ನೌಕಾನೆಲೆಯಲ್ಲಿ ಉದ್ಯೋಗಕ್ಕೆ ಒತ್ತಾಯಿಸಿ ಆತ್ಮದಹನಕ್ಕೆ ಯತ್ನ
ಕಾರವಾರ: ಸೀಬರ್ಡ್ ನಿರಾಶ್ರಿತರಿಗೆ, ಸ್ಥಳಿಯರಿಗೆ ನೌಕಾನೆಲೆಯಲ್ಲಿ ಉದ್ಯೋಗ ನೀಡುವಂತೆ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ಇಲ್ಲಿನ ಅರ್ಗಾ ಸೀಬರ್ಡ ಗೇಟ್ ಎದುರು ಸಾವಿರಾರು ನಿರಾಶ್ರಿತರು ಪ್ರತಿಭಟನೆ ನಡೆಸಿದರು. ಎಲ್ಲಾ ದ್ವಾರಗಳ ಎದುರು ಪ್ರತಿಭಟನೆ ನಡೆಯುತ್ತಿದ್ದುದರಿಂದ ನೌಕಾನೆಲೆ ಸಿಬ್ಬಂದಿಗೆ ಸಂಚಾರಕ್ಕೆ ಪ್ರತಿಭಟನಾಕಾರರು ಅವಕಾಶ ಮಾಡಿಕೊಡಲಿಲ್ಲ. ಸಂದೇಶ ದುರ್ಗಾಕರ್ ಎಂಬಾತ ಹಠಾತ್ತಾಗಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ. ಆತನನ್ನು ತಡೆದು ನೀರು ಸುರಿದರು. ಇದರಿಂದ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಪ್ರತಿಭಟನೆ ಆರಂಭವಾದ ಕೆಲ ಹೊತ್ತಿಗೆ ಸ್ಥಳೀಯ ಸೀಬರ್ಡ್ ನೌಕರನೊಬ್ಬ ಬೈಕ್ ತೆಗೆದುಕೊಂಡು ಒಳಗೆ ಹೋಗಲು ಪ್ರಯತ್ನಿಸಿದಾಗ ಪ್ರತಿಭಟನಾಕಾರರು ಆತನನ್ನು ಹಿಡಿದು ಥಳಿಸಿ ಬೈಕನ್ನು ನೆಲಕ್ಕೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.