ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಿಎಂಒದಲ್ಲೂ ಇನ್ನು ಗುಜರಾತಿ ಕಂಪು ಧೋಕ್ಲಾ, ಖಾಕ್ರಾ ಖಾದ್ಯಗಳದ್ದೇ ಘಮ

'ಪ್ರಧಾನಿ ಕಚೇರಿಯಲ್ಲೂ ಗುಜರಾತಿ ಮಾತಾಡುತ್ತೇನೆ...

Mainashree
Updated On : 22 May 2014, 10:42 am

ಅಹ್ಮದಾಬಾದ್: 'ಪ್ರಧಾನಿ ಕಚೇರಿಯಲ್ಲೂ ಗುಜರಾತಿ ಮಾತಾಡುತ್ತೇನೆ ಹಾಗೂ ಗುಜರಾತಿ ಖಾದ್ಯಗಳಾದ ಧೋಕ್ಲಾ, ಖಾಕ್ರಾಗಳನ್ನೇ ತಿನ್ನುತ್ತೇನೆ' ಎನ್ನುವ ಮೂಲಕ ಗುಜರಾತ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿ ಮಾಡಿದ ತಮ್ಮ ಕೊನೇ ಭಾಷಣದಲ್ಲಿ ನರೇಂದ್ರ ಮೋದಿ, ಎಲ್ಲೇ ಹೋದರೂ ತಮ್ಮ ಮೂಲ ಸಂಸ್ಕೃತಿ ಮರೆಯುವುದಿಲ್ಲ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರಿಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ, 'ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವಾಗ ನನ್ನಿಂದ ಯಾವುದೇ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ...' ಎಂದು ವಿನಮ್ರವಾಗಿ ಕೇಳಿಕೊಂಡರು.
ಅಲ್ಲಿ ಮೋದಿ ಮಂತ್ರಿ ಮಂಡಲದ ಸಚಿವರು, ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಶಂಕರ್ ಸಿಂಗ್ ವಾಘೇಲಾ ಸೇರಿದಂತೆ ಎಲ್ಲ ಪಕ್ಷದ ಮುಖಂಡರು ಸೇರಿದ್ದರು. ಗುಜರಾತ್‌ನಿಂದ ಪ್ರಧಾನಿ ಪಟ್ಟಕ್ಕೇರುತ್ತಿರುವ ಎರಡನೇ ವ್ಯಕ್ತಿಯಾಗಿ ರಾಜ್ಯಕ್ಕೆ ಮತ್ತೊಂದು ಗೌರವ ತಂದ ಮೋದಿಯವರಿಗೆ ಎಲ್ಲ  ಶಾಸಕರು ಪಕ್ಷಭೇದ ಮರೆತು ಆತ್ಮೀಯವಾಗಿ ಶುಭ ಕೋರಿದರು.
ಧನ್ಯವಾದ: ತಮಗೆ ಸಿಕ್ಕ ಹೃತ್ಪೂರ್ವಕ ಶುಭಾಶಯಗಳಿಗೆ ಮನತುಂಬಿದುಂಬಿ ಕೃತಜ್ಞತೆ ಸಲ್ಲಿಸಿದ ಮೋದಿ, ತಮಗೆ ಸಭೆಯನ್ನುದ್ದೇಶಿಸಿ ಮಾತನಾಡಲು ಅವಕಾಶ ಸಿಕ್ಕಾಗ ಗದ್ಗದಿತರಾದರು. ಕಣ್ಣಲ್ಲಿ ಆನಂದಭಾಷ್ಪ ತುಂಬಿಕೊಂಡೆ ಮೈಕ್‌ನ ಮುಂದೆ ನಿಂತ ಅವರು, ಮೊದಲಿಗೆ ತಮಗೆ ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.  ನಂತರ, ತಮ್ಮ ಮಾತುಗಳನ್ನು ಮುಂದುವರಿಸಿ, ಗುಜರಾತ್‌ನದ್ದು ಮಾದರಿ ಅಭಿವೃದ್ಧಿಯೆಂಬಂತೆ ದೇಶದ ಉದ್ದಗಲಕ್ಕೂ ಜನ ಚರ್ಚಿಸುತ್ತಿದ್ದಾರೆ. ರಾಜ್ಯದ ಈ ಸಾಧನೆ ಕೇವಲ ನನ್ನೊಬ್ಬನಿಂದ ಆದದ್ದಲ್ಲ. ಇದು ನನಗೆ ಬೆಂಬಲವಿತ್ತ ಎಲ್ಲರಿಗೂ, ತಪ್ಪು ಮಾಡಿದಾಗ ಟೀಕಿಸಿ, ಎಚ್ಚೆತ್ತುಕೊಳ್ಳುವಂತೆ ಮಾಡಿದ ವಿರೋಧಪಕ್ಷಗಳಿಗೂ ಈ ಶ್ರೇಯಸ್ಸು ಸಲ್ಲುತ್ತದೆ ಎಂದರು. ಗುಜರಾತನ್ನು ಅಭಿವೃದ್ಧಿ ಪಥದಲ್ಲೇ ಮುಂದುವರಿಸಿದರೆ, ಅದು ನನಗೆ ನೀಡುವ ಗೌರವ ಎಂದು ಭಾವಿಸುತ್ತೇನೆ ಎಂದರು.

ಆನಂದಿಬೆನ್ ಇಂದು ಪ್ರಮಾಣ
ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಆನಂದಿ ಬೆನ್ ಪಟೇಲ್ ಅವರು, ಮೇ22ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ ಮೋದಿ ಮಂತ್ರಿ ಮಂಡಲದಲ್ಲಿ ಬೆನ್, ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ, ಆನಂದಿಬೆನ್‌ರನ್ನು ನಾಯಕರನ್ನಾಗಿ ಆರಿಸಲಾಯಿತು. ಸಿಎಂ ಪಟ್ಟಕ್ಕೇರಲಿರುವ 73 ವರ್ಷದ ಬೆನ್, ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.


ವಾಘೇಲಾ ಶ್ಲಾಘನೆ
ಮೋದಿ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರತಿಪಕ್ಷದ ನಾಯಕ, ಕಾಂಗ್ರೆಸ್‌ನ ಶಂಕರ್‌ಸಿಂಗ್ ವಾಘೇಲಾ ಅವರು ಮೋದಿಯವರನ್ನು ತಮಾಷೆಯಾಗಿ, ಆದರೆ ಆತ್ಮೀಯವಾಗಿ ಕೆಣಕಿದ್ದು ಗಮನ ಸೆಳೆಯಿತು.  ಮೊರಾರ್ಜಿ ದೇಸಾಯಿ ನಂತರ, ಗುಜರಾತಿ ವ್ಯಕ್ತಿಯೊಬ್ಬರು ಪ್ರಧಾನಿ ಪಟ್ಟಕ್ಕೇರುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮೋದಿಯವರನ್ನು ಇದಕ್ಕಾಗಿ ಅಭಿನಂದಿಸಿದರು. ಅನಂತರ, ತುಸು ವಿಡಂಬನಾತ್ಮಕವಾಗಿಯೇ ಮಾತು ಮುಂದುವರಿಸಿ, ರಾಮಮಂದಿರ ಕಟ್ಟುವುದು ಬಿಜೆಪಿಯ ಕನಸು. ಈಗ ನೀವೇ (ಬಿಜೆಪಿ) ಪ್ರಚಂಡ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದೀರಿ. ಈಗಲಾದರೂ ರಾಮಮಂದಿರ ಕಟ್ಟಿ ಎಂದು ಛೇಡಿಸಿದರು.
ಅಲ್ಲದೇ, ಗುಜರಾತ್ ಸಿಎಂ ಆಗಿದ್ದಾಗ, ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರುತ್ತಾ, ಗುಜರಾತ್‌ಗೆ ಸಾಕಷ್ಟು ಅನುದಾನ ನೀಡುತ್ತಿಲ್ಲ ಎನ್ನುತ್ತಿದ್ದಿರಿ. ಈಗ ನೀವೇ ಪ್ರಧಾನಿಯಾಗುವುದರಿಂದ ಗುಜರಾತ್‌ಗೆ ಎಷ್ಟು ಸಾಧ್ಯವೋ ಅಷ್ಟು ಹಣ ಕೊಡಿ ಎಂದರು.  ಈ ಹಿಂದೆ, ದಾವೂದ್‌ನನ್ನು ಯಾವಾಗ ಬಂಧಿಸುತ್ತೀರಿ ಎಂದು ಯುಪಿಎ ಸರ್ಕಾರವನ್ನು ಕೇಳುತ್ತಿದ್ದ ನೀವು ಈಗ ದಾವೂದ್‌ನನ್ನು ಹಿಡಿದು ತನ್ನಿ ಎನ್ನಲು ಮರೆಯಲಿಲ್ಲ ವಾಘೇಲಾ. ಅತ್ತ, ವಘೇಲಾ ಹೀಗೆ ವಿಡಂಬನೆ ಮಾಡುತ್ತಿದ್ದರೆ, ಮೋದಿ ಮಾತ್ರ ನಸುನಗುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement