ಸೀಟ್ ಬ್ಲಾಕಿಂಗ್ಗೆ ತಡೆ ಉನ್ನತ ಮಟ್ಟದ ಸಮಿತಿ
-ಕೊನೆಗೂ ಅಕ್ರಮಗಳ ನಿಯಂತ್ರಣಕ್ಕೆ ಮುಂದಾದ ಸರ್ಕಾರ
ಕನ್ನಡಪ್ರಭ ವಾರ್ತೆ, ಬೆಂಗಳೂರು ಮೇ 21
ಸೀಟ್ ಬ್ಲಾಕಿಂಗ್ ನಿಯಂತ್ರಣಕ್ಕೆ ಕೊನೆಗೂ ಮುಂದಾಗಿರುವ ರಾಜ್ಯ ಸರ್ಕಾರ, ಪ್ರವೇಶ ಪ್ರಕ್ರಿಯೆ ಮೇಲುಸ್ತುವಾರಿಗೆ ಉನ್ನತ ಮಟ್ಟದ ಸಮಿತಿ ರಚಿಸಲು ತೀರ್ಮಾನಿಸಿದೆ.
ಕಾಮೆಡ್-ಕೆ ಸೀಟುಗಳನ್ನು ಆಡಳಿತ ಮಂಡಳಿ ಸೀಟುಗಳನ್ನಾಗಿ ಪರಿವರ್ತಿಸುವ ಜಾಲದ ಮೇಲೆ ನಿಗಾ ಇಡಲು ವೈದ್ಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸರೆಂಡರ್ ಮಾಡುವ ಸೀಟು ಹಾಗೂ ಆ ಜಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಬಗ್ಗೆ ಈ ಸಮಿತಿ ಪರಿಶೀಲನೆ ಮಾಡಲಿದೆ. ಸಮಿತಿಯ ಅನುಮತಿ ಸಿಗುವವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಉನ್ನತ ಶಿಕ್ಷಣ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿದ್ದೇನೆ. ಪ್ರತಿ ವರ್ಷ ನಡೆಯುವ ಅಕ್ರಮಕ್ಕೆ ನಿಯಂತ್ರಣ ಹೇರಬೇಕಿದೆ. ಈ ಹಿನ್ನೆಲೆಯಲ್ಲಿ ವೈದ್ಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ಬಾರಿಯ ಪ್ರವೇಶ ಪ್ರಕ್ರಿಯೆಯಲ್ಲಿ ಸರೆಂಡರ್ ಆಗುವ ಸೀಟುಗಳ ಬಗ್ಗೆ ಈ ಸಮಿತಿ ನಿಗಾ ಇಡಲಿದೆ. ಆ ಬಳಿಕದ ಪ್ರವೇಶ ಪ್ರಕ್ರಿಯೆಯನ್ನು ಈ ಸಮಿತಿಯೇ ಅಂತಿಮಗೊಳಿಸಲಿದೆ ಎಂದು ವೈದ್ಯ ಶಿಕ್ಷಣ ರಾಜ್ಯ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ನಡೆಯುತ್ತಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಕಾಮೆಡ್-ಕೆ ಕೌನ್ಸೆಲಿಂಗ್ ಬಳಿಕ ದೊಡ್ಡ ಪ್ರಮಾಣದಲ್ಲಿ ಸೀಟ್ ಸರೆಂಡರ್ ಆಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಬಳಿ ವರದಿಯೂ ಇದೆ ಎಂದು ಅವರು 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ 9 ಖಾಸಗಿ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು 'ಕನ್ನಡಪ್ರಭ'ವು ವಿಶೇಷ ವರದಿ ಪ್ರಕಟಿಸಿತ್ತು.
ಆದರೆ ಮೂಲ ಒಪ್ಪಂದದಲ್ಲಿರುವ ಅಂಶವನ್ನು ಬದಲಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಸ್ಪಷ್ಟನೆ ಹೊಂದಿಲ್ಲ. ಖಾಲಿ ಉಳಿದಿರುವ ಕಾಮೆಡ್-ಕೆ ಸೀಟು ಅಥವಾ ಸರೆಂಡರ್ ಆಗಿರುವ ಸೀಟುಗಳನ್ನು ಆಡಳಿತ ಮಂಡಳಿ ಸೀಟನ್ನಾಗಿ ಪರಿಗಣಿಸುವುದಿಲ್ಲ ಎಂಬ ಅಂಶ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಆಲೋಚಿಸಿಲ್ಲ.