ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯುಪಿಎ ಲಜ್ಜೆಗೆಟ್ಟ ವರ್ತನೆ

ಭ್ರಷ್ಟಾಚಾರ, ಪಕ್ಷಪಾತಿ ಧೋರಣೆ, ಸ್ವಜನ ಹಿತಾಸಕ್ತಿ ಮುಂತಾದ...

Mainashree
Updated On : 22 May 2014, 11:29 am

ನವದೆಹಲಿ: ಭ್ರಷ್ಟಾಚಾರ, ಪಕ್ಷಪಾತಿ ಧೋರಣೆ, ಸ್ವಜನ ಹಿತಾಸಕ್ತಿ ಮುಂತಾದ ಜನವಿರೋಧಿ ಧೋರಣೆಗಳಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಯುಪಿಎ ಸರ್ಕಾರ ತನ್ನ ಅಧಿಕಾರಾವಧಿಯ ಕೊನೆ ದಿನಗಳಲ್ಲೂ ತನ್ನ ನಾಚಿಕೆಗೇಡಿನ ವರ್ತನೆಯನ್ನು ಮುಂದುವರಿಸಿದೆ.
ಟಿ20 ಪಂದ್ಯಗಳ ಸ್ಲಾಗ್ (ಕೊನೇ) ಓವರ್‌ಗಳಲ್ಲಿ ಯದ್ವಾತದ್ವಾ  ಬ್ಯಾಟ್ ಬೀಸುವ ದಾಂಡಿಗರಂತೆ, ಕೇಂದ್ರದಲ್ಲಿ ತಮ್ಮ ಅಧಿಕಾರ ಮುಗಿಯುವ ಸೂಚನೆ ಸಿಕ್ಕ ಕೂಡಲೇ, ಗಕ್ಕನೇ ಎದ್ದು ಕೂತ ಕೆಲ ಸಚಿವರು, ತನ್ನ ಆಪ್ತೇಷ್ಟರಿಗೆ ಅವರಿಗೆ ಬೇಕಾದ ಸವಲತು, ವರ್ಗಾವಣೆ, ಬಡ್ತಿಗಳನ್ನು ನೀಡಿ ಅವರೆಲ್ಲರನ್ನು ಸಂತೃಪ್ತಿಗೊಳಿಸಲು ಪ್ರಯತ್ನಿಸಿದ್ದಾರೆ. ಈ ಘನಕಾರ್ಯದಲ್ಲಿ, ಕೆಲವರಿಗೆ ಪ್ರತಿಷ್ಠಿತ ಲ್ಯೂಟೆನ್ಸ್ ಬಡಾವಣೆಯಲ್ಲಿ ದೊಡ್ಡ ಬಂಗಲೆಗಳೂ ಉಡುಗೊರೆಯಾಗಿ ಸಿಕ್ಕಿವೆ. ನಿರ್ಗಮಿತ ಸರ್ಕಾರಕ್ಕಿರಬೇಕಿದ್ದ ನೈತಿಕತೆಯನ್ನು ಇಲ್ಲಿನ ಸಚಿವರು ಮರೆತಿದ್ದಾರೆ.
 ಹಣಕಾಸು 'ಬಾಸು' ಮಾಡಿದ್ದೇನು?
ಅಂದು ಮೇ 16. ಕೇಂದ್ರ ಹಣಕಾಸು ಸಚಿವರ ಕಚೇರಿ ದಾಂಗುಡಿಯಿಂದ ತುಂಬಿಹೋಗಿತ್ತು. ಸಚಿವ ಪಿ. ಚಿದಂಬರಂ ಅವರಂತೂ ತಮ್ಮ ಆಪ್ತರ ಅಪೇಕ್ಷೆಗಳನ್ನು ಈಡೇರಿಸುವದರಲ್ಲಿ ಬಿಡುವಿಲ್ಲದೇ ದುಡಿಯುತ್ತಿದ್ದರು! ಅಂದು, ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇಂದ್ರ ರೆವಿನ್ಯೂ ಸರ್ವೀಸ್ (ಐಆರ್‌ಎಸ್)ನ 124 ಅಧಿಕಾರಿಗಳ ವರ್ಗಾವಣೆಗೆ ಅವರು ಸಹಿ ಹಾಕಿದರು.  ಕೇಂದ್ರೀಯ ಅಬಕಾರಿ ಮತ್ತು ಸುಂಕ ಇಲಾಖೆಯ ಐವರು ಉನ್ನತ ಮಟ್ಟದ ಅಧಿಕಾರಿಗಳಿಗೂ ಇದೇ ವೇಳೆ ಹೆಚ್ಚಿನ ಲಾಭದಾಯಕ ಹುದ್ದೆಗಳಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.
ಅಲ್ಲೂ ಇದೇ ಕಾಯಕ:
ಆರೋಗ್ಯ, ಮಾಹಿತಿ ಮತ್ತು ಪ್ರಸಾರ ಇಲಾಖೆಗಳೂ ತಮ್ಮವರಿಗೆ ತನ್ನ ಕೈಲಾದಷ್ಟು 'ಸಹಾಯ' ಮಾಡಿವೆ. ಆರೋಗ್ಯ ಇಲಾಖೆಯು ಡಾ. ರಾಜಪಾಲ್ ಅವರನ್ನು ಸಫ್ತರ್‌ಜಂಗ್ ಆಸ್ಪತ್ರೆಯ ಅಧೀಕ್ಷಕರನ್ನಾಗಿ ಆಯ್ಕೆ ಮಾಡಿ ಆದೇಶ ನೀಡಿದೆ. ಇನ್ನು, ಮಾಹಿತಿ ಮತ್ತು ಪ್ರಸಾರ ಹಕ್ಕು ಇಲಾಖೆ, ರಾಘವೇಂದ್ರ ಸಿಂಗ್ ಅವರನ್ನು ತನ್ನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಮುಂದುವರಿದ ಕಂತುಗಳು!
ಮೇ 19ರಂದು 11 ಐಆರ್‌ಎಸ್ ಅಧಿಕಾರಿಗಳನ್ನು ಅವರ ಅಪೇಕ್ಷೆಯ ಮೇರೆಗೆ ಮುಂಬೈ, ದೆಹಲಿ, ಹೈದರಾಬಾದ್‌ಗಳಲ್ಲಿನ ಆದಾಯ ತೆರಿಗೆ ಕಚೇರಿಗಳಲ್ಲಿನ ಹುದ್ದೆಗಳಿಗೆ ನೇಮಿಸಿ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
ಗ್ರೂಪ್ 'ಎ'ಗೆ ಬಡ್ತಿ
ಮೇ 20, ಇತ್ತ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರ ರಚನೆ ಹಕ್ಕನ್ನು ಮಂಡಿಸಲು ರಾಷ್ಟ್ರಪತಿ ಭವನಕ್ಕೆ ತೆರಳಿದರೆ, ಅತ್ತ, ತನ್ನ ಕೊನೆ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು 'ಪರೋಪಕಾರ' ಮಾಡಲು ನಿರ್ಧರಿಸಿದ ಹಣಕಾಸು ಸಚಿವರು, ತಮಗೆ ತೀರಾ ಸಮೀಪವಾಗಿದ್ದ ಕೇಂದ್ರೀಯ ಅಬಕಾರಿ ಮತ್ತು ಸುಂಕ ಇಲಾಖೆಯ ಗ್ರೂಪ್ 'ಬಿ' ಅಧಿಕಾರಿಗಳಿಗೆ ಗ್ರೂಪ್ 'ಎ' ಶ್ರೇಣಿಗೆ ಬಡ್ತಿ ನೀಡಿ ಆದೇಶ ನೀಡಿದ್ದಾರೆ. ಕೇಂದ್ರ ಜಲ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನೀತಿ ಮರೆತಿದ್ದರು
ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮಾತ್ರ ಯುಪಿಎ ಈ ಕೆಲಸ ಮಾಡಿದ್ದಲ್ಲ ಎನ್ನುವ ಕೆಲ ಮೂಲಗಳು, ತನ್ನ ಕೊನೆ ದಿನಗಳು ಖಚಿತವಾಗುವುದು ಮನದಟ್ಟಾಗುತ್ತಿದ್ದಂತೆ ಇಂಥ 'ಮಹತ್ಕಾರ್ಯ'ಗಳನ್ನು ಯುಪಿಎ ಸರ್ಕಾರ ನಡೆಸಿತ್ತು.
ಮೇ 6ರಂದು, ಭಗವತಿ ಪ್ರಸಾದ್ ಪಾಂಡೆ ಅವರನ್ನು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ವಾಣಿಜ್ಯ ಇಲಾಖೆಯ ಸಲಹೆಗಾರರಾಗಿ ನೇಮಿಸಲಾಗಿತ್ತು. ಲೆ. ಜನರಲ್ ದಲ್ಬೀರ್ ಸಿಂಗ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದ ಯುಪಿಎ ಸರ್ಕಾರ, ಅದರ ಜೊತೆಗೇ, ಹಲವಾರು ಪ್ರಮುಖ ಹುದ್ದೆಗಳಿಗೆ ತಮಗೆ ಬೇಕಾದವರನ್ನು ನೇಮಿಸಿ ಆದೇಶ ನೀಡಿತ್ತು. ಅವುಗಳಲ್ಲಿ, ದೇವೇಂದ್ರ ಪಾಠಕ್ ಅವರನ್ನು ಗಡಿ ಭದ್ರತಾ ಪಡೆಯ ನಿರ್ದೇಶಕರನ್ನಾಗಿ ನೇಮಿಸಿದ್ದು ಪ್ರಮುಖವಾದದ್ದು. ಅಲ್ಲದೇ, ಜಮ್ಮು- ಕಾಶ್ಮೀರದ ಡಿಜಿಪಿ ಅಶೋಕ್ ಪ್ರಸಾದ್, ಕೇಂದ್ರೀಯ ತನಿಖಾ ದಳದ ವಿಶೇಷ ಅಧಿಕಾರಿಯಾಗಿ ನೇಮಕವಾದರು.

