ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊಲೆ ಆರೋಪಿ ಹುಡುಕಿಕೊಟ್ಟ ಕನ್ನಡಪ್ರಭ!

Mainashree
Updated On : 21 May 2014, 9:19 am

ಬಳ್ಳಾರಿ: ಮಹಿಳೆಯೊಬ್ಬಳ ಕೊಲೆ ಮಾಡಿ ಸಿಕ್ಕಿ ಪೊಲೀಸರ ಅತಿಥಿಯಾಗಿರುವ ಕಾವಿಧಾರಿ ಈಗ ಮತ್ತೊಂದು ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿ ಸುಳಿವಿಲ್ಲದೆ ಗೊಂದಲಕ್ಕೀಡಾಗಿದ್ದ ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾಗಿದ್ದು 'ಕನ್ನಡಪ್ರಭ' ಪ್ರಕಟಿಸಿದ ವರದಿ ಎನ್ನುವುದು ವಿಶೇಷ.
ಏ.3ರಂದು ಕುಡಿತಿನಿಯಲ್ಲಿ ನಾಗಮ್ಮ ಮಧ್ಯವಯಸ್ಕ ಮಹಿಳೆ ಕೊಲೆಗೆ ಸಂಬಂಧಿಸಿ ಹಂಪಿಯಲ್ಲಿ ಆರೋಪಿ ಕಾವಿಧಾರಿ ಹನುಮಂತಪ್ಪನನ್ನು ಬಂಧಿಸಲಾಗಿತ್ತು. ಈ ಸಂಬಂಧ ಮೇ 21ರಂದು 'ಕನ್ನಡಪ್ರಭ'ದಲ್ಲಿ 'ಕಾವಿಧಾರಿ ಮಾಡಿದ ಕೊಲೆ ಮೊಬೈಲ್‌ನಿಂದ ಬಹಿರಂಗ' ಎಂಬ ವಿಶೇಷ ವರದಿ ಪ್ರಕಟವಾಗಿತ್ತು.
 ಹನುಮಂತಪ್ಪನ ಭಾವಚಿತ್ರವನ್ನು ಪತ್ರಿಕೆಯಲ್ಲಿ ನೋಡಿದ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಈ ಹಿಂದೆ ತಮ್ಮ ಠಾಣೆ ವ್ಯಾಪ್ತಿಯ ತ್ಯಾಗದಾಳ್‌ನಲ್ಲಿ ಮಹಿಳೆಯೊಬ್ಬಳ ಕೊಲೆ ಮಾಡಿ ಪರಾರಿಯಾದಾತ ಇದೇ ಕಳ್ಳಸ್ವಾಮೀಜಿ ಎನ್ನುವುದು ಬಹಿರಂಗವಾಗಿದೆ.
ಸಖ್ಯ ಬೆಳೆಸಿ ಕೊಲ್ತಾನೆ: ಕುಡಿತಿನಿಯಲ್ಲಿ ನಾಗಮ್ಮಳನ್ನು ಕೊಲೆ ಮಾಡಿದ್ದ ಹನುಮಂತಪ್ಪ ಸ್ವಾಮೀಜಿ ಮೇ 31, 2013ರಂದು ಕೂಡ್ಲಿಗಿ ತಾಲೂಕಿನ ತ್ಯಾಗದಾಳ್ ಗ್ರಾಮದ ಚಿತ್ತಮ್ಮ (55) ಎಂಬಾಕೆಯನ್ನೂ ಹತ್ಯೆ ಮಾಡಿದ್ದ. ಡಿ. ಮಲ್ಲಾಪುರದ ಚಿತ್ತಮ್ಮ  ತ್ಯಾಗದಾಳ್ ಸಮೀಪದ ತಮ್ಮ ಜಮೀನಿನಲ್ಲಿ ಸತ್ಸಂಗ ಆಶ್ರಮ ಕಟ್ಟಿಕೊಂಡಿದ್ದರು. ಹನುಮಂತಪ್ಪ ಆಗಾಗ ಬಂದು ವಾರಗಟ್ಟಲೆ ಇದ್ದು ಹೋಗುತ್ತಿದ್ದ. ಮೇ 31ರಂದು ಆಶ್ರಮಕ್ಕೆ ಬಂದಿದ್ದ ಹನುಮಂತಪ್ಪ ಚಿತ್ತಮ್ಮಗೆ ಹೊಡೆದು, ಕೈ ಕಾಲು ತಿರುವಿ, ಕೊಲೆ ಮಾಡಿ, ಓಲೆ ಮತ್ತು ಪೆಟ್ಟಿಗೆಯಲ್ಲಿದ್ದ 1,500 ನಗದು ದೋಚಿ ಪರಾರಿಯಾಗಿದ್ದ. ಈ ಸಂಗತಿ ಚಿತ್ತಮ್ಮನ ಪುತ್ರಿ ಮಲ್ಲಮ್ಮನ ಗಮನಕ್ಕೆ ಬಂದಿತ್ತು.
ಪೊಲೀಸರಿಗೆ ಚಳ್ಳೆಹಣ್ಣು: ಚಿತ್ತಮ್ಮಳ ಕೊಲೆ ಪ್ರಕರಣ ಗುಡೇಕೋಟೆ ಠಾಣೆಯಲ್ಲಿ ದಾಖಲಾಗಿತ್ತು. ಆದರೆ, ಸ್ವಾಮೀಜಿಯನ್ನು ಮಲ್ಲಮ್ಮ ಮಾತ್ರ ನೋಡಿದ್ದಳು. ಗುಡೇಕೋಟೆ ಪಿಎಸ್‌ಐ ನವೀನ್‌ಗೌಡ ಆರೋಪಿ ಸ್ವಾಮೀಜಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಆದರೆ, ಮೇ 21ರಂದು ಪತ್ರಿಕೆಯಲ್ಲಿ ಕಂಡ ಹನುಮಂತಪ್ಪನ ಫೋಟೋ ಪೊಲೀಸರಿಗೆ ಅನಾಯಾಸವಾಗಿ ಪ್ರಕರಣ ಭೇದಿಸಲು ನೆರವಾಗಿದೆ.
 ಗುಡೇಕೋಟೆ ಪಿಎಸ್‌ಐ ನವೀನಗೌಡ ಅವರು ಕುಡಿತಿನಿ ಪಿಎಸ್‌ಐ ವಾಸಕುಮಾರ್‌ರನ್ನು ಸಂಪರ್ಕಿಸಿ ಸ್ವಾಮಿ ಹನುಮಂತಪ್ಪನ ಫೊಟೋ ಪಡೆದುಕೊಂಡಿದ್ದಾರೆ. ಸ್ವಾಮೀಜಿಯನ್ನು ನೋಡಿದ್ದ ಚಿತ್ತಮ್ಮಳ ಮಗಳು ಮಲ್ಲಮ್ಮಗೆ ಫೊಟೋ ತೋರಿಸಿದಾಗ ಆರೋಪಿಯನ್ನು ತಕ್ಷಣ ಗುರುತಿಸಿದ್ದಾಳೆ. ಈಗ ಪೊಲೀಸರು ಆರೋಪಿ ಹನುಮಂತಪ್ಪನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement