ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸೋತವರಿಗೆಲ್ಲಾ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ: ಸಿದ್ದು

ಲೋಕಸಭಾ ಚುನಾವಣೆಯಲ್ಲಿ ಸೋತವರಿಗೆಲ್ಲಾ ವಿಧಾನ ಪರಿಷತ್ ಸದಸ್ಯತ್ವ...

Mainashree
Updated On : 22 May 2014, 9:47 am

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋತವರಿಗೆಲ್ಲಾ ವಿಧಾನ ಪರಿಷತ್ ಸದಸ್ಯತ್ವ ಅಥವಾ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ..! ಹೀಗೆ ಕಡ್ಡಿಮುರಿದಂತೆ ಹೇಳಿದ್ದು ಬೇರಾರೂ ಅಲ್ಲ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಮಕೃಷ್ಣನಗರದ ತಮ್ಮ ನಿವಾಸದ ಬಳಿ ಗುರುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಿದ್ದಾಗ, ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್. ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಅಭಿಮಾನಿಗಳು ಕೋರಿದಾಗ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

ಕಿಡಿಕಿಡಿಯಾದ ಸಿದ್ದು
ಸ್ವಪಕ್ಷೀಯರ ಕುತಂತ್ರ ರಾಜಕಾರಣದಿಂದ ವಿಶ್ವನಾಥ್ ಸೋತಿದ್ದಾರೆ. ಅನುಭವಿ ರಾಜಕಾರಣಿಯಾಗಿರುವ ವಿಶ್ವನಾಥ್ ಅವರನ್ನು ಸಕ್ರಿಯ ರಾಜಕೀಯದಲ್ಲಿ ಉಳಿಸಿಕೊಳ್ಳಲು ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಧಾನಪರಿಷತ್ ಸದಸ್ಯರಾಗಿ ನೇಮಿಸಿ, ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಈ ವೇಳೆ ವಿಶ್ವನಾಥ್ ಅಭಿಮಾನಿಗಳು ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಪರಿಶೀಲಿಸುವುದಾಗಿ ಹೇಳಿದರು. ಇದಕ್ಕೆ ತೃಪ್ತರಾಗದ ಬೆಂಬಲಿಗರು, ಈ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ಒತ್ತಡ ಹೇರಲು ಪ್ರಯತ್ನಿಸಿದರು, ವಿಶ್ವನಾಥ್ ಪರ ಘೋಷಣೆ ಕೂಗಿದರು. ಇದರಿಂದ ಸಿಡಿಮಿಡಿಯಾದ ಸಿದ್ದರಾಮಯ್ಯ, ಕಾಂಗ್ರೆಸ್ ಸೋಲಿಸಿ ಈಗ ಎಂಎಲ್ಸಿ ಸ್ಥಾನ ನೀಡುವಂತೆ ಆಗ್ರಹಿಸಲು ಬಂದಿದ್ದೀರಾ? ಸೋಲಿಸಿದ ನಂತರ ಈಗ ಘೋಷಣೆ ಕೂಗಿ ಏನು ಪ್ರಯೋಜನ ಎಂದು ಗದರಿದರು. ರಾಜ್ಯದಲ್ಲಿ ಕಾಂಗ್ರೆಸ್ 9 ಸ್ಥಾನ ಗೆದ್ದಿದ್ದು, 19 ಮಂದಿ ಸೋತಿದ್ದಾರೆ. ಸೋತ ಎಲ್ಲ ಅಭ್ಯರ್ಥಿಗಳಿಗೂ ಎಂಎಲ್ಸಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿ ವಿಶ್ವನಾಥ್ ಬೆಂಬಲಿಗರನ್ನು ಸಾಗಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement