ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪೊಲೀಸರ ನೇಮಕ ಪ್ರಕ್ರಿಯೆ ಅಂತರ್ಜಾಲದಲ್ಲಿ ನೇರ ಪ್ರಸಾರ

Mainashree
Updated On : 22 May 2014, 9:50 am

ಚಿಕ್ಕಮಗಳೂರು: ಕಾಸು ಕೊಟ್ಟರೆ ಪರೀಕ್ಷೆಯಲ್ಲಿ, ಸಂದರ್ಶನದಲ್ಲೂ ಪಾಸು. ಸರ್ಕಾರಿ ನೌಕರಿ ಗ್ಯಾರಂಟಿ!
- ಹೀಗೆಂದು ಹೇಳುವ ಕಾಲ ಒಂದಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಅಂತರ್ಜಾಲ ವ್ಯವಸ್ಥೆ ಜಾರಿಗೆ ಬಂದ ನಂತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ನೇಮಕ ವಿವರವನ್ನು ಸಂಬಂಧಿತ ಇಲಾಖೆಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಈ ವ್ಯವಸ್ಥೆ ರಾಜ್ಯದ ಪೊಲೀಸ್ ಇಲಾಖೆಯಲ್ಲೂ ಈಗ ಜಾರಿಗೆ ಬರುತ್ತಿದೆ.
ಪರೀಕ್ಷೆಯೂ...: ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ ಪ್ರಥಮದಲ್ಲಿ ಸಹಿಷ್ಣುತೆ ಹಾಗೂ ದೇಹದಾರ್ಢ್ಯ ಪರೀಕ್ಷೆ ನಡೆಯಲಿವೆ. ಈ ಸಂದರ್ಭದಲ್ಲಿ ಕಾಸು ಕೊಟ್ಟವರು, ಶಿಫಾರಸು ಮಾಡಿಸಿದವರು, ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆಂಬ ಮಾತು ಸಹಜವಾಗಿ ಕೇಳಿ ಬರುತ್ತದೆ. ಅದರಲ್ಲೂ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಈ ರೀತಿಯ ಆರೋಪ ಮಾಡುತ್ತಲೇ ಇರುತ್ತಾರೆ.
ಸಾರ್ವಜನಿಕರಲ್ಲಿ ಈ ಮಾತುಗಳು ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಮಾಡುತ್ತದೆ. ಅದರಲ್ಲೂ ಪೊಲೀಸ್ ಇಲಾಖೆ ಬಗ್ಗೆ ಏನೇ ಅಪಪ್ರಚಾರ ಮಾಡಿದರೂ ಜನರು ಅದನ್ನು ಬಹುಬೇಗ ನಂಬುತ್ತಾರೆ. ಆದರೆ, ಈ ರೀತಿಯ ಅಪಪ್ರಚಾರಕ್ಕೆ ಆಸ್ಪದ ಆಗಬಾರದೆಂಬ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಹುದ್ದೆಗಳ ಭರ್ತಿಗೆ  ಹಾಜರಾಗುವ ಅಭ್ಯರ್ಥಿಗಳ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆಯ ಪೂರ್ಣ ಮಾಹಿತಿಯನ್ನು ಅಂತರ್ಜಾಲಕ್ಕೆ ಅಳವಡಿಸಿದೆ. ರಾಜ್ಯದಲ್ಲೇ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಈ ಪ್ರಯತ್ನ ನಡೆಸಲಾಗುತ್ತಿದೆ.
10 ಸಾವಿರ ಅರ್ಜಿ
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 144 ಹುದ್ದೆಗಳಿಗೆ 10 ಸಾವಿರ ಅರ್ಜಿಗಳು ಬಂದಿದ್ದು, ಇಲ್ಲಿನ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಸಹಿಷ್ಣುತೆ ಹಾಗೂ ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದೆ. ಈವರೆಗೆ 5 ಸಾವಿರ ಮಂದಿ ಹಾಜರಾಗಿದ್ದು, 2 ಸಾವಿರ ಮಂದಿ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಮೊದಲ ದಿನದಿಂದಲೇ ನೇಮಕ ಪ್ರಕ್ರಿಯೆಯನ್ನು ಅಂತರ್ಜಾಲದಲ್ಲಿ ಅಳವಡಿಸಲಾಗಿದೆ.
ಏನಿದು ಮಾಹಿತಿ?
ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಮೊದಲನೇ ಹಂತದ ಪರೀಕ್ಷೆಗಳಾದ ರನ್ನಿಂಗ್, ಶಾಟ್‌ಪುಟ್, ಲಾಂಗ್‌ಜಂಪ್, ಹೈಜಂಪ್, ಹೈಟ್, ವೈಟ್ ಪರೀಕ್ಷೆ ನಡೆಯಲಿವೆ. ಈ ಎಲ್ಲಾ ಹಂತದ ಪರೀಕ್ಷೆಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಪರೀಕ್ಷೆಯಲ್ಲಿ ಹಾಜರಾಗಿರುವ ಅಭ್ಯರ್ಥಿಗಳ ಪೋಷಕರು, ಆಯಾ ದಿನಗಳಂದು ಅಂತರ್ಜಾಲದಲ್ಲಿ ಈ ಮಾಹಿತಿಯನ್ನು ನೇರವಾಗಿ ನೋಡಬಹುದು.
ನೇಮಕದಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಹಾಗೂ ಜನರಿಂದ ಕೇಳಿ ಬರುವ ಅನುಮಾನ ದೂರ ಮಾಡುವ ಉದ್ದೇಶದಿಂದ ನೇಮಕ ಪ್ರಕ್ರಿಯೆಯನ್ನು ಅಂತರ್ಜಾಲದಲ್ಲಿ ಅಳವಡಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಹೇಳಿದ್ದಾರೆ. ರಾಜ್ಯದಲ್ಲೇ ಮೊದಲ ಪ್ರಯತ್ನ ಇದು. ದಕ್ಷಿಣ ಕನ್ನಡದಲ್ಲೂ ಈ ಬಾರಿ ನೇಮಕ ಪ್ರಕ್ರಿಯೆಯನ್ನು ಅಂತರ್ಜಾಲಕ್ಕೆ ಅಳವಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕವನ್ನು ಅಂತರ್ಜಾಲದ ಮೂಲಕ ನೇರ ಪ್ರಸಾರದಲ್ಲಿ ನೋಡಬಹುದು. ಈ ಪ್ರಕ್ರಿಯೆ ನೋಡ ಬಯಸುವವರು www.chikkamagalurpolice.blogspot.in ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್‌ಅನ್ನು ಉಪಯೋಗಿಸಿಕೊಳ್ಳಬಹುದು.
ಟಿ ಆರ್. ಚೇತನ್, ಜಿಲ್ಲಾ ರಕ್ಷಣಾಧಿಕಾರಿಗಳು, ಚಿಕ್ಕಮಗಳೂರು,

ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement