ಗದಗ ಕಾಲೇಜ್ಗಾಗಿ ಬಿಮ್ಸ್ಗೆ ವರ್ಗದ ಶಿಕ್ಷೆ
ಬೆಳಗಾವಿ: ಇನ್ನೂ ಎಂಟು ವರ್ಷದ ಕೂಸು. ಅದಾಗಲೇ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ದೇಶದ 10 ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿರುವ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯ ಪ್ರಗತಿಯನ್ನು ಚಿವುಟುವ ಯತ್ನವೊಂದು ಸರ್ಕಾರದ ಮಟ್ಟದಲ್ಲೇ ಆರಂಭವಾಗಿದೆ.
ಆರಂಭದ ಬಾಲಗ್ರಹ ನಿವಾರಿಸಿಕೊಂಡು ಅಗತ್ಯ ಪರಿಣಿತ, ನುರಿತ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಇನ್ನೇನು ಎದ್ದು ನಿಲ್ಲಬೇಕು, ಗುಣಮಟ್ಟದ ಸೇವೆ ನೀಡಬೇಕು ಎನ್ನುವಷ್ಟರಲ್ಲೇ ಈ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ನುರಿತ ಪ್ರಾಧ್ಯಾಪಕರು ಸೇರಿದಂತೆ 11 ಜನರನ್ನು ಯಾವುದೇ ಮುನ್ಸೂಚನೆ ಇಲ್ಲದೆ, ಬದಲಿ ವ್ಯವಸ್ಥೆಯನ್ನೂ ಮಾಡದೇ ಗದಗದ ವೈದ್ಯಕೀಯ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ.
ಈ ವರ್ಗಾವಣೆಗೆ ನಿರ್ದಿಷ್ಟ ಕಾರಣವೇನೆಂದು ಶೋಧಿಸಿದಾಗ, ಶೀಘ್ರವೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ (ಎಂಸಿಐ)ದ ತಂಡವೊಂದು ಗದಗ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯ, ತರಬೇತಿ, ಸಿಬ್ಬಂದಿ ವರ್ಗದ ಪರಿಣಿತಿ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಕಾಲೇಜಿನ ಮಾನ್ಯತೆ, ಗ್ರೇಡ್, ಇನ್ಟೇಕ್ ಮತ್ತಿತರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದು, ನುರಿತ ವೈದ್ಯರು, ಉಪನ್ಯಾಸಕರ ಕೊರತೆಯಿಂದ ಬಳಲುತ್ತಿರುವ ಗದಗ ಕಾಲೇಜಿಗೆ ಎಂಸಿಐ ಮಾನ್ಯತೆ ಮತ್ತಿತರ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಬೆಳಗಾವಿ ಕಾಲೇಜಿಗೆ ತೊಂದರೆಯಾದರೂ ಇಲ್ಲಿನ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆದಿದೆ. ಇದು ಮೊದಲ ಕಂತಾಗಿದ್ದು ಶೀಘ್ರವೇ ಇನ್ನಷ್ಟು ಮಂದಿ ವೈದ್ಯರು, ಪ್ರಾಧ್ಯಾಪಕರು ಹಾಗೂ ಪ್ರಯೋಗಾಲಯ ತಜ್ಞರು ಮತ್ತಿತರ ಸಿಬ್ಬಂದಿ ವರ್ಗಾವಣೆಯೂ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಬೆಳಗಾವಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಜೊತೆಗೆ ಜಿಲ್ಲಾ ಆಸ್ಪತ್ರೆಯೂ ಇದ್ದು, ಪ್ರತಿನಿತ್ಯ ಇಲ್ಲಿ 2 ಸಾವಿರಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ತಜ್ಞ ವೈದ್ಯರ ವರ್ಗಾವಣೆಯಿಂದ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ರೋಗಿಗಳಿಗೂ ತೊಂದರೆ ಉಂಟಾಗಲಿದೆ. ಅದರಲ್ಲೂ ಮುಖ್ಯವಾಗಿ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಉಮದಿ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಹಾವಣ್ಣವರ ಅವರ ವರ್ಗಾವಣೆಯಿಂದ ಆಸ್ಪತ್ರೆಯ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಇವರಿಬ್ಬರ ಜೊತೆಗೆ ಡಾ. ನಾಗಲೀಕರ, ಡಾ.ಎಂ.ಎಸ್. ಕುಲಕರ್ಣಿ ಸೇರಿದಂತೆ ಒಟ್ಟು 11 ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಗಿದೆ.
ಅಗತ್ಯ ಸಂದರ್ಭದಲ್ಲಿ ಹೊಸ ಸಿಬ್ಬಂದ್ನಿ ನೇಮಕಕ್ಕೆ ಅವಕಾಶವಿದೆ. ಅದರ ಜೊತೆಯಲ್ಲಿ ನಿವೃತ್ತ ಉಪನ್ಯಾಸಕರನ್ನು ನೇಮಿಸಿಕೊಂಡು ಅವರಿಂದ ಪಾಠ, ಉಪನ್ಯಾಸ ಮಾಡಿಸಿಕೊಳ್ಳಬಹುದು. ಆದರೂ ಬಿಮ್ಸ್ನಿಂದ ನುರಿತ ವೈದ್ಯರ ವರ್ಗಾವಣೆ ಮಾತ್ರ ಆಶ್ಚರ್ಯ ತಂದಿದೆ. ವೈದ್ಯಕೀಯ ಶಿಕ್ಷಣ ಸಚಿವರು ಈ ವರ್ಗಾವಣೆ ತಾತ್ಕಾಲಿಕ ಎಂದು ಹೇಳಿದ್ದಾರೆ. ಆದರೂ ಇದು ವರ್ಗಾವಣೆಯಾಗಿದ್ದರಿಂದ ತಾತ್ಕಾಲಿಕವಾಗದು. ತಾತ್ಕಾಲಿಕವೆಂದಾದರೆ ಡೆಪ್ಯುಟೇಶನ್ ಮಾಡಲಾಗುತ್ತಿತ್ತು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು 2005-06 ರಲ್ಲಿ ಮಂಜೂರಾಗಿದ್ದು, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರ ಮುತುವರ್ಜಿಯಿಂದಾಗಿ ಒಂದೇ ವರ್ಷದಲ್ಲಿ ಕಾರ್ಯಾರಂಭ ಮಾಡಿತ್ತು. ಕೇವಲ ಆರು ವರ್ಷದಲ್ಲಿ ಇದು ದೇಶದ ಅತ್ಯುತ್ತಮ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಎಂದು ಮಾನ್ಯತೆ ಗಳಿಸಿದ್ದಲ್ಲದೆ 2012-13 ರಲ್ಲಿ 9 ನೇ ಸ್ಥಾನ ಪಡೆದಿದೆ. ಈ ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆಯ ಜೊತೆ ಹೊಂದಾಣಿಕೆ ಹೊಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ಸರಾಸರಿ 1500-2000 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಬೆಂಗಳೂರು ಬಿಟ್ಟರೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಒಳ ರೋಗಿಗಳು ದಾಖಲಾಗುತ್ತಿದ್ದಾರೆ. ಈ ಕಾಲೇಜಿನಲ್ಲಿ ಸಧ್ಯ 30 ಕ್ಕೂ ಹೆಚ್ಚು ವಿಭಾಗಗಳಿವೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವಿದ್ದು, ಶೀಘ್ರದಲ್ಲೇ ಎಂಆರ್ಐ ಸ್ಕ್ಯಾನಿಂಗ್ ವಿಭಾಗ ಆರಂಭವಾಗಲಿದೆ. ಆಗ ಸಿಬ್ಬಂದಿಯ ಕೊರತೆ ಇನ್ನಷ್ಟು ಕಾಡಲಿದೆ.
ಯಾವುದೇ ಮೆಡಿಕಲ್ ಕಾಲೇಜುಗಳಿಗೂ ತೊಂದರೆ ಮಾಡುವ ಉದ್ದೇಶವಿಲ್ಲ. ಆದರೆ ಸಿಬ್ಬಂದಿ ಕೊರತೆಯಿರುವ ಸ್ಥಳಗಳಲ್ಲಿ ತಾತ್ಕಾಲಿಕ ವರ್ಗಾವಣೆ ಮಾಡಲಾಗಿದೆ. ಆದಷ್ಟು ಬೇಗನೆ ಬೆಳಗಾವಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಸಮಸ್ಯೆ ಬಗೆಹರಿಸಲಾಗುವುದು. ಇದೆಲ್ಲವೂ ತಾತ್ಕಾಲಿಕ.
- ಡಾ.ಶರಣ ಪ್ರಕಾಶ ಪಾಟೀಲ, ವೈದ್ಯಕೀಯ ವಿಜ್ಞಾನ ಸಚಿವ
ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಿನ 15 ದಿನದಲ್ಲಿ ಸಮಸ್ಯೆ ಪರಿಹರಿಸುವ ನಿರೀಕ್ಷೆ ಇದೆ. ಸಿಬ್ಬಂದಿಗಳ ವರ್ಗಾವಣೆ ಆಡಳಿತಾತ್ಮಕ ಪ್ರಕ್ರಿಯೆ. ಇದರಿಂದ ಕಾಲೇಜು, ಆಸ್ಪತ್ರೆಗೆ ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.
-ಡಾ.ರಾಮಯ್ಯ, ಬಿಮ್ಸ್ ನಿರ್ದೇಶಕ
ರಾಯಣ್ಣ ಆರ್.ಸಿ.