ವಸತಿ ಮೇಲೆ ಆಕ್ಷೇಪ ಅಸ್ತ್ರ ದಾಳಿ!
ಬೆಂಗಳೂರು: ರಾಜ್ಯ ಸರ್ಕಾರದ ವಸತಿ ಯೋಜನೆ ಫಲ ಅಕ್ರಮವಾಗಿ ಪಡೆದಿದ್ದರೆ ಎಚ್ಚರ, ಏಕೆಂದರೆ ಇಲಾಖೆ 'ಆಕ್ಷೇಪ' ಅಸ್ತ್ರ ಬಳಸಲು ಮುಂದಾಗಿದೆ. ಅಲ್ಲದೆ ಫಲಾನುಭವಿಗಳ ಆಯ್ಕೆ ವಿಡಿಯೋ ತೆಗೆದು ಪ್ರಚಾರ ಮಾಡುವುದನ್ನೂ ಕಡ್ಡಾಯಗೊಳಿಸಲು ಆಲೋಚಿಸುತ್ತಿದೆ.
ಇದಕ್ಕೆ ಕಾರಣ, ಈವರೆಗೂ ಫಲಾನುಭವಿಗಳ ಆಯ್ಕೆಗೆ ಗ್ರಾಮಸಭೆಗಳೇ ನಡೆಯುತ್ತಿರಲಿಲ್ಲ. ಆಯ್ಕೆಯಾದ ಫಲಾನುಭವಿಗಳ ದೂರು ಬಂದರೆ ಯಾರೂ ಗಮನಿಸುತ್ತಿರಲಿಲ್ಲ. ಇದರಿಂದ ಯೋಜನೆ ಜಾರಿಯಲ್ಲಿ ಅಕ್ರಮ ಹೆಚ್ಚಾಗಿ ಯೋಜನೆ ವೆಚ್ಚವೂ ಹೆಚ್ಚುತ್ತಿತ್ತು. ಇದನ್ನು ತಪ್ಪಿಸಲು ಇಲಾಖೆ ಅನೇಕ ಹೊಸ ಮಾರ್ಗ ಸೂಚಿಗಳನ್ನು ರೂಪಿಸಿದ್ದು, ಜಾರಿಗೊಳಿಸುವ ಸಿದ್ಧತೆಯಲ್ಲಿದೆ.
ಫಲಾನುಭವಿಗಳು ನೆರವು ಪಡೆಯಲು ಎಷ್ಟು ಅರ್ಹರಿದ್ದಾರೆ ಎಂದು ಅಧಿಕಾರಿಗಳ ಮೂಲಕ ಸರ್ವೆ ಮಾಡಿಸಲು ವಸತಿ ಇಲಾಖೆ ಮುಂದಾಗಿದೆ. ಆಯ್ಕೆಯಾದ ಫಲಾನುಭವಿಗಳ ಬಗ್ಗೆ ಸ್ಥಳೀಯರಿಂದ ಆಕ್ಷೇಪ ಆಹ್ವಾನಿಸಲಿದೆ. ಅದನ್ನಾಧರಿಸಿ ಮತ್ತೆ ಪರಿಶೀಲನೆ ನಡೆಸಿ ಅಂತಿಮ ಪಟ್ಟಿ ಹೊರಡಿಸಲಿದೆ. ಆನಂತರವಷ್ಟೇ ಅಂತಿಮ ಪಟ್ಟಿ ಸಿದ್ಧಪಡಿಸಿ ಅವರಿಗೆ ಪ್ರತಿ ಮನೆ ನಿರ್ಮಿಸಲು 1.20ಲಕ್ಷ ನೆರವು ನೀಡಲಿದೆ. ಈ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮಪಂಚಾಯಿತಿಗಳು ಕಡ್ಡಾಯವಾಗಿ ಗ್ರಾಮಸಭೆಗಳನ್ನು ನಡೆಸಬೇಕು. ಅದನ್ನು ವಿಡಿಯೋ ಚಿತ್ರೀಕರಣ ಮಾಡಿ ಇಲಾಖೆ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಬೇಕಿದೆ. ಇದಿಷ್ಟೂ ನಿಯಮಗಳನ್ನೂ ಪಾಲಿಸದಿದ್ದರೆ ವಸತಿ ಯೋಜನೆಯಡಿ ಗ್ರಾಮಪಂಚಾಯಿತಿಗಳಿಗೆ ಯಾವುದೇ ಅನುದಾನ ಬಿಡುಗಡೆ ಆಗುವುದಿಲ್ಲ.
ಹಳೆ ವ್ಯವಸ್ಥೆ ಹೇಗಿತ್ತು?
ಗ್ರಾಮೀಣ ಭಾಗದ ಬಡ ಜನರಿಗೆ ಸೂರು ಒದಗಿಸಲು ಫಲಾನುಭವಿಗಳಿಗೆ ಬಸವ ವಸತಿ, ಮತ್ತು ಇಂದಿರಾ ಅವಾಜ್ ಯೋಜನೆಗಳ ಮೂಲಕ ತಲಾ 1.20ಲಕ್ಷ ನೆರವು ನೀಡುತ್ತಿದೆ. ಇದನ್ನು ಪಡೆಯಲು ಈತನಕ ಜನತೆ ಅರ್ಜಿ ಸಲ್ಲಿಸಿದ್ದರೆ ಸಾಕಿತ್ತು. ಅದನ್ನಾಧರಿಸಿ ಗ್ರಾಮಪಂಚಾಯಿತಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ನಂತರ ಪಿಡಿಒಗಳು ಫಲಾನುಭವಿಗಳ ಮನೆ ನಿರ್ಮಾಣ ಕಾಮಗಾರಿಯ ಚಿತ್ರ ತೆಗೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಬಳಿಕ ನೆರವು ಬಿಡುಗಡೆಯಾಗುತ್ತಿತ್ತು.
ಹೊಸ ವ್ಯವಸ್ಥೆ ಹೇಗಿರುತ್ತೆ?
ಇನ್ನು ಮುಂದೆ, ಮನೆ ನಿರ್ಮಾಣಕ್ಕೆ ನೆರವು ಬೇಕಾದ ಬಡವರು ರಾಜೀವಗಾಂಧಿ ವಸತಿ ನಿಗಮಕ್ಕೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಪಿಡಿಒಗಳು ಅರ್ಜಿದಾರರ ಮನೆಗಳಿಗೆ ತೆರಳಿ ಪರಿಶೀಲಿಸುತ್ತಾರೆ. ಎಲ್ಲ ಅರ್ಜಿಗಳನ್ನೂ ಅಳೆದು ತೂಗಿ ಫಲಾನುಭವಿಗಳ ಕರಡು ಪಟ್ಟಿ ಸಿದ್ಧಪಡಿಸುತ್ತಾರೆ. ಇದನ್ನಾಧರಿಸಿ ಗ್ರಾಮಪಂಚಾಯಿತಿ ಅರ್ಜಿದಾರರನ್ನು ಕರೆದು ಗ್ರಾಮಸಭೆ ನಡೆಸಬೇಕು. ಅಲ್ಲಿ ಕರಡು ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಘೋಷಣೆ ಮಾಡಲಾಗುತ್ತದೆ. ಇದರ ವಿಡಿಯೋ ಚಿತ್ರೀಕರಣ ಕಡ್ಡಾಯ.
ಅಸಮಾಧಾನವಿದ್ದರೆ?
ಫಲಾನುಭವಿಗಳ ಆಯ್ಕೆ ಬಗ್ಗೆ ಅಸಮಾಧಾನವಿದ್ದರೆ ಸಾರ್ವಜನಿಕರು ತಿಂಗಳ ಒಳಗಾಗಿ ಆಕ್ಷೇಪ ಸಲ್ಲಿಸಬೇಕು. ಇದನ್ನು ತಾಲೂಕು ಪಂಚಾಯಿತಿ ಕಾರ್ಯಪಾಲಕ ಅಧಿಕಾರಿ ವಿಚಾರಣೆ ನಡೆಸಿ ಅಂತಿಮ ಪಟ್ಟಿ ಪ್ರಕಟಿಸುತ್ತಾರೆ. ಆನಂತರ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಆಕಾಂಕ್ಷಿಗಳು ಇಲಾಖೆ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಬಹುದು. ಇಲ್ಲವೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಹ ಫಲಾನುಭವಿಗಳ ಆಯ್ಕೆಗೆ ಅನೇಕ ಕಠಿಣ ಕ್ರಮ ಅನುಸರಿಸಲಾಗುತ್ತಿದೆ. ವ್ಯವಸ್ಥೆಯನ್ನು ಪಾರದರ್ಶಕ ಮಾಡುವ ಚಿಂತನೆಯೂ ಇದೆ. ಇದರಿಂದ ಅಕ್ರಮಗಳು ತಪ್ಪುತ್ತದೆ.
-ಬಿರಾದಾರ್, ರಾಜೀವಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿ
ಶಿವಕುಮಾರ್ ಬೆಳ್ಳಿತಟ್ಟೆ