ಕುರ್ಚಿ ಉಳಿಸಿಕೊಳ್ಳುವ 'ಕೆಲಸ'ಕ್ಕೆ ರೆಡಿ!
ಕುರ್ಚಿ ಉಳಿಸಿಕೊಳ್ಳಲು 'ಕೆಲಸ' ಮಾಡಲು ನಾವ್ ರೆಡಿ...
-ಸಚಿವರ ಹೊಸ ವರಸೆ | ವಿಧಾನಸೌಧ- ವಿಕಾಸಸೌಧದಲ್ಲಿ ಸರಣಿ ಸಭೆ
ಬೆಂಗಳೂರು: ಕುರ್ಚಿ ಉಳಿಸಿಕೊಳ್ಳಲು 'ಕೆಲಸ' ಮಾಡಲು ನಾವ್ ರೆಡಿ...
ಇದು ನಮ್ಮ ಸಚಿವರ ಹೊಸ ವರಸೆ! ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಪ್ಪಣೆ ಹೊರಡಿಸಿದಾಗಲೂ ವಿಧಾನಸೌಧ-ವಿಕಾಸಸೌಧದತ್ತ ತಲೆ ಹಾಕದ ಸಚಿವರು ಇದೀಗ ಸಭೆ ನಡೆಸಿ, ತಮ್ಮ ಸಾಧನೆ ಬಿಂಬಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಥಮ ಬಾರಿಗೆ ನಿತ್ಯವೂ ಕಾರ್ಯನಿರತರಾಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ಎಫೆಕ್ಟ್ ಇದು. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆಯ ಸುದ್ದಿ ರೆಕ್ಕೆ-ಪುಕ್ಕ ಕಟ್ಟಿಕೊಂಡು ರಾಜ್ಯದ ಉದ್ದಗಲದಲ್ಲೂ ಹಾರಾಡುತ್ತಿದೆ. ಇದರಿಂದ ಬೆದರಿರುವ ಸಚಿವರು ತಮ್ಮ ಕೆಲಸ ಚುರುಕುಗೊಳಿಸಿದ್ದಾರೆ.
ಸಚಿವರು ತಮ್ಮ ಇಲಾಖೆಗಳ ಸಭೆ ನಡೆಸಿ ಸಾಕಷ್ಟು ತಿಂಗಳೇ ಆಗಿತ್ತು. ಚುನಾವಣೆಗೆ ಮುನ್ನವೂ ಸಭೆ ನಡೆಸಿದ್ದು ತೀರಾ ಕಡಿಮೆ. ಆದರೆ, ಇದೀಗ ವಿಧಾನಸೌಧ-ವಿಕಾಸಸೌಧದಲ್ಲಿ ಸಚಿವರ ನೇತೃತ್ವದ ಸಭೆಗಳದ್ದೇ ಆರ್ಭಟ.
ಸಾಧನೆ ಬಿಂಬಿಸುವ ಯತ್ನ: ಈ ಹಿಂದೆ ವಿಧಾನಸೌಧಕ್ಕೂ ಬಾರದ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್‌ರಂತಹ ಹಿರಿಯ ಸಚಿವರು ಒಂದು ವರ್ಷದ ಸಾಧನೆ ಹೇಳಲು ಮುಂದಾಗಿದ್ದಾರೆ. ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ, ಅಲ್ಪಸಂಖ್ಯಾತ ಸಚಿವ ಖಮರುಲ್ ಇಸ್ಲಾಂ ಅವರದ್ದೂ ಇದೇ ಕಥೆ. ಖಮರುಲ್ ಇಸ್ಲಾಂ ಇಮೇಲ್ ಕಳುಹಿಸಿ ಸಾಧನೆ ಹೇಳಿಕೊಳ್ಳುತ್ತಿದ್ದಾರೆ. ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್ ತಂಗಡಗಿ ಎರಡು ಸಭೆ ಮಾಡಿದ್ದು ಬಿಟ್ಟರೆ ಕೆರೆಗಳ ಬಗ್ಗೆ ಇನ್ನೇನು ಮಾಡಲೇ ಇಲ್ಲ. ಇದೀಗ ಅವರು 15 ದಿನದಲ್ಲೇ ರಾಜ್ಯದಲ್ಲಿ ಅಂತರ್ಜಲ ವೃದ್ಧಿ ಮಾಡುವ 'ಬೃಹತ್ ಯೋಜನೆ' ಹಾಕಿಕೊಂಡಿದ್ದಾರೆ. ನಗರಾಭಿವೃದ್ಧಿ ಖಾತೆ ಸಚಿವ ವಿನಯ್‌ಕುಮಾರ್ ಸೊರಕೆ ಬಂದಾಗಿನಿಂದ ಮಾಡಿಕೊಂಡಿದ್ದನ್ನೇ ಮಾಡಿದ್ದೇವೆ ಎಂದು ಸಾರುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಇದೀಗ ಇಲಾಖೆ ಬಗ್ಗೆ ಆಸಕ್ತಿ ಬಂದಂತಿದೆ. ವಿಧಾನಸೌಧದಲ್ಲೇ ಸಭೆಗಳನ್ನೂ ಮಾಡುತ್ತಿದ್ದಾರೆ.
