ಅಂಜನಾದ್ರಿ ಬೆಟ್ಟಕ್ಕೆ ಜಶೋದಾ ಬೆನ್
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಹನುಮನುದಯಿಸಿದ...
ಗಂಗಾವತಿ/ಹೊಸಪೇಟೆ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಹನುಮನುದಯಿಸಿದ ನಾಡಾದ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಸೇರಿದಂತೆ ಹಂಪಿಯ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಉತ್ತರ ಭಾರತದವರಿಗೆ ಪವಿತ್ರ ಕ್ಷೇತ್ರವಾಗಿರುವ ಅಂಜನಾದ್ರಿ ಬೆಟ್ಟಕ್ಕೆ ಹರಕೆ ತೀರಿಸುವ ಸಲುವಾಗಿ ಆಗಮಿಸಿದ ಜಶೋದಾ ಬೆನ್, ಇಲ್ಲಿ ಪೂಜೆ ಸಲ್ಲಿಸಿ, ಬಳಿಕ ಪಂಪಾ ಸರೋವರದ ಬಳಿ ಇರುವ ಐತಿಹಾಸಿಕ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ಚುನಾವಣೆಗೂ ಮುನ್ನ ಬೇಡಿಕೊಂಡಂತೆ ವಿವಿಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಹಮದಾಬಾದ್ನಿಂದ ವಿಶೇಷ ರೈಲಿನಲ್ಲಿ ಹೊಸಪೇಟೆಗೆ ಆಗಮಿಸಿ, ಅಲ್ಲಿಂದ ಖಾಸಗಿ ಪ್ರವಾಸಿ ಬಸ್ಗಳಲ್ಲಿ ಇಲ್ಲಿನ ಧಾರ್ಮಿಕ ಸ್ಥಳಗಳಿಗೆ ಸುತ್ತಾಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಜನರು ಪ್ರವಾಸದ ವೇಳೆಯಲ್ಲಿ ಇದ್ದರೆಂದು ಹೇಳಲಾಗಿದೆ. ಅಂಜನಾದ್ರಿ ಬೆಟ್ಟಕ್ಕೆ ಐತಿಹಾಸಿಕ ಹಿನ್ನೆಲೆಯ ಜತೆಗೆ ಧಾರ್ಮಿಕ ಹಿನ್ನೆಲೆಯೂ ಇರುವುದರಿಂದ ವಿಶೇಷವಾಗಿ ಗುಜರಾತ್ ರಾಜ್ಯದ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.