ದೂತಾವಾಸದ ಮೇಲೆ ದಾಳಿ: ಎಲ್ಲ ಉಗ್ರರ ಹತ್ಯೆ
ಕರ್ಜೈ ಭಾರತ ಭೇಟಿಯನ್ನು ತಡೆಯಲು ಶತಾಯಗತಾಯ ಯತ್ನಿಸುತ್ತಿರುವ ಉಗ್ರರು ಶುಕ್ರವಾರ...
ನವದೆಹಲಿ/ಕಾಬೂಲ್: ಕರ್ಜೈ ಭಾರತ ಭೇಟಿಯನ್ನು ತಡೆಯಲು ಶತಾಯಗತಾಯ ಯತ್ನಿಸುತ್ತಿರುವ ಉಗ್ರರು ಶುಕ್ರವಾರ ಆಫ್ಘನ್ನ ಹೆರಾತ್ ಪ್ರಾಂತ್ಯದಲ್ಲಿನ ಭಾರತದ ರಾಜತಾಂತ್ರಿಕ ಕಚೇರಿ ಮೇಲೆ ದಾಳಿ ನಡೆಸುವ ಮೂಲಕ ಭೀತಿ ಹುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
ಗ್ರೆನೇಡ್, ರಾಕೆಟ್ ಪ್ರೊಪೆಲ್ಲರ್ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನು ಹೊತ್ತ ಉಗ್ರರ ತಂಡ ಭಾರತದ ರಾಜತಾಂತ್ರಿಕ ಕಚೇರಿ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ, ಭಾರತದ ಯಾವುದೇ ರಾಜತಾಂತ್ರಿಕ ಸಿಬ್ಬಂದಿಗೆ ಹಾನಿಯಾಗಿಲ್ಲ. ಉಗ್ರರ ದಾಳಿಗೆ ಪ್ರತಿಯಾಗಿ, ಅಫ್ಘಾನಿಸ್ತಾನ ಪೊಲೀಸರು ಹಾಗೂ ಐಟಿಬಿಪಿ (ಇಂಡೊ- ಟಿಬೆಟಿಯನ್ ಗಡಿ ಭದ್ರತಾ ಪಡೆ) ಯೋಧರು ನಡೆಸಿದ ಗುಂಡಿನ ದಾಳಿಗೆ ಎಲ್ಲ ನಾಲ್ವರು ಉಗ್ರರೂ ಬಲಿಯಾಗಿದ್ದಾರೆ. ಯಾವುದೇ ಉಗ್ರವಾದಿ ಸಂಘಟನೆ ಈವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಹೆರಾತ್ನಲ್ಲಿ ಭಾರತದ ದೂತಾವಾಸ ಎರಡು ಕಟ್ಟಡಗಳನ್ನು ಹೊಂದಿದೆ. ಒಂದು ಕಟ್ಟಡದಲ್ಲಿ ಕಾನ್ಸುಲೇಟ್ ಜನರಲ್ ಅವರ ವಾಸ್ತವ್ಯವೂ ಇದ್ದು, ಇದೇ ಕಟ್ಟಡನ್ನು ಗುರಿಯಾಗಿಸಿಕೊಂಡು ಉಗ್ರರು ಮೊದಲು ದಾಳಿ ಆರಂಭಿಸಿದರು ಎಂದು ಅಫ್ಘಾನಿಸ್ತಾನದಲ್ಲಿರುವ ಭಾರತದ ರಾಯಭಾರಿ ಅಮರ್ ಸಿನ್ಹಾ ವಿವರಿಸಿದ್ದಾರೆ. ಉಗ್ರನೊಬ್ಬ ಮೊದಲ ಕಟ್ಟಡವನ್ನು ಏರಿ, ಕಟ್ಟಡದೊಳಕ್ಕೆ ಹಾರುವ ಪ್ರಯತ್ನದಲ್ಲಿದ್ದಾಗ ಆತನನ್ನು ಹೊಡೆದುರುಳಿಸಲಾಯಿತು ಎಂದು ಸಿನ್ಹಾ ವಿವರಿಸಿದ್ದಾರೆ.
ನರೇಂದ್ರ ಮೋದಿ ಖಂಡನೆ
ಆಫ್ಘಾನಿಸ್ತಾನದಲ್ಲಿನ ರಾಯಭಾರಿ ಕಚೇರಿಯ ಮೇಲೆ ಉಗ್ರರು ದಾಳಿ ನಡೆಸಿರುವುದನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದಾರೆ. ಘಟನೆ ಸುದ್ದಿ ತಿಳಿದ ಕೂಡಲೇ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕಜಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.