ಮೊಂಡಾಟದ ಕೇಜ್ರಿಗೆ ಜಡ್ಜ್ ಮಂಗಳಾರತಿ
ನೀವೊಬ್ಬ ಮಾಜಿ ಸಿಎಂ, ಜವಾಬ್ದಾರಿಯುತವಾಗಿ ಹೇಗೆ ವರ್ತಿಸಬೇಕು...
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ನೀವೊಬ್ಬ ಮಾಜಿ ಸಿಎಂ, ಜವಾಬ್ದಾರಿಯುತವಾಗಿ ಹೇಗೆ ವರ್ತಿಸಬೇಕು ಎಂಬುದು ಗೊತ್ತಿರಬೇಕು, ಆದರೆ ನೀವು ನಡೆದುಕೊಳ್ಳುತ್ತಿರುವುದೇ ಬೇರೆ...
ಇದು ದೆಹಲಿಯ ಮೆಟ್ರೋಪಾಲಿಟನ್ ಕೋರ್ಟ್‌ನ ನ್ಯಾಯಾಧೀಶರಾದ ಗೋಮತಿ ಮನೋಚಾ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ತರಾಟೆಗೆ ತೆಗೆದುಕೊಂಡ ಬಗೆ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಾನನಷ್ಟ ಪ್ರಕರಣದಲ್ಲಿ ಜಾಮೀನು ತೆಗೆದುಕೊಳ್ಳಲು ನಿರಾಕರಿಸಿದ ಕೇಜ್ರಿವಾಲ್ ಅವರನ್ನು ಛೇಡಿಸಿದ್ದಾರೆ.
ಕೋರ್ಟ್ ಆಕ್ಷೆಪ: ಜಾಮೀನು ಪಡೆಯದೆ ಮೊಂಡಾಟ ಮಾಡುತ್ತಿರುವ ಆಪ್ ನಾಯಕ ಕೇಜ್ರಿವಾಲ್ ವರ್ತನೆಗೆ ದೆಹಲಿಯ ಮೆಟ್ರೋಪಾಲಿಟನ್ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಪ್‌ನ ಇತರ ನಾಯಕರು ಜಾಮೀನು ಬಾಂಡ್ ಸಲ್ಲಿಸಿ ಜಾಮೀನು ಪಡೆಯಲು ಮುಂದಾಗುವುದಿದ್ದರೆ ನಿಮಗೇಕೆ (ಕೇಜ್ರಿವಾಲ್) ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದೆ.
'ದೇಶದಲ್ಲಿ ಕಾನೂನು ಸಾಕ್ಷರತೆ ಇದೆ. ಶಿಕ್ಷಿತ ಜನರಿಗೇ ಜಾಮೀನು ಪಡೆಯಲು ಬಾಂಡ್ ನೀಡಬೇಕೆಂಬ ಸರಳ ನಿಯಮ ತಿಳಿಯದಿದ್ದರೆ ಹೇಗೆ, ನಿಮ್ಮ ಸ್ಥಾನಕ್ಕೆ ತಕ್ಕಂತೆ ನೀವು ವರ್ತಿಸಬೇಕು. ನಿಮ್ಮನ್ನು ಆರೋಪಿಯಾಗಿ ಇಲ್ಲಿ ವಿಚಾರಣೆಗೆ ಕರೆಸಲಾಗಿದೆ. ನೀವು ವಿಚಾರಣೆ ಎದುರಿಸಲೇಬೇಕು. ಅದು ಬಿಟ್ಟು ನಾನು ತಪ್ಪಿತಸ್ಥನಲ್ಲ ಎನ್ನುವಂತಿಲ್ಲ. ಎಲ್ಲದಕ್ಕೂ ನಿಯಮಗಳಿವೆ. ಇವುಗಳನ್ನು ಪಾಲಿಸಲೇಬೇಕು' ಎಂದು ನ್ಯಾಯಾಧೀಶೆ ಗೋಮತಿ ಮನೋಚಾ ಆದೇಶಿಸಿದ್ದಾರೆ. ವ್ಯಕ್ತಿಯೊಬ್ಬನ ಇಷ್ಟಕ್ಕೆ ಅನುಸಾರವಾಗಿ ಕೋರ್ಟ್ ತೀರ್ಮಾನ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ನಿತಿನ್ ಗಡ್ಕರಿ ವಿರುದ್ಧದ ಆರೋಪವನ್ನು ಇನ್ನೂ ತನಿಖೆಯೇ ನಡೆಸಿಲ್ಲ. ಆದರೆ, ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ನನ್ನ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ. ನಾನು ಯಾವ ತಪ್ಪನ್ನೂ ಮಾಡಿಲ್ಲ, ಹಾಗಾಗಿ ಜಾಮೀನು ಪಡೆಯಲ್ಲ.
-ಅರವಿಂದ ಕೇಜ್ರಿವಾಲ್, ಆಪ್ ನಾಯಕ
ಕೇಜ್ರಿವಾಲ್‌ರವರೇ, ದೇಶದ ಜವಾಬ್ದಾರಿಯುತ ನಾಗರಿಕನಾಗಿ ನೀವು ವರ್ತಿಸುತ್ತಿರುವ ರೀತಿ ಸರಿಯೇ? ಜನರ ಮುಂದೆ ನಾಟಕವಾಡುತ್ತಿದ್ದ ನೀವು ಈಗ ಘನ ನ್ಯಾಯಾಲಯದ ಮುಂದೆಯೂ ಚೆಲ್ಲಾಟವಾಡುವುದು ಎಷ್ಟು ಸರಿ? ಸ್ವತಃ ನ್ಯಾಯಾಧೀಶರೇ ನಿಮ್ಮ ವರ್ತನೆ ಬಗ್ಗೆ ಬೇಸರಿಸಿಕೊಂಡಿದ್ದಾರೆ. ಆದರೂ ನೀವು ಪಟ್ಟುಬಿಡುತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸುವ ನಿಮ್ಮ ಮೇಲೆ ಜನರಿಗೆ ಅನುಕಂಪ ಮೂಡುತ್ತದೆ ಎಂದು ಭಾವಿಸಿದ್ದರೆ ಅದು ಕೇವಲ ಭ್ರಮೆಯಷ್ಟೆ. ನಿಮ್ಮ ಬಗ್ಗೆ ಜನರಿಗೆ ಅನುಕಂಪವಲ್ಲ, ಜುಗುಪ್ಸೆ ಮೂಡುತ್ತಿದೆ.
ಕ್ರೇಜಿ ಡ್ರಾಮಾ, ಕಾನೂನು ಏನ್ ಹೇಳುತ್ತೆ?
'ನಾನು ಮುಂದಿನ ಎಲ್ಲ ವಿಚಾರಣೆಗಳಿಗೆ ತಪ್ಪದೇ ಬರುತ್ತೇನೆ, ಇದಕ್ಕಾಗಿ ಈ ಭದ್ರತಾ ಹಣವನ್ನು ನೀಡುತ್ತಿದ್ದೇನೆ' ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಆರೋಪಿಗಳು ಕೋರ್ಟ್‌ಗೆ ಬಾಂಡ್ ರೂಪದಲ್ಲಿ ಇಂತಹದೊಂದು ಭದ್ರತೆ ನೀಡುತ್ತಾರೆ. ಒಂದು ಪ್ರಕರಣದ ಸರಾಗ ವಿಚಾರಣೆಗೆ ಆರೋಪಿಗಳ ಹಾಜರಿ ಅತಿಮುಖ್ಯ. ಜೈಲಿನಲ್ಲಿಯೇ ಇದ್ದರೆ ಕೋರ್ಟ್ ಬಯಸಿದಾಗ ವಿಚಾರಣೆ ನಡೆಸಬಹುದು. ಒಂದೊಮ್ಮೆ ಜಾಮೀನು ಪಡೆದು ಹೊರಗಿರಲು ಬಯಸಿದರೆ, ಅಂತಹ ಆರೋಪಿಗಳು ಕೋರ್ಟ್ ಹಾಗೂ ನ್ಯಾಯಾಧೀಶರಿಗೆ ಬಾಂಡ್ ಮೂಲಕ ಮುಂದಿನ ವಿಚಾರಣೆಗೆ ಬರುವ ಭರವಸೆ ನೀಡಬೇಕಾಗುತ್ತದೆ. ಕೋರ್ಟ್‌ನಲ್ಲಿಟ್ಟಿರುವ ಹಣಕ್ಕಾಗಿ ಆರೋಪಿಗಳು ವಿಚಾರಣೆ ತಪ್ಪಿಸಿಕೊಳ್ಳುವುದಿಲ್ಲ ಎನ್ನುವ ಲೆಕ್ಕಾಚಾರವೂ ಇದರಲ್ಲಿದೆ ಎನ್ನುವುದು ಕಾನೂನು ಪಂಡಿತರ ಅಭಿಪ್ರಾಯವಾಗಿದೆ.