ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ನಿರೀಕ್ಷೆಯಲ್ಲಿ ಅಂಜನಾದ್ರಿ

ರಾಮಾಯಣದ ಐತಿಹ್ಯ ಹೊಂದಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ...

Mainashree
Updated On : 23 May 2014, 1:08 am

ಕೊಪ್ಪಳ: ರಾಮಾಯಣದ ಐತಿಹ್ಯ ಹೊಂದಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಿಷ್ಕಿಂದೆ ನಾಡಿನ ಅಂಜನಾದ್ರಿ ಬೆಟ್ಟಕ್ಕೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆಯೇ?
ಇಲ್ಲಿನ ಅರ್ಚಕರು ಮಾತ್ರ ಹೌದೆನ್ನುತ್ತಿದ್ದಾರೆ. ಇದಕ್ಕಾಗಿ ಈಗಿನಿಂದಲೇ ವಿಶೇಷ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಯಾವಾಗ ಬರುತ್ತಾರೆ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೂ ಅವರ ಆಪ್ತರು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಅಲ್ಲಿನ ಮುಖ್ಯ ಅರ್ಚಕ ವಿದ್ಯಾದಾಸ್ ಖಚಿತಪಡಿಸಿದ್ದಾರೆ. ಆದರೆ, ಅವರೇ ಹೇಳುವಂತೆ ಪ್ರಧಾನಿಯಾಗುತ್ತಿದ್ದಂತೆ ಮೋದಿ ಅಂಜನಾದ್ರಿಗೆ ಆಗಮಿಸಿ, ಇಲ್ಲಿಂದಲೇ ತಮ್ಮ ಕಾರ್ಯಚಟುವಟಿಕೆಗೆ ಚಾಲನೆ ನೀಡುವ ಚಿಂತನೆ ನಡೆದಿದೆ. ಆದರೇ ಇದ್ಯಾವುದೂ ಅಧಿಕೃತವಾಗಿಲ್ಲ. ಮೋದಿ ಪತ್ನಿ ಜಶೋದಾ ಬೆನ್ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರ್ಚಕರು ಹೇಳುವ ಮಾತಿಗೆ ಪುಷ್ಟಿ ಬಂದಿದೆ. ರಾಮಾಯಣದಲ್ಲಿ ರಾಮನಿಗೆ ಬಲ ಬಂದಿದ್ದೇ ಹನುಮನಿಂದ. ರಾಮನ ಶಕ್ತಿಗೆ ಪ್ರೇರಣೆಯಾಗಿದ್ದೇ ಹನುಮಂತನ ಧೈರ್ಯ. ಈ ಹಿನ್ನೆಲೆಯಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ಹನುಮಂತನ ದರ್ಶನ ಪಡೆದು, ವಿಶೇಷ ಅರ್ಚನೆ ಮಾಡಿ, ಮುಂದಡಿ ಇಟ್ಟರೆ ಬೇಡಿದ್ದೆಲ್ಲವೂ ಕೈಗೂಡುತ್ತದೆ ಎನ್ನುವುದು ನಂಬಿಕೆ.
ಶಕ್ತಿ ವರ್ಧನೆಗಾಗಿ ಪೂಜೆ
ಮೋದಿ ಪ್ರಧಾನಿಯಾಗಬೇಕೆಂದು ದೇಶದ ನಾನಾ ಧಾರ್ಮಿಕ ಕ್ಷೇತ್ರಗಳನ್ನು ಸುತ್ತಿದ ಜಶೋದಾ ಬೆನ್ ತಮ್ಮ ಯಾತ್ರೆಯ ಕೊನೆಯ ಪೂಜೆಯನ್ನು ಅಂಜನಾದ್ರಿ ಬೆಟ್ಟದಲ್ಲಿ ನೆರವೇರಿಸಿದ್ದಾರೆ. ಗೆಲುವಿಗಾಗಿ ಶ್ರೀಕೃಷ್ಣ ಭಾಗವತ ಕಥಾ ರೂಪಕ ಹೇಳುವ ವಿಶೇಷ ಪೂಜೆ ಕೈಗೊಂಡು, ಅಹ್ಮದಾಬಾದ್, ಕಾಶಿ, ಜಮ್ಮು-ಕಾಶ್ಮೀರ, ಒಡಿಶಾ, ಪುರಿ, ಕನ್ಯಾಕುಮಾರಿ ಸುತ್ತಿದ ಅವರು, ಗೆದ್ದ ನಂತರ ಅಂಜನಾದ್ರಿ ಬೆಟ್ಟದ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿ ಗಂಟೆಗಳ ಕಾಲ ಪೂಜೆ ನೆರವೇರಿಸಿದ್ದಾರೆ ಎನ್ನುತ್ತಾರೆ ಅರ್ಚಕರು.ಅರ್ಚನೆ ವೇಳೆ ಅವರು ತಮ್ಮ ಪತಿ ಹೆಸರು ಹೇಳಿದ್ದನ್ನು ಪಕ್ಕದಲ್ಲೇ ಇದ್ದವರು ಖಚಿತಪಡಿಸಿದ್ದಾರೆ.
ವಿಶೇಷ ಏನು?
ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಂಜನಾ ದೇವಿ ಇಲ್ಲಿ ವಾಸವಾಗಿದ್ದಳು. ವಾಯುವಿನ ಸಂಗ ಬೆಳೆಸಿ, ಆಕೆಗೆ ಜನಿಸಿದವನೇ ಹನುಮಂತ. ಇದರ ಪ್ರತೀಕವಾಗಿ ಬಾಲ ಹನುಮ, ಅಂಜನಾದೇವಿಯ ಶಿಲ್ಪ ಇರುವ ದೇವಸ್ಥಾನ ಅಂಜನಾದ್ರಿ ಬೆಟ್ಟದ ಮೇಲಿದೆ. ಆನೆಗೊಂದಿಯಿಂದ ಮುನಿರಾಬಾದ್‌ಗೆ ತೆರಳುವ ರಸ್ತೆಯಲ್ಲಿ ಸಾಗುವಾಗ ಬಲಬದಿಯಲ್ಲಿ ಈ ಬೆಟ್ಟವಿದೆ.
ಶಕ್ತಿಯುತ ಭಾರತಕ್ಕಾಗಿ ಪೂಜೆ
ಮೋದಿಗೆ ವಿಶೇಷ ಶಕ್ತಿ ಕರುಣಿಸಬೇಕು ಮತ್ತು ಭಾರತವನ್ನು ಶಕ್ತಿಯುತ ರಾಷ್ಟ್ರವಾಗಿ ಮಾಡಬೇಕೆಂದು ಜಶೋದಾ ಬೆನ್ ವಿಶೇಷ ಶಕ್ತಿಪೂಜೆ ನೆರವೇರಿಸಿದ್ದಾರೆ. ಇದಕ್ಕಾಗಿ ಮೊದಲೇ ಸಿದ್ಧತೆ ಮಾಡಿಕೊಂಡು, ಗುಪ್ತವಾಗಿ ಆಗಮಿಸಿದ್ದರು.
ಇದು ಶಕ್ತಿಕೇಂದ್ರವಾಗಿದ್ದು, ಸ್ಥಳೀಯರಿಗೆ ಇದರ ಮಹತ್ವ ಗೊತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರ ಪೈಕಿ ಶೇ. 90ರಷ್ಟು ಉತ್ತರ ಭಾರತದವರೇ ಆಗಿದ್ದಾರೆ. ಈಗ ನಿಯೋಜಿತ ಪ್ರಧಾನಿ ಜಶೋದಾ ಬೆನ್ ಬಂದು ಶಕ್ತಿಪೂಜೆ ಮಾಡಿ ಹೋಗಿದ್ದಾರೆ. ಪ್ರಧಾನಿಯಾಗುತ್ತಿದ್ದಂತೆ ನರೇಂದ್ರ ಮೋದಿ ಆಗಮಿಸುವ ಸುಳಿವು ಸಿಕ್ಕಿದೆ. ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಇದಿನ್ನೂ ಅಧಿಕೃತವಾಗಿಲ್ಲ.
-ವಿದ್ಯಾದಾಸ್, ಅರ್ಚರ ಅಂಜನಾದ್ರಿ ಬೆಟ್ಟ

ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement