ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಟ್ಟಿಂಗ್ ದಂಧೆಗೆ ಮಕ್ಕಳೇ ಟಾರ್ಗೆಟ್!

Mainashree
Updated On : 22 May 2014, 10:34 am

ಐಪಿಎಲ್ ಬೆಟ್ಟಿಂಗ್‌ಗೆ 3 ಮಕ್ಕಳ ಬಲಿ, ಬೆಟ್ಟಿಂಗ್ ಕುಳಗಳ ಬೆದರಿಕೆಗೆ ಸಾವಿನ ಮನೆ ಸೇರುತ್ತಿರುವ ಬಾಲಕರು, ಟಿವಿ ಮುಂದೆ ಕುಳಿತ ಮಕ್ಕಳಿಗೆ ಬುದ್ಧಿ ಹೇಳದ ಪೋಷಕರು


ಹುಬ್ಬಳ್ಳಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಭೂತ ಇದೀಗ ಮೂರನೇ ಬಲಿ ಪಡೆದಿದೆ!
ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ಭೂತಕ್ಕೆ ಮಕ್ಕಳಿಬ್ಬರು ಬಲಿಯಾಗಿರುವ ಘಟನೆ ಇನ್ನೂ ಹಸಿಯಾಗಿರುವಾಗಲೇ ಕೊಪ್ಪಳದಲ್ಲಿ ಯುವಕನೊಬ್ಬ ಕತ್ತು ಕೊಯ್ದುಕೊಂಡು ಸಾವಿಗೆ ಶರಣಾಗಿದ್ದಾನೆ. ಹದಿ ಹರೆಯದವರು ಈ ರೀತಿ ಬೆಟ್ಟಿಂಗ್ ಬೆನ್ನು ಹತ್ತಿ ಸಾವಿನ ಮನೆ ಸೇರುತ್ತಿರುವುದು ಪಾಲಕರಲ್ಲೀಗ ಆತಂಕ ಮೂಡಿಸಿದೆ.
ಹುಬ್ಬಳ್ಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಎಸ್‌ಬಿಐ ಕಾಲನಿಯ 9ನೇ ತರಗತಿಯ ವಿದ್ಯಾರ್ಥಿ ನೇಹಾಲ ಅಶ್ವಿನ್ ಮಿಠಾರೆ ಹಾಗೂ 8ನೇ ತರಗತಿ ವಿದ್ಯಾರ್ಥಿ ಸ್ವರೂಪ ಪ್ರಕಾಶ ರೋಖಡೆ ಸಾಲಿಗೆ ಈಗ ಕೊಪ್ಪಳದ 20ರ ಹರೆಯದ ಯುವಕ ಪ್ರಭು ಬತ್ತಿ ಸೇರಿದ್ದಾರೆ. ಮುಪ್ಪಿನಲ್ಲಿ ತಮಗೆ ಆಸರೆಯಾಗುತ್ತಾರೆಂದು ಕನಸು ಕಂಡಿದ್ದ ಪಾಲಕರಿಗೆ ಈ ಮಕ್ಕಳ ಸಾವು ಬಡಸಿಡಿಲಿನಂತೆ ಬಡಿದಿದೆ.
ಮಕ್ಕಳೇ ಟಾರ್ಗೆಟ್:  ಮಕ್ಕಳಲ್ಲಿರುವ ಕ್ರಿಕೆಟ್ ಹುಚ್ಚು ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುವವರ ಪಾಲಿಗೆ ಹಣ ಮಾಡಿಕೊಳ್ಳಲು ರಹದಾರಿ. ಮಕ್ಕಳಿಂದ ಹಣ ಕೀಳುವುದು ಸರಳವೆಂದರಿತು ಕ್ರಿಕೆಟ್ ಆಸಕ್ತಿಯುಳ್ಳ ಮಕ್ಕಳನ್ನು ಗುರುತಿಸುವ ಐಪಿಎಲ್ ಬೆಟ್ಟಂಗ್ ಕುಳಗಳು ಅವರನ್ನು ಬೆಟ್ಟಿಂಗ್ ದಂಧೆಯತ್ತ ಆಕರ್ಷಿಸುತ್ತಿವೆ. ನಂತರ ಅವರು ಹಣದಾಸೆಗೆ ಮತ್ತೆ ಮತ್ತೆ ಬೆಟ್ಟಿಂಗ್ ಚಟಕ್ಕೆ ಬೀಳುತ್ತಾರೆ. ಅಷ್ಟಕ್ಕೂ ಮಕ್ಕಳಿಗೆ ಬೆಟ್ಟಿಂಗ್ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ತಮಗಿಷ್ಟವಾದ ಆಟಗಾರರಿರುವ ತಂಡದ ಮೇಲೆ ಹಣ ಕಟ್ಟಿ, ಕಳೆದುಕೊಳ್ಳುತ್ತಾರೆ. ಹಣ ಇಲ್ಲದೇ ಹೋದಾಗ ಬೆಟ್ಟಿಂಗ್ ದಂಧೆ ನಡೆಸುವವರ ಬಳಿಯೇ ಸಾಲ ಕೇಳುತ್ತಾರೆ. ಆಮೇಲೆ, ಬೆಟ್ಟಿಂಗ್‌ನ ವಿಷವೃತ್ತದಿಂದ ಹೊರಬರಲಾಗದ ಸ್ಥಿತಿ ತಲುಪುತ್ತಾರೆ.
ಕುಳಗಳಿಂದ ಬೆದರಿಕೆ: ಹಣ ಕಳೆದುಕೊಂಡಿದ್ದಲ್ಲದೆ, ಸಾಲ ಮಾಡಿಕೊಂಡ ಮಕ್ಕಳಿಗೆ ಬೆಟ್ಟಿಂಗ್ ಕುಳಗಳು ಹಣಕ್ಕಾಗಿ ಪೀಡಿಸುತ್ತವೆ. ಸಾಲದ ಹಣ ಕೊಡದೇ ಹೋದರೆ ಪಾಲಕರಿಗೆ ತಿಳಿಸುವುದಾಗಿ, ಹೊಡೆಯುವುದಾಗಿ ಬೆದರಿಕೆ ಹಾಕುತ್ತವೆ. ಇದರಿಂದ ಅನಿವಾರ್ಯವಾಗಿ ಮಕ್ಕಳು ಮನೆಯಲ್ಲಿ ಹಣ ಕದಿಯುವ ಚಾಳಿಗೆ ಬೀಳುತ್ತಾರೆ. ಹಣ ಸಿಗದಿದ್ದರೆ ಅನಿವಾರ್ಯವಾಗಿ ಆತ್ಮಹತ್ಯೆಯಂಥ ದಾರಿ ತುಳಿಯುತ್ತಾರೆ.
ಈಗಾಗಲೇ ಈ ದಂಧೆ ಮೂರು ಬಲಿ ಪಡೆದಿದೆ. ಈ ದಂಧೆಯನ್ನು ಇನ್ನಾದರೂ ಪೊಲೀಸ್ ಇಲಾಖೆ ಬಗ್ಗು ಬಡಿದು, ಮುಗ್ಧ ಮಕ್ಕಳ ರಕ್ಷಣೆ ಮಾಡಬೇಕಿದೆ.ಬೆಂಗಳೂರಿನಲ್ಲಿ ಬೆಟ್ಟಿಂಗ್ ದಂಧೆ
ಬೆಂಗಳೂರಿನಲ್ಲೂ ಐಪಿಎಲ್ ಬೆಟ್ಟಿಂಗ್ ಜಾಲ ತೀವ್ರವಾಗಿದೆ. ಐಪಿಎಲ್ ಆರಂಭವಾದ ಬಳಿಕ ನಗರದ ಹಲವು ಬೆಟ್ಟಿಂಗ್ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. 10 ಲಕ್ಷಕ್ಕೂ ಅಧಿಕ ಹಣ ವಶಪಡಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕಚೇರಿಗಳು, ಕೇಬಲ್ ಕಚೇರಿಗಳು, ಸಣ್ಣ ಪುಟ್ಟ ಅಂಗಡಿಗಳಲ್ಲೂ ಬೆಟ್ಟಿಂಗ್ ದಂಧೆ ನಡೆಯುತ್ತದೆ. ಬೆಟ್‌ಫೇರ್ ಹೆಸರಿನ ವೆಬ್‌ಸೈಟ್ ಮೂಲಕವೂ ನಡೆಯುತ್ತಿದೆ. ಯಾವ ತಂಡದ ಮೇಲೆ ಹಣ ಕಟ್ಟಬಹುದು? ಯಾವ ತಂಡಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನುವ ಬಗ್ಗೆ ವೆಬ್‌ಸೈಟ್ ಮಾಹಿತಿ ನೀಡುತ್ತದೆ. ಆನ್‌ಲೈನ್ ಮೂಲಕ ಬೆಟ್ಟಿಂಗ್ ನಡೆಯುತ್ತಿರುವ ಕಾರಣ ದಂಧೆಯಲ್ಲಿ ತೊಡಗಿರುವವರ ಬಂಧನ ಕಷ್ಟವಾಗುತ್ತಿದೆ. ಬೆಂಗಳೂರಿನ ಬೆಟ್ಟಿಂಗ್ ದಂಧೆ ದೆಹಲಿ, ರಾಜಸ್ಥಾನ, ಮುಂಬೈವರೆಗೂ ಹಬ್ಬಿದ್ದು ಪ್ರಮುಖ ಬುಕ್ಕಿಗಳು ಅಲ್ಲಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹವಾಲ ಮೂಲಕ ಹಣ ಕೈ ಬದಲಾಗುತ್ತಿದೆ.
ಮಕ್ಕಳು ಬೆಟ್ಟಿಂಗ್ ಕೂಪಕ್ಕೆ ಬಲಿ ಬೀಳಲು ಪಾಲಕರೂ ಕಾರಣ. ಅವರು ಮಕ್ಕಳ ಮನಸ್ಥಿತಿ ಅರಿಯುವ ಕೆಲಸ ಮಾಡಬೇಕಿದೆ. ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ಕಂಡು ಬಂದಲ್ಲಿ ತಿದ್ದಿ ತೀಡಬೇಕು. ದುರಂತ ಸಂಭವಿಸುವ ಮೊದಲೇ ಮುಂಜಾಗ್ರತೆ ಕೈಗೊಳ್ಳಬೇಕು. ಮೊಬೈಲ್, ಇಂಟರ್ನೆಟ್‌ಗಳ ಬಳಕೆ ಮೇಲೆ ನಿಗಾ ಇಡಬೇಕು. ಸವಾಲನ್ನು ಎದುರಿಸುವ ಗುಣವನ್ನು ಮಕ್ಕಳಲ್ಲಿ ಬಿತ್ತಬೇಕು.
- ಡಾ. ಆನಂದ ಪಾಂಡುರಂಗಿ, ಮನೋರೋಗ ತಜ್ಞ, ಧಾರವಾಡ  

-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement