್ಮು-ಕಾಶ್ಮೀರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಈಶಾನ್ಯ ರಾಜ್ಯಗಳಲ್ಲೂ ಉತ್ತಮ ಸಾಧನೆ ಮಾಡಿದೆ. ಈ ಸಾಧನೆಗೆ ಮುಖ್ಯ ಕಾರಣ ಈ ಬಾರಿ ಚುನಾವಣೆ ಜಾತಿ ಮತ, ಧರ್ಮ, ಪ್ರಾದೇಶಿಕತೆ ಮತ್ತಿತರ ನಕಾರಾತ್ಮಕ ಅಂಶಗಳನ್ನು ಬಿಟ್ಟು ಅಭಿವೃದ್ಧಿ ಮತ್ತು ಸುಭದ್ರತೆ ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ನಡೆಸಿದ್ದು.
- ನಂಬಿಕೆ, ವಿಶ್ವಾಸದ ಫಲ!
ನಂಬಿಕೆ, ವಿಶ್ವಾಸ, ಪರಿಶ್ರಮ ಮತ್ತು ದೂರದೃಷ್ಟಿ ಇವು ನರೇಂದ್ರ ಮೋದಿ ಅವರ ಗೆಲವಿಗೆ ಮುಖ್ಯ ಕಾರಣ. ಉತ್ತರ ಪ್ರದೇಶದಲ್ಲಿ ಅಮಿತ್ ಶಾ ನಿರ್ವಹಿಸಿದ ಜವಾಬ್ದಾರಿಯನ್ನು ಪ್ರತಿ ರಾಜ್ಯದಲ್ಲೂ ಮೋದಿ ಅವರ ಆಪ್ತರು ನಿರ್ವಹಿಸಿದರು. ಈ ಚುನಾವಣೆಯಲ್ಲಿ ಮೋದಿಯಷ್ಟು ಶ್ರಮಪಟ್ಟವರು ಯಾರೂ ಇಲ್ಲ. ನಿತ್ಯವೂ ಹತ್ತಾರು ಸಭೆಗಳು, ಬಹಿರಂಗ ಸಭೆಗಳು, ಸಮಾಲೋಚನೆ, ಕ್ಷಣವೂ ವ್ಯರ್ಥವಾಗದಂತೆ ಪ್ರಯಾಣ. ಈ ಪರಿಶ್ರಮದ ಫಲ ಫಲಿತಾಂಶದಲ್ಲಿ ವ್ಯಕ್ತವಾಗಿದೆ.
ಗೆಲವಿನ ರೂವಾರಿ
'ಭ್ರಷ್ಟಾಚಾರ ಮುಕ್ತ ಸರ್ಕಾರ, ಉತ್ತಮ ಆರ್ಥಿಕ ನೀತಿ, ರಾಷ್ಟ್ರದ ಸುಭದ್ರತೆ ಹಾಗೂ ಉತ್ತಮ ಬದಲಾವಣೆಗಾಗಿ ನಮ್ಮನ್ನು ಬೆಂಬಲಿಸಿ' ಎಂದು ರಾಷ್ಟ್ರವ್ಯಾಪಿ ನರೇಂದ್ರ ಮೋದಿ ಮಾಡಿದ ಸಕಾರಾತ್ಮಕ ಪ್ರಚಾರಕ್ಕೆ ಜನತೆ ಸ್ಪಂದಿಸಿದ್ದಾರೆ. ಬಿಜೆಪಿ ಗೆಲವಿನ ರಹಸ್ಯವೂ ಸಕಾರಾತ್ಮಕ ಪ್ರಚಾರವೇ ಆಗಿದೆ.
