ವಸತಿಗೆ ಓಬಿರಾಯನ ಮಾನದಂಡ
ಪ್ರತಿ ಗ್ರಾಮಕ್ಕೆ 32 ಮನೆ ನಿರ್ಮಾಣ ಮಿತಿ
ಮಂಗಳೂರು: ಇದೊಂದು ಅಂಕೆಮೀರದ ಅಂಕದ ಲೆಕ್ಕಾಚಾರ. ಅಂಕದ ಮಾನದಂಡ ಹೆಚ್ಚಾಗದ ಕಾರಣ ಸರ್ಕಾರದ ವಸತಿ ಯೋಜನೆಯಲ್ಲಿ ಹೆಚ್ಚಿನ ಫಲಾನುಭವಿಗಳನ್ನು ತಲಪಲು ಸಾಧ್ಯವಾಗುತ್ತಿಲ್ಲ.
ಓಬಿರಾಯನ ಕಾಲದ ಮಾನದಂಡದಲ್ಲಿ ಬದಲಾವಣೆ ಆಗಿಲ್ಲ. ಇದರಿಂದ ಅರ್ಹ ಫಲಾನುಭವಿಗಳು ವಸತಿ ನಿರ್ಮಾಣಕ್ಕೆ ವರ್ಷಗಟ್ಟಲೆ ಕಾಯಬೇಕು. ಫಲಾನುಭವಿಗೆ ಒಂದೇ ಅಂಗಿ ಇರಬೇಕು. ಸ್ಥಿರ ದೂರವಾಣಿ ಇರಬಾರದು... ಹೀಗೆ 32ರವರೆಗೆ ಅಂಕ ಪಡೆದ ಫಲಾನುಭವಿಯನ್ನು ವಸತಿ ಯೋಜನೆಗೆ ಆಯ್ಕೆ ಮಾಡುತ್ತಾರೆ.
40 ವರ್ಷಗಳ ಹಿಂದಿನ ಮಾತು: ಸುಮಾರು ನಾಲ್ಕು ದಶಕ ಹಿಂದೆ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ ವಸತಿ ಫಲಾನುಭವಿ ಆಯ್ಕೆಯಾಗಲು 32 ಅಂಕ ನಿಗದಿಪಡಿಸಿತ್ತು. ಕೇಂದ್ರದ ನಿಯಮವಾದ್ದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಮಾನದಂಡದಂತೆ ಫಲಾನುಭವಿ ಆಯ್ಕೆ ಮಾಡುತ್ತಿದ್ದರು.
ಈಗ ಕಾಲ ಬದಲಾಗಿದೆ. ಬಿಪಿಎಲ್ ಪಟ್ಟಿಯಲ್ಲಿರುವ ಸೂರಿಲ್ಲದವರೂ ಒಂದಕ್ಕಿಂತ ಜಾಸ್ತಿ ಅಂಗಿ ಹಾಕುತ್ತಾರೆ. ಸ್ಥಿರ ದೂರವಾಣಿ ಬದಲು ಮೊಬೈಲ್ ಜಮಾನ ಇದೆ. ಹೀಗಿದ್ದರೂ ಮಾನದಂಡದಲ್ಲಿ ಮಾರ್ಪಾಟು ಆಗಿಲ್ಲ. ಹೆಚ್ಚಿನ ಮಂದಿ ಇನ್ನೂ ಬಿಪಿಎಲ್ ಪಟ್ಟಿಯಲ್ಲಿ ಇದ್ದಾರೆ.
32 ಮನೆ ಮೀರುವಂತಿಲ್ಲ: ಈ ಮಾನದಂಡ ಪ್ರಕಾರ ಪ್ರತಿ ಗ್ರಾಮ ಪಂಚಾಯ್ತಿ 32 ಮನೆ ನಿರ್ಮಿಸಬಹುದು. ಇನ್ನೂ ಜಾಸ್ತಿ ಮನೆ ಬೇಕಿದ್ದರೆ ಮುಂದಿನ ವರ್ಷಕ್ಕೆ ಕಾಯಬೇಕು. ಸಂಖ್ಯೆ ಜಾಸ್ತಿ ಇದ್ದರೆ ಮತ್ತೊಂದು ವರ್ಷದ ಸರದಿ. ಹೀಗೆ ಅರ್ಹರಿದ್ದರೂ 32 ಸಂಖ್ಯೆ ಮೀರುವಂತಿಲ್ಲ. ಪ್ರತಿ ಫಲಾನುಭವಿಗೆ ಮನೆ ನಿರ್ಮಾಣಕ್ಕೆ ತಲಾ 1.20 ಲಕ್ಷ ನೀಡಲಾಗುತ್ತಿದೆ. ಮನೆ ಕಟ್ಟಲು 30 ಸಾವಿರ ಫಲಾನುಭವಿ ಸೇರಿಸಬೇಕು' ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ ನಾಯ್ಕ. ಈ ಮಾನದಂಡವನ್ನು ಹೆಚ್ಚು ಮಾಡಬೇಕಾದರೆ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ರಾಜೀವ್ಗಾಂಧಿ ವಸತಿ ನಿಗಮದಿಂದ ಕೇಂದ್ರಕ್ಕೆ ಕಳುಹಿಸಬೇಕು. ರಾಜ್ಯದಲ್ಲಿ ಪ್ರಸ್ತಾವನೆ ಕಳುಹಿಸುವ ಕೆಲಸವೇ ನಡೆದಿಲ್ಲ.
ಈಗಲೂ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ವಸತಿ ಯೋಜನೆ ಇದೇ 32 ಅಂಕ ಮಾನದಂಡದಲ್ಲಿ ಅನುಷ್ಠಾನವಾಗುತ್ತಿದೆ. ಹಾಗಾಗಿ ಇನ್ನಷ್ಟು ಮಂದಿ ವಸತಿಗೆ ಕಾಯುವುದು ತಪ್ಪುವುದಿಲ್ಲ ಎನ್ನುತ್ತಾರೆ ಅವರು.
'ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಿದರಷ್ಟೇ ಸಾಲದು. ಮತ್ತೆ ಕೇಂದ್ರ ತಂಡ ಬಂದು ಗ್ರಾಮ ಪಂಚಾಯ್ತಿಗಳಲ್ಲಿ ಸಮೀಕ್ಷೆ ನಡೆಸುತ್ತದೆ. ಸಮೀಕ್ಷೆಯಲ್ಲಿ ಕಂಡುಬಂದ ಪ್ರಕಾರ ಮತ್ತೆ ಅಂಕ ನಿಗದಿಪಡಿಸುತ್ತಾರೆ. ಜಿಲ್ಲೆಯಲ್ಲಿ 32 ಅಂಕ ಮಾನದಂಡ ಬಹಳ ಹಳೆಯದಾಗಿದ್ದು, ಇದನ್ನು ಇನ್ನೂ ಹೆಚ್ಚು ಮಾಡಬೇಕು. ಆಗ ಜಾಸ್ತಿ ವಸತಿ ನೀಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಿಗೆ ಸೂಚಿಸಲಾಗಿದೆ' ಎನ್ನುತ್ತಾರೆ ಕೊರಗಪ್ಪ ನಾಯ್ಕ.
- ಆತ್ಮಭೂಷಣ್