ಕಪ್ಪುಹಣ ಎಸ್ಐಟಿ: ಸರ್ಕಾರಕ್ಕೆ ಮತ್ತಷ್ಟು ಕಾಲಾವಕಾಶ
ನವದೆಹಲಿ: ಕಪ್ಪುಹಣ ಪ್ರಕರಣಗಳ ಮೇಲ್ವಿಚಾರಣೆಗೆ ವಿಶೇಷ ತನಿಖಾ ತಂಡ ರಚಿಸಲು ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವಾರಗಳ ಕಾಲಾವಕಾಶ ಸಿಕ್ಕಿದೆ. ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಶಾ ನೇತೃತ್ವದಲ್ಲಿ ಎಸ್ಐಟಿ ರಚಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರದ ಗಡುವು ನೀಡಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೆ ಒಂದು ವಾರಗಳ ಕಾಲಾವಕಾಶ ನೀಡಲಾಯಿತು.
ಇದೇ ವೇಳೆ, ಕಪ್ಪುಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕಂದಾಯ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯ ಬಳಿ ಸುರಕ್ಷಿತವಾಗಿ ಇಡಬೇಕು ಎಂದೂ ಕೋರ್ಟ್ ಸೂಚಿಸಿದೆ. ಶಾಸ್ತ್ರಿಭವನದಲ್ಲಿ ನಡೆದ ಬೆಂಕಿ ಅನಾಹುತದ ವೇಳೆ ಮಹತ್ವದ ದಾಖಲೆಗಳು ನಾಶವಾಗಿವೆ ಎಂದು ಹಿರಿಯ ನ್ಯಾಯವಾದಿ, ಅರ್ಜಿದಾರ ರಾಂ ಜೇಠ್ಮಲಾನಿ ಆರೋಪಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಈ ಆದೇಶ ನೀಡಿದೆ. ಆದರೆ, ಜೇಠ್ಮಲಾನಿ ಆರೋಪವನ್ನು ತಳ್ಳಿಹಾಕಿರುವ ಸರ್ಕಾರ, ದಾಖಲೆಗಳನ್ನು ನಾರ್ತ್ ಬ್ಲಾಕ್ನಲ್ಲಿ ಇಡಲಾಗಿದೆಯೇ ವಿನಾ ಶಾಸ್ತ್ರಿಭವನದಲ್ಲಿ ಇಟ್ಟಿಲ್ಲ ಎಂದಿದೆ.