ಇತ್ತ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಇಡೀ ರಾಷ್ಟ್ರವೇ ಗೋಧ್ರಾ ಆಗಿಬಿಡುತ್ತದೆಂಬ ದ್ವೇಷ ಭಾವನೆ ಕೆರಳಿಸುವ ಪ್ರಚಾರ ಮಾಡಿದ ಕಾಂಗ್ರೆಸ್‌ಗೆ ನಕಾರಾತ್ಮಕ ಪ್ರಚಾರವೇ ಮುಳುವಾಗಿದೆ. ಬಿಜೆಪಿಗೆ ನಿರೀಕ್ಷೆ ಮೀರಿ ಗೆಲವು ದಕ್ಕಲು ಮುಖ್ಯ ಕಾರಣ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ದೆಹಲಿ. ಈ ಪೈಕಿ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 59 ಸ್ಥಾನಗಳನ್ನು ಗೆದ್ದಿದೆ. ರಾಜಸ್ಥಾನ, ಗುಜರಾತ್ ಮತ್ತು ದೆಹಲಿ, ಉತ್ತರಾಖಂಡ್ ರಾಜ್ಯಗಳಲ್ಲಿ ಎಲ್ಲಾ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಮಧ್ಯಪ್ರದೇಶದಲ್ಲೂ 29ರ ಪೈಕಿ 27 ಸ್ಥಾನ ಗೆದ್ದಿದೆ. ಇದಲ್ಲದೇ, ಹರ್ಯಾಣ, ಅಸ್ಸಾಂ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರದಲ್ಲೂ ಉತ್ತಮ ಸಾಧನೆ ಮಾಡಿದೆ.
ಕಾಂಗ್ರೆಸ್ ಪತನದ ಹಾದಿ
ಇತ್ತ ಬಿಜೆಪಿ ರೈಸಿನಾ ಹಿಲ್‌ನತ್ತ ದಾಪುಗಾಲು ಹಾಕುತ್ತಿದ್ದರೆ, ಕಾಂಗ್ರೆಸ್ ರೈಸಿನಾ ಹಿನ್‌ನಿಂದ ಕಾಲುಕೀಳಲು ಮೊದಲೇ ಸಿದ್ಧವಾದಂತಿತ್ತು. ಆಡಳಿತ ವಿರೋಧಿ ಅಲೆಯಿಂದ ತತ್ತರಿಸಿದ್ದ ಕಾಂಗ್ರೆಸ್‌ಗೆ ಇಷ್ಟೊಂದು ಹೀನಾಯ ಸೋಲು ಬರಬಹುದೆಂಬ ನಿರೀಕ್ಷೆ ಇರಲಿಲ್ಲ. ಎಲ್ಲಾ ಮಾಧ್ಯಮ ಸಮೀಕ್ಷೆಗಳು ಭವಿಷ್ಯ ನುಡಿದಂತೆ ನೂರರ ಆಜುಬಾಜಿನಲ್ಲಿ ತಮ್ಮ ನೆಲೆ ಕಂಡುಕೊಳ್ಳಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿತ್ತು. ಆಡಳಿತ ವಿರೋಧಿ ಅಲೆಯನ್ನೂ ಮೀರಿ ಸ್ಥಿತಿ ಸುಧಾರಿಸಿಕೊಳ್ಳುವ ಪ್ರಯತ್ನ ಕಾಂಗ್ರೆಸ್‌ನಿಂದ ಆಗಲೇ ಇಲ್ಲ.
ರಾಹುಲ್ ಗಾಂಧಿ ಅವರ ಅನನುಭವ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ರಾಹುಲ್ ಕಾರ್ಯವೈಖರಿ, ವ್ಯವಸ್ಥಿತ ರೀತಿಯಲ್ಲಿ ಪ್ರಚಾರ, ಸಭೆ, ಸಮಾರಂಭ ನಡೆಸಲು ವಿಫಲವಾದದ್ದು, ಎಐಸಿಸಿ ಏರಿಗೆ ಎಳೆದರೆ, ಪಿಸಿಸಿಗಳು ನೀರಿಗೆ ಎಳೆದಂತೆ ಸಮನ್ವಯದ ಕೊರತೆ ಕೊನೆ ಕ್ಷಣದಲ್ಲೂ ಇತ್ತು. ಹೀಗಾಗಿಯೇ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲೇ ತನ್ನ ನೆಲೆ ಕಳೆದುಕೊಂಡಿದೆ. ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಮುಂಚೂಣಿಯಲ್ಲಿಟ್ಟಿದ್ದರಿಂದ ಜನತೆಗೂ ಆಯ್ಕೆಗೆ ಅವಕಾಶ ಸಿಕ್ಕಿತು. ಅನನುಭವಿ ರಾಹುಲ್ ಗಾಂಧಿ ಮತ್ತು ಅನುಭವಿ ನರೇಂದ್ರ ಮೋದಿ. ಇಬ್ಬರಲ್ಲಿ ಅನುಭವಿಯನ್ನೇ ಜನತೆ ಆಯ್ಕೆ ಮಾಡಿಕೊಂಡಿದ್ದಾರೆ.
ವಿದೇಶಿ ಮಾಧ್ಯಮಗಳಲ್ಲಿ ಮೆಚ್ಚುಗೆಯ ಮಳೆ
ಬಿಜೆಪಿಗೆ ಸ್ಪಷ್ಟ ಬಹುಮತ ಗಳಿಸಿ ಕೊಟ್ಟಿರುವ ನರೇಂದ್ರ ಮೋದಿ ಅವರಿಗೆ ವಿದೇಶಿ ಮಾಧ್ಯಮಗಳಿಂದಲೂ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಭಾರತ ಮೋದಿ ಬೆನ್ನಿಗೆ ನಿಂತಿರುವುದರಿಂದ ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಳ್ಳಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದ್ದರೆ, ಮೋದಿ ಮೂಲಕ ನವಯುಗದ ಆರಂಭಕ್ಕೆ ಬಿಜೆಪಿ ನಾಂದಿ ಹಾಡಿದೆ ಎಂದು ಪಾಕಿಸ್ತಾನ 'ಡಾನ್' ಬಣ್ಣಿಸಿದೆ. ಭಾರತದಲ್ಲಿ ಅಧಿಕಾರ ಬದಲಾವಣೆ ಪರ್ವ ಎಂದಿರುವುದು ಅಮೆರಿಕದ ದಿ ವರ್ಲ್ಡ್ ಪೋಸ್ಟ್. ಇಂಗ್ಲೆಂಡ್‌ನ ಡೈಲಿಮೇಲ್, ದಿ ಗಾರ್ಡಿಯನ್ ಮೊದಲಾದ ಪತ್ರಿಕೆಗಳೂ ಬಿಜೆಪಿ ಗೆಲುವಿನಲ್ಲಿ ಮೋದಿ ಪಾತ್ರವನ್ನು ಶ್ಲಾಘಿಸಿವೆ.
ಬಿಎಸ್‌ಪಿ ಆನೆ, ನಾ ಕಾಣೆ!
ಮಾಯಾವತಿಯ ಆನೆಯನ್ನು ಹುಡುಕಿ ಕೊಡಿ. ಹೀಗಂತ ಉತ್ತರ ಪ್ರದೇಶದ ಜನ ಹೇಳಿಕೊಂಡು ತಿರುಗುತ್ತಿದ್ದಾರೆ. ಪ್ರತಿ ಲೋಕಸಭಾ ಚುನಾವಣೆ ಬಳಿಕ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಲೇ ಬಂದಿದ್ದ ಬಿಎಸ್ಪಿ ಈ ಬಾರಿ ಮೋದಿ ಅಲೆ ಎದುರು ಹೇಳಹೆಸರಿಲ್ಲದಂತಾಗಿದೆ. ಉತ್ತರಪ್ರದೇಶದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಈ ಬಾರಿ ಮಾಯಾಗೆ ಸಾಧ್ಯವಾಗಲಿಲ್ಲ. 15ನೇ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷಗಳ ಪೈಕಿ ಬಿಎಸ್‌ಪಿ ನಾಲ್ಕನೇ ಸ್ಥಾನ ಇತ್ತು. ಉತ್ತರ ಪ್ರದೇಶದಲ್ಲಿ 2009ರ ಲೋಕಸಭಾ ಚುನಾವಣೆಯಲ್ಲಿ ದ್ವಿತೀಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಮಾತ್ರ ಸುಳಿವಿಲ್ಲದೆ 'ಮಾಯ'ವಾಗಿದೆ!
25 ವರ್ಷ ಬಳಿಕ ಸ್ವಂತ ಬಲದ ಸರ್ಕಾರ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ದೇಶ ಕಂಡ ಅತಿ ದೊಡ್ಡ ರಾಜಕೀಯ ನೇತಾರರಾಗಿ ನರೇಂದ್ರ ಮೋದಿ ರೂಪುಗೊಂಡಿದ್ದಾರೆ. ಇಂದಿರಾ ಅವರಷ್ಟೇ ವಿವಾದಾತ್ಮಕ ವ್ಯಕ್ತಿತ್ವದ ಮೋದಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಬದಿಗೊತ್ತಿ ಪ್ರಧಾನಿ ಹುದ್ದೆಯಲ್ಲಿ ಕೂರುತ್ತಿದ್ದಾರೆ. ಈಗ ಬಿಜೆಪಿ ಮೋದಿ ನಾಯಕತ್ವದಲ್ಲೇ ಏಕಾಂಗಿಯಾಗಿ ಬಹುಮತ ಪಡೆದಿದೆ. ರಾಷ್ಟ್ರೀಯ ಪಕ್ಷವೊಂದು ಕೇಂದ್ರದಲ್ಲಿ ಸ್ವಂತಬಲದ ಮೇಲೆ ಅಧಿಕಾರಕ್ಕೇರುತ್ತಿರುವುದು 25 ವರ್ಷಗಳಲ್ಲಿ ಇದೇ ಮೊದಲು. ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ 1989ರಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ 404 ಸ್ಥಾನಗಳನ್ನು ಗಳಿಸುವ ಮೂಲಕ ಸ್ವಂತ ಬಲದ ಮೇಲೆ ಅಧಿಕಾರಕ್ಕೇರಿತ್ತು. ಅದಾದ ಬಳಿಕ ಪಕ್ಷವೊಂದು ಸ್ವಂತ ಬಲದ ಮೇಲೆ ಅಧಿಕಾರಕ್ಕೇರುತ್ತಿರುವುದು ಇದೇ ಮೊದಲು.
ಆಂಧ್ರದಲ್ಲೂ ಕಾಂಗ್ರೆಸ್ ತರಗಲೆ
ಹೈದರಾಬಾದ್: ಜೂನ್ 2ರಂದು ಅಸ್ತಿತ್ವಕ್ಕೆ ಬರಲಿರುವ ತೆಲಂಗಾಣ, ಸೀಮಾಂಧ್ರ ರಾಜ್ಯಗಳ ವಿಧಾನಸಭೆಗಳಿಗೆ ನಡೆದಿದ್ದ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಭಾರಿ ಏಟು. ತೆಲಂಗಾಣದಲ್ಲಿ ಪ್ರತ್ಯೇಕ ರಾಜ್ಯ ರಚನೆ ಘೋಷಣೆ ಲಾಭ ತಂದಿಲ್ಲ, ಸೀಮಾಂಧ್ರದಲ್ಲಿ ರಾಜ್ಯ ವಿಭಜನೆ ಆಕ್ರೋಶಕ್ಕೆ ಪಕ್ಷ ತತ್ತರಿಸಿದೆ. ಟಿಆರ್‌ಎಸ್ ತೆಲಂಗಾಣದಲ್ಲಿ, ಸೀಮಾಂಧ್ರದಲ್ಲಿ ಟಿಡಿಪಿ ಜಯಭೇರಿ ಬಾರಿಸಿವೆ. ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಲ್ಲಿ ಟಿಆರ್‌ಎಸ್ 63ರಲ್ಲಿ ಜಯ ಗಳಿಸಿದ್ದು, ಕೆ.ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾಗುವುದು ಖಚಿತ. 22 ಸ್ಥಾನಗಳೊಂದಿಗೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಅಲಂಕರಿಸಿದೆ. 175 ಸದಸ್ಯ ಬಲದ ಸೀಮಾಂಧ್ರ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ 105 ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ವೈಎಸ್‌ಆರ್ ಕಾಂಗ್ರೆಸ್ 68, ಇತರರು 2 ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ದು ಇಲ್ಲಿ ಶೂನ್ಯ ಸಾಧನೆ.
ಮುಜರಾಯಿ ಸಚಿವರ ಅಧಿಕಾರಕ್ಕೆ ಕುತ್ತು ಮತ್ತೊಮ್ಮೆ ಸಾಬೀತು!
ರಾಜ್ಯದಲ್ಲಿ ಮುಜರಾಯಿ ಖಾತೆ ವಹಿಸಿಕೊಂಡ ಸಚಿವರು ಹೆಚ್ಚು ದಿನ ಅಧಿಕಾರದಲ್ಲಿರುವುದಿಲ್ಲ ಎಂಬ ನಂಬಿಕೆ 'ಮೂಢತನ'ದ್ದಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಸಂಸದರಾಗಿ ಆಯ್ಕೆಗೊಳ್ಳುವ ಮೂಲಕ ಸಕ್ಕರೆ ಮತ್ತು ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತಗೊಂಡಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಖಾತೆ ಮೂರು ಜನ ಸಚಿವ ಕೈ ಬದಲಾಗಿತ್ತು. ಈ ಖಾತೆ ವಹಿಸಿಕೊಂಡ ಕೃಷ್ಣಯ್ಯ ಶೆಟ್ಟಿ ಅಧಿಕಾರ ಕಳೆದುಕೊಂಡರೆ, ಡಾ. ವಿ.ಎಸ್.ಆಚಾರ್ಯರ ಹಠಾತ್ ನಿಧನದಿಂದ ಈ ಖಾತೆ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಲಭಿಸಿತ್ತು.
ಅಚ್ಛೇ ದಿನ್ ಆನೇವಾಲೇ ಹೈ: ಮೋದಿ
'ಅಚ್ಛೇ ದಿನ್...' ಎಂದು ಮಾತು ಆರಂಭಿಸಿದರು ಮೋದಿ. 'ಆನೇವಾಲೇ ಹೈ' ರ್ಯಾಲಿಯಲ್ಲಿ ಸೇರಿದ್ದ ಜನತೆ ದನಿ ಸೇರಿಸಿತು.
ವಡೋದರಾದ ಜನತೆಗೆ ಧನ್ಯವಾದ ಸಲ್ಲಿಸಲು ಕರೆದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದರು. ನಾನು ವಡೋದರಾಕ್ಕಾಗಿ ಮೀಸಲಿಟ್ಟ ಸಮಯ ಅತ್ಯಲ್ಪ. ಅಷ್ಟರಲ್ಲೇ ನೀವು ಇಷ್ಟೊಂದು ಪ್ರೀತಿಯನ್ನು ಹಾಗೂ ಮತವನ್ನು ನೀಡಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ನರೇಂದ್ರ ಮೋದಿ ಆಗಿದ್ದೀರಿ ಎಂದರು.
ವಡೋದರಾದ ಜನತೆ 5.7 ಲಕ್ಷ ಅಂತರದಿಂದ ನನ್ನನ್ನು ಗೆಲ್ಲಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಈ ತೀರ್ಪು ದೇಶವನ್ನು ಮುಂದಕ್ಕೊಯ್ಯಲಿದೆ ಹಾಗೂ ದೇಶದ ಕನಸುಗಳನ್ನು ನನಸಾಗಿಸಲಿದೆ. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಜನತೆ ನಮ್ಮ ಮೇಲೆ ನಂಬಿಕೆಯಿಟ್ಟು ನಮಗೆ ಸ್ಪಷ್ಟವಾದ ಬಹುಮತವನ್ನು ಕೊಟ್ಟಿದೆ. ಎಲ್ಲರ ಭಾಗಿದಾರಿಕೆ, ಎಲ್ಲರ ವಿಕಾಸದಲ್ಲಿ ನಮಗೆ ವಿಶ್ವಾಸ. ಈಗ ಎಲ್ಲರನ್ನೂ ಜತೆಗೆ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ ಎಂದು ಅವರು ಹೇಳಿದರು.
ನಾನೊಬ್ಬ ನಂಬರ್ ವನ್ ಕೂಲಿ. ಮುಂದಿನ 60 ತಿಂಗಳಲ್ಲಿ ನನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ಜನತೆಗಾಗಿ ಮೀಸಲಿಡಲಿದ್ದೇನೆ. ಈ ದೇಶಕ್ಕಾಗಿ ಜೀವ ತ್ಯಜಿಸುವ ಗೌರವ ನಮಗೆ ಸಿಕ್ಕಿಲ್ಲ. ಆದರೆ ಸುರಾಜ್ಯ ಸ್ಥಾಪನೆಗಾಗಿ ಜೀವಿಸುವ ಅವಕಾಶ ಸಿಕ್ಕಿದೆ. ಸರಕಾರ ಯಾವುದೇ ಪಕ್ಷದ್ದಲ್ಲ. ಅದು ದೇಶದ ಪ್ರತಿ ಜನತೆಯದ್ದು ಎಂದರು.
ಈ ಸಲ ಗೆದ್ದ ನಾಯಕರೆಲ್ಲ ಕಾಂಗ್ರೆಸ್‌ನವರಿರಲಿ ಬಿಜೆಪಿಯವರಿರಲಿ, ಸ್ವತಂತ್ರ ಭಾರತದಲ್ಲಿ ಜನಿಸಿದವರು. ನಮ್ಮ ಪಕ್ಷ ದೇಶಪ್ರೇಮದಲ್ಲಿ ನಂಬಿಕೆಯಿಟ್ಟಿದೆ ಹಾಗೂ ಜನರ ಆಶೀರ್ವಾದ ಪಡೆದಿದೆ. ಗುಜರಾತ್‌ನಲ್ಲಿ ಎಲ್ಲ 26 ಸ್ಥಾನ ಗೆಲ್ಲುತ್ತೇವೆಂದು ಮುನ್ನೋಟ ಹೇಳಿದಾಗ ನಕ್ಕವರಿದ್ದರು ಎಂದರು.
ಇದೇ ಸಂದರ್ಭ ಅವರು ವಾರಾಣಸಿ ಜನತೆಗೂ ಧನ್ಯವಾದ ಹೇಳಿದರು. ತಾನು ರ್ಯಾಲಿ ನಡೆಸಬಾರದೆಂದು ಚುನಾವಣಾ ಆಯೋಗ ಹೇಳಿತು. ಆದ್ದರಿಂದ ನನಗೆ ವಾರಾಣಸಿಯ ಜನತೆಯ ಜತೆ ಮಾತನಾಡುವ ಗೌರವ ದೊರೆಯಲಿಲ್ಲ. ಆದರೆ ವಾರಾಣಸಿಯ ಜನತೆ ನನ್ನ ಮೌನದ ಮೇಲೆ ನಂಬಿಕೆಯಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಧನ್ಯವಾದ ಎಂದಿದ್ದಾರೆ ಮೋದಿ.
ಪ್ರಬಲ ಪ್ರಾದೇಶಿಕ ಪಕ್ಷ 2014 2009
ಎಎಪಿ 04 -
ಜೆಡಿಎಸ್ 2 3
ಬಿಜೆಡಿ 19 14
ಆರ್‌ಜೆಡಿ 4 4
ಟಿಡಿಪಿ 16 6
ಆರ್‌ಎಲ್‌ಡಿ 0 5
ಟಿಎಂಸಿ 34 19
ಅಕಾಲಿ ದಳ 4 4
ಎಐಎಡಿಎಂಕೆ 37 9
ಡಿಎಂಕೆ 00 18
ಬಿಎಸ್‌ಪಿ 00 21
ಎಸ್‌ಪಿ 5 23
ಜೆಎಂಎಂ 2 2
ಎನ್‌ಸಿ 0 3
ಶಿವಸೇನೆ 18 11
ಜೆಕೆಎನ್‌ಸಿ 0 3
ಟಿಆರ್‌ಎಸ್ 10 2
ಐಎನ್‌ಡಿ 0 9
ಜೆಡಿಯು 2 20
ಜೆಎಂಎಂ 2 2
ಎನ್‌ಸಿಪಿ 4 8
ಎಐಎಂಐಎಂ 0 1
ಎಸ್‌ಡಿಎಫ್ 0 1
-ಕನ್ನಡಪ್ರಭ ಪ್ರತಿನಿಧಿಯಿಂದ