ನಿಮ್ಮ ಬದಲಿಸೋದಿಲ್ಲ ಸಿಎಂ ಸಿದ್ದುಗೆ ಭರವಸೆ
'ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ವದಂತಿ. ಗಾಳಿ ಸುದ್ದಿಗೆ ಕಿವಿಗೊಡಬೇಡಿ..
ನವದೆಹಲಿ: 'ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ವದಂತಿ. ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಉತ್ತಮ ಆಡಳಿತ ಮಾಡುತ್ತಿದ್ದೀರಿ, ಮುಂದುವರಿಸಿಕೊಂಡು ಹೋಗಿ....'
ಇದು ಮುಖ್ಯಮಂತ್ರಿ ಸಿದ್ದರಾ ಮಯ್ಯಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೀಡಿದ ಭರವಸೆ. ಇಲ್ಲಿ ಸೋನಿಯಾ ಭೇಟಿ ಸಂದರ್ಭ, 'ರಾಜ್ಯದಲ್ಲಿ ನಾಯಕತ್ವ ಬದನಾವಣೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ನಿಮ್ಮ ಮೇಲೆ ಭರವಸೆ ಇದೆ' ಎಂದಿದ್ದಾರೆಂದು ಮೂಲಗಳು ತಿಳಿಸಿವೆ.
ಸೋನಿಯಾಗೆ ಮನವಿ: ಚುನಾವಣೆಯಲ್ಲಿ ಪಕ್ಷದ ಸಾಧನೆ ಏನೇ ಇರಲಿ, ಪಕ್ಷವನ್ನು ನೀವೇ ಮುನ್ನಡೆಸಬೇಕು ಎಂದು ಸೋನಿಯಾಗೆ ಸಿದ್ದು ಮನವಿ ಮಾಡಿದ್ದಾರೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ, ಮುಂದೆಯೂ ನೀವೇ ಪಕ್ಷವನ್ನು ಮುನ್ನಡೆಸಿ ಎಂದು ಕೋರಿದ್ದಾರೆಂದು ಮೂಲಗಳು ತಿಳಿಸಿವೆ.
ಸಚಿವರಾದ ಕೆ.ಜೆ. ಜಾರ್ಜ್, ಮಹದೇವಪ್ಪ, ಕೆಪಿಪಿಸಿ ಅಧ್ಯಕ್ಷ ಡಾ.ಪರಮೇಶ್ವರ ಜತೆ ಸೋನಿಯಾ ಭೇಟಿ ಮಾಡಿದ ಸಿದ್ದು, ಚುನಾವಣೆಯಲ್ಲಿ ಪಕ್ಷದ ಗೆಲವು- ಸೋಲುಗಳ ಬಗ್ಗೆ ವಿವರಣೆ ನೀಡಿದರು.
ಹೆಚ್ಚಿದ ಗಳಿಕೆ: 18 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೆವು. ಆದರೆ, 9ರಲ್ಲಿ ಗೆದ್ದಿದ್ದೇವೆ. ಆಡಳಿತ ವಿರೋಧಿ ಅಲೆ ರಾಜ್ಯಕ್ಕೂ ತಟ್ಟಿದೆ. ಹೀಗಾಗಿ 9 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅತ್ಪಲ್ಪ ಮತಗಳ ಅಂತರದಲ್ಲಿ ಸೋತಿದ್ದೇವೆ. ಒಟ್ಟಾರೆ ಮತಗಳಿಕೆ ಹೆಚ್ಚಿದೆ ಎಂದಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಮತಪ್ರಮಾಣವೂ ಹೆಚ್ಚಿದೆ. ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ನಿರೀಕ್ಷಿಸಿ ಸ್ಥಾನ ಬಂದಿಲ್ಲ ಎಂದರು.