ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈನಲ್ಲಿ ಈಗ ಭಿನ್ನ ಅಲೆ

ಮೋದಿ ಅಲೆಯಲ್ಲಿ ಕೊಚ್ಚಿಹೋಗಿರುವ ಕಾಂಗ್ರೆಸ್‌ನಲ್ಲಿ ಈಗ...

Mainashree
Updated On : 23 May 2014, 10:28 am

ಬೆಂಗಳೂರು: ಮೋದಿ ಅಲೆಯಲ್ಲಿ ಕೊಚ್ಚಿಹೋಗಿರುವ ಕಾಂಗ್ರೆಸ್‌ನಲ್ಲಿ ಈಗ ಭಿನ್ನಮತದ ಅಲೆ ಪ್ರಾರಂಭವಾಗಿದೆ.
ಲೋಕಸಭೆ ಸೋಲನ್ನು ಉಸ್ತು ವಾರಿ ಸಚಿವರ ಹೆಗಲಿಗೆ ಕಟ್ಟುವ ಪ್ರಯತ್ನ ಆರಂಭವಾಗುತ್ತಿದ್ದಂತೆ, ಸಚಿವ ಸಂಪುಟ ಸಹೋದ್ಯೋಗಿಗಳು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ ಅಲೆಯೇ ಇಲ್ಲವೆಂದು ಹೇಳುತ್ತಿದ್ದ ನಾಯಕರೆಲ್ಲ ಸೋಲಿನ ಸಮರ್ಥನೆಗೆ ಮೋದಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲಾ ಘಟಕಗಳಲ್ಲಿ ಆಕ್ರೋಶಗಳು ಹೆಚ್ಚುತ್ತಿವೆ.
ಫಲಿತಾಂಶ ಬಂದ ದಿನದಿಂದಲೇ ಕಾಂಗ್ರೆಸ್‌ನಲ್ಲಿ ಆಂತರಿಕ ಚಟುವಟಿಕೆಗಳು ಗರಿಗೆದರಿದ್ದವು. ಸಂಪುಟ ಪುನಾರಚನೆ ಹಾಗೂ ಉಸ್ತುವಾರಿ ಸಚಿವರ ಮೇಲಿನ ಕ್ರಮಗಳ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ, ತಮ್ಮ ಸ್ಥಾನ ಅಸುರಕ್ಷಿತ ಎನ್ನುವುದರ ಮುನ್ಸೂಚನೆ ಸಿಕ್ಕಾಗ ಒಬ್ಬೊಬ್ಬರೇ ವಾಗ್ದಾಳಿಗೆ ಮುಂದಾಗಿದ್ದಾರೆ. 'ಸಚಿವ ಸಂಪುಟ ಯಾರಪ್ಪನ ಮನೆಯ ಆಸ್ತಿಯಲ್ಲ' ಎಂದು ಹೇಳಿಕೆ ನೀಡುವ ಮೂಲಕ ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಗೆ ಟಾಂಗ್ ನೀಡಿದ್ದಾರೆ. ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಕಚೇರಿ ಎದುರು ಹಾವೇರಿ ಜಿಲ್ಲಾ ಘಟಕವೇ ಪ್ರತಿಭಟನೆ ನಡೆಸಿದೆ.
ಲೋಕ ನೆಪದಲ್ಲಿ ಒಳಜಗಳ: ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿರುವುದು ಕೆಲ ವೇದಿಕೆಯಲ್ಲಿ ಮಾತ್ರ ಬಹಿರಂಗವಾಗಿತ್ತು. ಆದರೆ ಈಗ ಫಲಿತಾಂಶ ಅದನ್ನು ಬೀದಿಗೆ ತಂದಿದೆ. ಜಿ.ಪರಮೇಶ್ವರ್ ಬಳಗದ ಸಚಿವರ ಕ್ಷೇತ್ರ ಹಾಗೂ ತುಮಕೂರಿನಲ್ಲಿ ಕಾಂಗ್ರೆಸ್ ಜಯಶಾಲಿಯಾಗಿದೆ ಎಂಬ ಕಾರಣವಿರಿಸಿಕೊಂಡು ಉಪಮುಖ್ಯಮಂತ್ರಿ ಹುದ್ದೆಯನ್ನು ಪರಮೇಶ್ವರ್ ಅವರಿಗೆ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಲು ಸಿದ್ದರಾಮಯ್ಯ ವಿಫಲರಾಗಿ ಹತಾಶ ಸ್ಥಿತಿಯಲ್ಲಿದ್ದಾರೆ. ಅವರ ಆಪ್ತ ಸಚಿವರ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ.
ಲೋಕಸಭೆಯಲ್ಲಿ ಸೋತ ಮಾನದಂಡವನ್ನು ಸಂಪುಟ ಪುನಾರಚನೆಗೆ ಪರಿಗಣಿಸುವುದಾದರೆ ಎಲ್ಲ ಸಚಿವರಿಗೆ ಕೊಕ್ ನೀಡಬೇಕು ಎಂದು ಶ್ಯಾಮನೂರು ಅವರು ಖುದ್ದು ಮುಖ್ಯಮಂತ್ರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಎಚ್ಕೆ, ಕೋಳಿವಾಡ ವಿರುದ್ಧ ದೂರು: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸಲೀಂ ಅಹ್ಮದ್ ಸೋಲಿಗೆ ಸಚಿವ ಎಚ್.ಕೆ.ಪಾಟೀಲ್ ಹಾಗೂ ಶಾಸಕ ಕೆ.ಬಿ.ಕೋಳಿವಾಡ ಕಾರಣ ಎಂದು ಹಾವೇರಿ ಜಿಲ್ಲಾ ಘಟಕವು ಕೆಪಿಸಿಸಿಗೆ ದೂರು ನೀಡಿದೆ. ಸ್ವತಃ ಸಲೀಂ ಅಹ್ಮದ್ ಕೂಡ ಪಾಟೀಲ್ ವಿರುದ್ಧ ಕಿಡಿಕಾರಿದ್ದು, ಎಚ್.ಕೆ.ಪಾಟೀಲ್ ನನ್ನ ಸೋಲಿಗೆ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತ ಕೆಪಿಸಿಸಿ ಕಚೇರಿಯ ಎದುರು ಹಾವೇರಿ ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದರೆ ದಿನ ಕಳೆದಂತೆ ಆಂತರಿಕ ಕಲಹ ತೀವ್ರಗೊಳ್ಳುವ ಸೂಚನೆಗಳು ಲಭಿಸುತ್ತಿವೆ.

ಮೋದಿ ಅಲೆಯಿದೆ!
ಕರ್ನಾಟಕದಲ್ಲಿ ಮೋದಿ ಅಲೆಯೆಲ್ಲಿದೆ ಎಂದು ಪ್ರತಿ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ವಿಚಿತ್ರವೆಂದರೆ ಈಗ ಪ್ರತಿ ಸಚಿವರೂ ತಮ್ಮ ಕ್ಷೇತ್ರದಲ್ಲಿನ ಅಭ್ಯರ್ಥಿಯ ಸೋಲಿಗೆ ಮೋದಿ ಅಲೆಯೇ ಕಾರಣ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯ ತವರು ಕ್ಷೇತ್ರದ ಅಭ್ಯರ್ಥಿ ಎಚ್.ವಿಶ್ವನಾಥ್ ಕೂಡ ಮೋದಿ ಅಲೆಯೇ ತಮ್ಮ ಸೋಲಿಗೆ ಕಾರಣ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ತಗೀಲಿ ಬಿಡ್ರೀ, ಇಲ್ಲೇ ಇರೋದಿಕ್ಕೇನು ಸಚಿವ ಸ್ಥಾನ ಯಾರಪ್ಪನ ಮನೆ ಸ್ವತ್ತಲ್ಲ. ತೆಗೆದು ಹಾಕಿದ್ರೆ ಸೀದಾ ಹೆಲಿಕಾಪ್ಟರ್ ಹತ್ಕೊಂಡ್ ಊರಿಗೆ ಹೋಗ್ತಿನಿ. ಮಾಡ್ಲಿಕ್ಕೆ ಅಲ್ಲಿ ಬಾಳ್ ಕೆಲ್ಸ ಐತಿ.
-ಶಾಮನೂರು ಶಿವಶಂಕರಪ್ಪ, ತೋಟಗಾರಿಕೆ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement