ಅಮೆರಿಕ ಮಗ್ಗಲು ಮುರಿವರೆ ಮೋದಿ
ಅಮೆರಿಕ ಪ್ರವಾಸಕ್ಕೆ ನಿರುತ್ಸಾಹ ತೋರಿಸುವ ಮೂಲಕ ತನಗೆ ವೀಸಾ ನಿರಾಕರಿಸಿದ್ದ ದೇಶದ ಮೇಲೆ ಮುಯ್ಯಿ ತೀರಿಸಿಕೊಳ್ಳುವ....
ನವದೆಹಲಿ: ಅಮೆರಿಕ ಪ್ರವಾಸಕ್ಕೆ ನಿರುತ್ಸಾಹ ತೋರಿಸುವ ಮೂಲಕ ತನಗೆ ವೀಸಾ ನಿರಾಕರಿಸಿದ್ದ ದೇಶದ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆಯೇ ಮೋದಿ?
ಆಪ್ತರ ಪ್ರಕಾರ, 'ಹೌದು, ಅಮೆರಿಕ ಪ್ರವಾಸದ ಬಗ್ಗೆ ಅವರಿಗೆ ಅಂತಹ ಉತ್ಸಾಹವೇನೂ ಇಲ್ಲ'. ವಾಷಿಂಗ್ಟನ್‌ಗೆ ಭೇಟಿ ನೀಡುವಂತೆ ಅಮೆರಿಕ ಅಧಿಕೃತ ಆಹ್ವಾನ ನೀಡಿದ್ದರೂ ಮೋದಿ ಆ ಕುರಿತು ದೊಡ್ಡಣ್ಣನಿಗೆ ಖುಷಿ ನೀಡುವ ಪ್ರತಿಕ್ರಿಯೆಯನ್ನೇನೂ ನೀಡಿಲ್ಲ. ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆ ಅಧಿವೇಶನಕ್ಕೆ ಮೊದಲು ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಚೀನಾ, ರಷ್ಯಾ, ಜಪಾನ್ ಜತೆಗಿನ ಬಾಂಧವ್ಯ ವೃದ್ಧಿಗೆ ಮೋದಿ ಉತ್ಸುಕರಾಗಿದ್ದಾರೆ. ಅಮೆರಿಕಕ್ಕೆ ನಂತರದ ಸ್ಥಾನ ನೀಡುವುದು ಭಾವಿ ಪ್ರಧಾನಿಯ ಇರಾದೆ.
2002ರ ಗುಜರಾತ್ ಗಲಭೆಗಳಿಗೆ ಮೋದಿ ಹೊಣೆ ಎಂದಿದ್ದ ಅಮೆರಿಕ, ಅವರಿಗೆ ವೀಸಾ ನೀಡಲು ನಿರಾಕರಿಸಿತ್ತು. ಈ ಬಾರಿ ಮೋದಿ ಅಲೆ ಗ್ರಹಿಸಿದ ಅಮೆರಿಕ, ಅವರೊಂದಿಗಿನ ಸಂಬಂಧಕ್ಕೆ ತೇಪೆ ಹಚ್ಚುವ ಪ್ರಯತ್ನ ಆರಂಭಿಸಿತ್ತು. ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಚುನಾವಣೆಗೆ ಮುನ್ನ ಭೇಟಿ ಆಗಿದ್ದಾಗಲೂ ಮೋದಿ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದರು ಎಂದು ಹೇಳಲಾಗಿದೆ.
ಮೋದಿ ಬರುತ್ತಾರೆ: ಮೂನ್ ಆಶಯ
ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ನರೇಂದ್ರ ಮೋದಿ ಭಾಗವಹಿಸುವ ಕುರಿತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ.
'ಮಹಾಧಿವೇಶನ ಮತ್ತು ಅದರಲ್ಲಿಯೇ ತಾವು ಆಯೋಜಿಸಿರುವ ಜಾಗತಿಕ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಯಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರು ಅತೀವ ಆಸೆ ಇರಿಸಿಕೊಂಡಿದ್ದಾರೆ' ಎಂದು ಮೂನ್ ಅವರ ವಕ್ತಾರರು ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದಾಗ ಮೂನ್ ನೀಡಿದ ಅಭಿನಂದನೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಮೋದಿ, 'ವಿಶ್ವಸಂಸ್ಥೆ ಜತೆಗಿನ ಸುದೀರ್ಘ ಸಹಭಾಗಿತ್ವವನ್ನು ಭಾರತ ಗೌರವಿಸುತ್ತದೆ. ವಿಶ್ವಸಂಸ್ಥೆಯಲ್ಲಿ ನಮ್ಮ ಸಕ್ರಿಯ ಸಹಭಾಗಿತ್ವ ಮುಂದುವರಿಸುತ್ತೇವೆ ಮತ್ತು ವಿಶ್ವಶಾಂತಿ, ಅಭಿವೃದ್ಧಿಗಾಗಿ ಎಲ್ಲಾ ದೇಶಗಳೊಂದಿಗೂ ಕೆಲಸ ಮಾಡಲು ಇಚ್ಛಿಸುತ್ತೇವೆ' ಎಂದಿದ್ದರು.