ಆರೋಗ್ಯದ ತೊಂದರೆಯಿಂದ ನರಳಿದ್ದ ವಸತಿ ಸಚಿವ ಅಂಬರೀಷ್ ಕೂಡ ವರ್ಷದ ಸಾಧನೆ ಹೇಳಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ವಿಧಾನಸೌಧದಲ್ಲಿ ಕಾಣಲೂ ಸಿಗದ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಕೂಡ ಬೀದಿ ವ್ಯಾಪಾರಿಗಳ ಸಮಸ್ಯೆ ಬಗ್ಗೆ ಸಭೆ ಮಾಡಿದ್ದು, ಲೋಕಸಭಾ ಚುನಾವಣೆ ಫಲಿತಾಂಶದ ಪರಿಣಾಮ.
ಇಷ್ಟಕ್ಕೇ ಸಚಿವರ ಕುರ್ಚಿ ಉಳಿಸಿಕೊಳ್ಳುವ ಪ್ರಕ್ರಿಯೆ ನಿಂತಿಲ್ಲ. ತಮ್ಮ ಉಸ್ತುವಾರಿ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡಿದ್ದಾರೆ. ಈ ವಾರದಲ್ಲೇ ಎರಡೆರಡು ಬಾರಿ ಉಸ್ತುವಾರಿ ಜಿಲ್ಲೆಯನ್ನು ನೋಡಿಕೊಂಡು ಬಂದ ಸಚಿವರೂ ಇದ್ದಾರೆ. ಕುರ್ಚಿ ಉಳಿಸಿಕೊಳ್ಳಲು 'ಪ್ರಚಾರ'ದ ಬೆನ್ನೇರಿ ಹೋಗಿರುವ ಸಚಿವರು, ಅದಕ್ಕಾಗಿ ಸಾಕಷ್ಟು ವೆಚ್ಚವನ್ನೂ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಪುಸ್ತಕ ರೂಪದಲ್ಲೇ ಹೊರತಂದಿದ್ದರು. ಇದರಲ್ಲಿ ಎಲ್ಲ ಇಲಾಖೆಗಳ ಮಾಹಿತಿಯೂ ಇತ್ತು. ಆದರೂ ಸಾಧನೆ ಬಿಂಬಿಸಿಕೊಳ್ಳುವುದರಲ್ಲಿ ಸಚಿವರ ನಡುವೆ ಪೈಪೋಟಿ ಏರ್ಪಟ್ಟಿದೆ.
ಇನ್ನೂ ಸುಳಿಯದವರು
ಕುರ್ಚಿ ಉಳಿಸಿಕೊಳ್ಳಲು ಶಕ್ತಿಸೌಧದಲ್ಲಿ ಕಸರತ್ತು ನಡೆಸುತ್ತಿರುವ ಸಚಿವರ ವರಸೆ ಒಂದು ಕಡೆಯಾದರೆ, ಇನ್ನೂ ಇತ್ತ ಸುಳಿಯದೆ ತಮ್ಮದೇ ಲೋಕದಲ್ಲಿ ಕೆಲವು ಸಚಿವರು ತೇಲುತ್ತಿದ್ದಾರೆ. ಇವರಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್, ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್ ಅತ್ಯಂತ ಪ್ರಮುಖರು. ಎಂ.ಬಿ. ಪಾಟೀಲ್ ಅಂತೂ ಅರ್ಕಾವತಿ ನದಿಯನ್ನು ಥೇಮ್ಸ್ ನದಿಯಂತೆ ಹರಿಸುವ 'ಮಹದಾಸೆ' ಹೊಂದಿದ್ದರು. ಆದರೆ ಯೋಜನೆಗಳ 'ಅಪ್ರೂವ್'ಗಳನ್ನು ನಿಗಮಗಳಲ್ಲೇ ಮುಗಿಸುವಲ್ಲಿ ಇನ್ನೂ ನಿರತರಾಗಿದ್ದಾರೆ. ಎಸ್.ಆರ್. ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ತೋರಿದ ಆಸಕ್ತಿಯನ್ನು ಸಚಿವರಾದ ಮೇಲೆ ಬಹುತೇಕ ಮರೆತಂತಿದೆ.
ಅಂದು ಬಿಕೋ ಎನ್ನುತ್ತಿತ್ತು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಿಧಾನಸೌಧ ಬಿಕೋ ಅನ್ನುತ್ತಿತ್ತು. ಸಚಿವರು ಇತ್ತ ಸುಳಿಯುತ್ತಲೇ ಇರಲಿಲ್ಲ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರು ತಮ್ಮ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕು. ಇಲಾಖೆಗಳ ಸಭೆ ನಡೆಸಬೇಕು. ಜಿಲ್ಲಾ ಪ್ರವಾಸವನ್ನೂ ಕೈಗೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಿದ್ದರು. ಇದು ಒಂದು ಬಾರಿ ಅಲ್ಲ, ನಾಲ್ಕಾರು ಬಾರಿ ಮಾಡಿದರೂ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಯಾರೂ ಹೇಳಬೇಕಾಗಿಲ್ಲ, ಎಲ್ಲರೂ ಕಾರ್ಯನಿರತರಾಗಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ತಮ್ಮ ಇಲಾಖೆಯ ಕಾರ್ಯಗಳ ಬಗ್ಗೆ ಎಲ್ಲ ರೀತಿಯ ಪ್ರಚಾರ ಗಿಟ್ಟಿಸಿಕೊಂಡು ಹೈಕಮಾಂಡ್ ಗಮನಸೆಳೆಯುವ ಪ್ರಯತ್ನ ನಡೆಸಿದ್ದಾರೆ.
- ಕೆರೆ ಮಂಜುನಾಥ್