ಉಡುಗೊರೆ ಪಡೆದವರು

ಮೇ 13ರಂದು ನಡೆದ ವಸತಿಗೆ ಸಂಬಂಧಿಸಿದ ಸಂಪುಟ ಸಮಿತಿಯ ಕೊನೆ ಸಭೆಯಲ್ಲಿ, ನಂ. 5, ಜನಪಥ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್‌ಗೆ ಬಂಗಲೆ ನೀಡಿಕೆ.
'ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ'ದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಅವರಿಗೆ ಈ ಹಿಂದೆ ನೀಡಲಾಗಿದ್ದ ಬಂಗಲೆಯಲ್ಲೇ ವಾಸ್ತವ್ಯ ಮುಂದುವರಿಸಲು ಅವಕಾಶ.
ರಾಬರ್ಟ್ ವಾದ್ರ ಅವರ ಭೂಹಗರಣ ಆರೋಪ ಪ್ರಕರಣದಲ್ಲಿ ವಾದ್ರಾ ಅವರ ಪರವಾಗಿ ವಾದ ಮಂಡಿಸಿದ್ದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಟಿ.ಎಸ್. ತುಳಸಿ ಅವರಿಗೆ ಮೋತಿಲಾಲ್ ನೆಹರೂ ಮಾರ್ಗದಲ್ಲಿ 8ನೇ ಮಾದರಿಯ ಬಂಗಲೆ ವಿತರಣೆ. ಕಳೆದ ಫೆಬ್ರವರಿಯಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಯೂ ಆಯ್ಕೆ ಮಾಡಲಾಗಿತ್ತು.
ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿದ್ದ ಟಿ.ಕೆ.ಎ. ನಾಯರ್ ಅವರಿರುವ ಪುರಾನಾ ಖಿಲಾ ಬಂಗಲೆಯಲ್ಲೇ ಆಗಸ್ಟ್‌ವರೆಗೆ ವಾಸ್ತವ್ಯ ಮುಂದುವರಿಸಲು ಅನುವು.
ಮುರಳಿ ದೆವೊರಾ ಅವರಿಗೆ ಮೋತಿಲಾಲ್ ನೆಹರೂ ಮಾರ್ಗದಲ್ಲಿ ಬಂಗಲೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement