ರಾಜಿನಾಮೆ ವಾಪಸ್: ನಿತೀಶ್ಗೆ ಜೆಡಿಯು ಶಾಸಕರ ದುಂಬಾಲು
'ನಿತೀಶ್ ಕುಮಾರ್ ಅವರೇ ನಮ್ಮ ನಾಯಕ. ಅವರಿಗಿಂತ...
ಪಟನಾ: 'ನಿತೀಶ್ ಕುಮಾರ್ ಅವರೇ ನಮ್ಮ ನಾಯಕ. ಅವರಿಗಿಂತ ಹೊರತಾದ ನಾಯಕ ನಮಗೆ ಒಪ್ಪಿಗೆಯಿಲ್ಲ'
- ಇದು ಜೆಡಿಯು ಶಾಸಕರ ಒಕ್ಕೊರಲ ಅಭಿಮತ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿರುವ ನಿತೀಶ್ಕುಮಾರ್ ತಮ್ಮ ರಾಜಿನಾಮೆ ನಿರ್ಧಾರವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಒಂದು ದಿನದ ಗಡುವು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಜೆಡಿಯು ಮುಖಂಡರ ಮತ್ತು ಶಾಸಕರ ಸಭೆ ಪಟನಾದಲ್ಲಿ ನಡೆಯಲಿದೆ. ಚುನಾವಣೆಯಲ್ಲಿ ಜೆಡಿಯು ಕೇವಲ 2 ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ನಿತೀಶ್ಕುಮಾರ್ ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ದಿನವಿಡೀ ಸಭೆ: ನಿತೀಶ್ ರಾಜಿನಾಮೆ ಹಿನ್ನೆಲೆಯಲ್ಲಿ ಪಟನಾದಲ್ಲಿ ದಿನವಿಡೀ ಬಿರುಸಿನ ರಾಜಕೀಯ ಬೆಳವಣಿಗೆ ನಡೆಯಿತು. ಸಂಜೆ ವೇಳೆಗೆ ನಿತೀಶ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಜೆಡಿಯು ಶಾಸಕರು 'ನಿತೀಶ್ ಅವರೇ ನಮ್ಮ ನಾಯಕ. ಅವರು ರಾಜಿನಾಮೆ ನಿರ್ಧಾರ ಮರು ಪರಿಶೀಲನೆ ನಡೆಸಬೇಕು' ಎಂಬ ನಿರ್ಧಾರ ಕೈಗೊಂಡರು. ನಿತೀಶ್ ನಿವಾಸದಲ್ಲಿ ನಡೆದ ಸಭೆಯಲ್ಲಿ ನಾಯಕರು ಅವರ ಹೆಸರನ್ನೇ ಪ್ರಸ್ತಾಪಿಸಿದರು.
ಹೊಸ ಮೈತ್ರಿಕೂಟ?: ಜೆಡಿಯು ಬೆಳವಣಿಗೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಹೊಸ ಜಾತ್ಯತೀತ ಮೈತ್ರಿಕೂಟ ರಚನೆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದಕ್ಕೆ ಪೂರಕವಾಗಿ ಶರದ್ ಯಾದವ್ ಮತ್ತು ಲಾಲು ನಡುವೆ ಮಾತುಕತೆ ನಡೆದಿದೆ. ನಿತೀಶ್ಗೆ ಬೆಂಬಲ ನೀಡುವ ಬಗ್ಗೆ ಪ್ರಸ್ತಾಪಿಸಿದಾಗ 'ಅದು ಅವರ ಪಕ್ಷದ ವಿಚಾರ' ಎಂದಷ್ಟೇ ಹೇಳಿದರು ಲಾಲು. ಹೊಸ ಜಾತ್ಯತೀತ ಮೈತ್ರಿಕೂಟ ರಚನೆ ಬಗ್ಗೆ ಪ್ರಯತ್ನ ಮುಂದುವರಿಯಲಿದೆ ಎಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ ಮೂವರು ಆರ್ಜೆಡಿ ಶಾಸಕರು ಜೆಡಿಯುಗೆ ಸೇರ್ಪಡೆಯಾಗಿದ್ದಾರೆ.
ವಿಸರ್ಜನೆ ಬೇಡ: ಬಿಹಾರ ವಿಧಾನಸಭೆ ವಿಸರ್ಜನೆ ಮಾಡುವುದು ಬೇಡ ಎಂದು ಕೇಂದ್ರ ಗೃಹ ಸಚಿವಾಲಯ ರಾಜ್ಯಪಾಲರಿಗೆ ಸೂಚನೆ ನೀಡಿದೆ.
ಸರ್ಕಾರ ವಜಾ ಮಾಡಿ: ಬಿಜೆಪಿ ಒತ್ತಾಯ
ನಿತೀಶ್ ಸರ್ಕಾರ ವಜಾ ಮಾಡಿ ಎಂದು ಬಿಜೆಪಿ ಒತ್ತಾಯಿಸಿದೆ. ಮಾಜಿ ಉಪಮುಖ್ಯಮಂತ್ರಿ ಸುಶೀಲ್ಕುಮಾರ್ ಮೋದಿ ನೇತೃತ್ವದ ನಿಯೋಗ ರಾಜ್ಯಪಾಲ ಡಿ.ವೈ.ಪಾಟೀಲ್ ಅವರನ್ನು ಭೇಟಿಯಾಗಿ ಭಾನುವಾರ ಸಂಜೆ ಮನವಿ ಸಲ್ಲಿಸಿತು. ಸರ್ಕಾರ ಮುಂದುವರಿಸುವ ನಿಟ್ಟಿನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ. ನಿತೀಶ್ಕುಮಾರ್ಗೆ ಬೆಂಬಲ ನೀಡುವ ಶಾಸಕರನ್ನು ರಾಜ್ಯಪಾಲರ ಮುಂದೆ ಪರೇಡ್ ಮಾಡಿಸುವಂತೆ ಮುಖ್ಯಮಂತ್ರಿಗೆ ಸೂಚಿಸಿ ಎಂದೂ ಬಿಜೆಪಿ ನಿಯೋಗ ಒತ್ತಾಯಿಸಿದೆ.
ನಿತೀಶ್ರದ್ದೂ ನಾಟಕವೇ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನಿರ್ಧಾರ ಪ್ರಕಟಿಸಿದ ನಿತೀಶ್ ಅವರದ್ದು ನಾಟಕವೇ? ಹೌದು ಎನ್ನುತ್ತಿದೆ ಅವರ ಆಪ್ತ ವಲಯ. ಅದಕ್ಕೂ ಕಾರಣಗಳಿವೆ. ಬಿಜೆಪಿ ಜತೆಗೆ ಮೈತ್ರಿ ಕಡಿದುಕೊಳ್ಳುವ ನಿತೀಶ್ಕುಮಾರ್ ನಿರ್ಧಾರ ಹೆಚ್ಚಿನ ಜೆಡಿಯು ನಾಯಕರಿಗೆ ಬೇಕಿರಲಿಲ್ಲ. ಚುನಾವಣೆಯಲ್ಲಿ 2 ಸ್ಥಾನ ಗೆಲ್ಲುತ್ತಿದ್ದಂತೆಯೇ ನಿತೀಶ್ ನಾಯಕತ್ವದ ಬಗ್ಗೆ ಶಾಸಕರಲ್ಲಿಯೇ ಭಿನ್ನಧ್ವನಿಗಳು ಶುರುವಾಯಿತು. ಶಾಸಕ ಜ್ಞಾನೇಂದ್ರ ಸಿಂಗ್ ಗಾಯ್ನು ಮೈತ್ರಿ ಕಡಿದುಕೊಂಡದ್ದರಿಂದಾಗಿಯೇ ಜೆಡಿಯುಗೆ ಹೀನಾಯ ಸೋಲು ಉಂಟಾಯಿತು. ಜತೆಗೆ ಬಿಹಾರ ಕೃಷಿ ಸಚಿವ ಕೃಷಿ ಸಚಿವ ನರೇಂದ್ರ ಸಿಂಗ್ ಮಾಜಿ ಡಿಸಿಎಂ ಸುಶೀಲ್ ಮೋದಿ ಜತೆಗೆ ಮಾತುಕತೆ ನಡೆಸಿದ್ದರು. ಪಕ್ಷದಲ್ಲಿ ಭಿನ್ನ ಸುಳಿಗಳು ಉಂಟಾಗುವ ಸೂಚನೆ ಸಿಗುತ್ತಿದ್ದಂತೆಯೇ ನಿತೀಶ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು.