ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ಪ್ರಮಾಣಕ್ಕೆ ಷರೀಫ್ ಉತ್ಸುಕ

ರಾಜತಾಂತ್ರಿಕ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಮೋದಿ ಇಟ್ಟ ಹೆಜ್ಜೆಗೆ ಪಾಕಿಸ್ತಾನವೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ಮೂಲಗಳ ಪ್ರಕಾರ, ನವಾಜ್ ಷರೀಫ್ ಭೇಟಿ ಬಹುತೇಕ ಖಚಿತ.

Mainashree
Updated On : 23 May 2014, 10:25 am

ನವದೆಹಲಿ: ರಾಜತಾಂತ್ರಿಕ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಮೋದಿ ಇಟ್ಟ ಹೆಜ್ಜೆಗೆ ಪಾಕಿಸ್ತಾನವೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.  ಮೂಲಗಳ ಪ್ರಕಾರ, ನವಾಜ್ ಷರೀಫ್  ಭೇಟಿ ಬಹುತೇಕ ಖಚಿತ.
ಬುಧವಾರ ಭಾರತದ ಆಮಂತ್ರಣ ತಲುಪಿಲ್ಲ ಎಂದಿದ್ದ ಪಾಕ್, ಗುರುವಾರ ಕೊಂಚ ಮೃದುವಾಗಿ 'ಆಹ್ವಾನ ತಲುಪಿದೆ. ಇದು ದಿಟ್ಟ ನಡೆ. ಭಾಗವಹಿಸುವ ವಿಚಾರ ಸಮಾಲೋಚಿಸುತ್ತಿದ್ದೇವೆ' ಎಂದಿದೆ.
ಬೆನ್ನಲ್ಲೇ, ಸಾರ್ಕ್ ದೇಶಗಳಿಗೆ ಆಮಂತ್ರಣ ನೀಡಿರುವ ಕ್ರಮಕ್ಕೆ ದೇಶದ ಆಂತರಿಕವಾಗಿ ವಿರೋಧ ವ್ಯಕ್ತವಾಗಿರುವುದು ಗಮನಾರ್ಹ. 'ಭಯೋತ್ಪಾದನೆ ಮತ್ತು ಮಾತುಕತೆ ಜತೆಯಾಗಿ ಸಾಗುವುದಿಲ್ಲ ಎನ್ನುವ ತನ್ನ ನಿಲುವನ್ನು ಬಿಜೆಪಿ ಮರೆತಂತಿದೆ' ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಆಮಂತ್ರಿಸಿರುವುದನ್ನು ತಮಿಳುನಾಡಿನ ಎಲ್ಲ ಪಕ್ಷಗಳೂ ವಿರೋಧಿಸಿವೆ. ಅತ್ತ ಪಾಕಿಸ್ತಾನದಲ್ಲಿಯೂ ಮೋದಿ ಇಟ್ಟಿರುವ ಅನಿರೀಕ್ಷಿತ ನಡೆ ಮಿಶ್ರಭಾವ ಹುಟ್ಟುಹಾಕಿದೆ.
ಶುಕ್ರವಾರ ನಿರ್ಧಾರ: ಭಾರತದ ಆಮಂತ್ರಣ ಕುರಿತಂತೆ ಪಾಕ್ ಶುಕ್ರವಾರ ತೀರ್ಮಾನ ಕೈಗೊಳ್ಳಲಿದೆ. ಖುದ್ದು ಆಸಕ್ತಿ ತೋರಿಸಿರುವ ಷರೀಫ್, ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಕಾರ್ಯದರ್ಶಿಯ ಸಲಹೆ ಬಯಸಿದ್ದಾರೆ. ಕೊನೆಕ್ಷಣದಲ್ಲಿ ಬದಲಾವಣೆಗಳಾದರೆ ಶಿಷ್ಟಾಚಾರ ಪಾಲನೆಗಾಗಿ ಪ್ರಧಾನಿ ಪ್ರತಿನಿಧಿಯೊಬ್ಬರನ್ನು ಕಳುಹಿಸುವ ನಿಟ್ಟಿನಲ್ಲೂ ಚಿಂತನೆ ನಡೆಸುತ್ತಿದೆ.
ಸರ್ಕಾರ ಮತ್ತು ಆಡಳಿತ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿವೆ. ಸೇನಾ ಅಧಿಕಾರಿಗಳು, ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಭಿನ್ನಾಭಿಪ್ರಾಯ: ಈ ವಿಚಾರವಾಗಿ ಪಿಎಂಎಲ್‌ಎನ್ ಮುಖಂಡರಲ್ಲೇ ಭಿನ್ನ ನಿಲುವು ವ್ಯಕ್ತವಾಗಿದೆ. ಆಮಂತ್ರಣ ತಿರಸ್ಕರಿಸಿದರೆ ಸೇನೆಯ ಒತ್ತಡಕ್ಕೆ ಮಣಿದಂತಾಗುತ್ತದೆ, ಒಪ್ಪಿಕೊಂಡರೆ ಪ್ರತಿಭಟನೆಗಳು ಭುಗಿಲೇಳಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದರೆ; ಭಾಗವಹಿಸದೇ ಇದ್ದರೆ ಜಗತ್ತಿಗೇ ಬೇರೆಯದೇ ಸಂದೇಶ ರವಾನೆಯಾಗುತ್ತದೆ ಎನ್ನುವ ವಾದವೂ ವ್ಯಕ್ತವಾಗಿದೆ.

ಷರೀಫ್ ಆಸಕ್ತ
ಸಮಾರಂಭದಲ್ಲಿ ಪಾಲ್ಗೊಳ್ಳುವ ಇರಾದೆಯನ್ನು ಷರೀಫ್ ವ್ಯಕ್ತಪಡಿಸಿದ್ದಾರೆ. ಶಾಂತಿ ಮಾತುಕತೆಗಳಿಗೆ ಚಾಲನೆ ನೀಡುವುದರ ಜತೆಗೆ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧ ಬಲಪಡಿಸಬೇಕು ಎನ್ನುವುದು ಮೋದಿ ಅವರಂತೆಯೇ ಷರೀಫ್ ಅವರ ಬಯಕೆಯೂ ಆಗಿದೆ. ಭಾರತದೊಂದಿಗಿನ ಬಾಂಧವ್ಯ ವೃದ್ಧಿ ಪಕ್ಷದ ನಿಲುವೂ ಆಗಿದೆ ಎಂದು ಎಂಎಲ್‌ಎನ್ ಮುಖಂಡರೊಬ್ಬರು ತಿಳಿಸಿದ್ದಾರೆ.


ತಮಿಳರ ವಿರೋಧ

ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸೆಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿರುವ ತಮಿಳಿನಾಡಿನ ಎಐಎಡಿಎಂಕೆ, ಡಿಎಂಕೆ ಹಾಗೂ ಎನ್‌ಡಿಎ ಮಿತ್ರಪಕ್ಷವಾಗಿರುವ ಎಂಡಿಎಂಕೆ, ಮೋದಿ ತಮಿಳರ ಭಾವನೆಗಳನ್ನು ಪರಿಗಣಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿವೆ. 'ಈ ಕ್ರಮ ಈಗಾಗಲೇ ಭಾವನಾತ್ಮಕವಾಗಿ ತಮಿಳರಿಗೆ ಆಗಿರುವ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ' ಎಂದು ಮುಖ್ಯಮಂತ್ರಿ ಜಯಲಲಿತಾ, 'ತಮಿಳರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿತ್ತು' ಎಂದು ಕರುಣಾನಿಧಿ ಹೇಳಿದ್ದಾರೆ. 'ರಾಜಪಕ್ಸೆ ಹಾಜರಿಯಿಂದ ವಿಶ್ವದಲ್ಲಿನ ತಮಿಳರ ಭಾವನೆಗಳಿಗೆ ಧಕ್ಕೆಯಾಗಲಿದೆ' ಎಂದು ಎಂಡಿಎಂಕೆ ಮುಖ್ಯಸ್ಥ ವೈಕೊ ಅಭಿಪ್ರಾಯಪಟ್ಟಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜಯಾ ಗೈರುಹಾಜರಾಗುವ ಸಂಭವ ಇದೆ. ತಮಿಳು ಪಕ್ಷಗಳ ವಿರೋಧ ತಳ್ಳಿಹಾಕಿರುವ ಬಿಜೆಪಿ, 'ಪ್ರಜಾಪ್ರಭುತ್ವ ಸಂಭ್ರಮದಲ್ಲಿ ಭಾಗಿಯಾಗಲು ನೆರೆ ರಾಷ್ಟ್ರಗಳನ್ನು ಆಹ್ವಾನಿಸಲಾಗಿದೆ' ಎಂದು ಸಮರ್ಥಿಸಿಕೊಂಡಿದೆ.

ಉಪಸ್ಥಿತಿ ಖಚಿತಪಡಿಸಿರುವ ದೇಶಗಳು
ಶ್ರೀಲಂಕಾ    ಅಧ್ಯಕ್ಷ ಮಹಿಂದ ರಾಜಪಕ್ಸೆ
ಬಾಂಗ್ಲಾದೇಶ    ಸ್ಪೀಕರ್ ಶಿರಿನ್ ಚೌಧರಿ
    (ಪ್ರಧಾನಿ ಹಸೀನಾ ಜಪಾನ್ ಭೇಟಿ ಕಾರಣ)
ಅಪ್ಘಾನಿಸ್ತಾನ    ಅಧ್ಯಕ್ಷ ಹಮೀದ್ ಕರ್ಜೈ
ಭೂತಾನ್    ಪ್ರಧಾನಿ ತ್ಸೆರಿಂಗ್ ತೋಬ್ಗೆ
ನೇಪಾಳ    ಪ್ರಧಾನಿ ಸುಶೀಲ್ ಕೊಯಿರಾಲಾ
ಮಾಲ್ಡೀವ್    ಅಧ್ಯಕ್ಷ ಅಬ್ದುಲ್ಲಾ ಯಾಮೀನ್
ಮಾರಿಷಸ್    ಪ್ರಧಾನಿ ನವೀನ್ ರಾಮ್‌ಗುಲಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement