ಮೋದಿ ಪ್ರಮಾಣ ವಚನ ಸಮಾರಂಭ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಗುರುವಾರ ನಿಯೋಜಿತ ಪ್ರಧಾನಿ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಗುರುವಾರ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಎಲ್ಲ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ.
ಪಕ್ಷವು 2,500 ಮಂದಿ ಅತಿಥಿಗಳ ಪಟ್ಟಿ ಸಿದ್ಧಪಡಿಸಿದೆ. ಮೋದಿ ಅವರ ತಾಯಿ ಹಿರಾಬೆನ್(95), ಸಹೋದರರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಪ್ರತಿಯೊಬ್ಬರೂ ಗರಿಷ್ಠ ನಾಲ್ವರು ಅತಿಥಿಗಳನ್ನಷ್ಟೇ ಆಹ್ವಾನಿಸಬೇಕು. ಕಾರ್ಯಕ್ರಮ ಸಂಜೆ 6 ಗಂಟೆಗೆ ಆರಂಭವಾಗುತ್ತದೆ. ಒಂದು ಗಂಟೆ, 10 ನಿಮಿಷಗಳ ಕಾಲ ನಡೆಯಲಿದೆ.
ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರಿಗೂ ಆಹ್ವಾನ. ಅವರ ಪತ್ನಿಯರಿಗೆ ಪ್ರವೇಶವಿಲ್ಲ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲ ಸದಸ್ಯರ ಹೆಸರೂ ಅತಿಥಿಗಳ ಪಟ್ಟಿಯಲ್ಲಿದೆ. ಜತೆಗೆ ಅಂಗಪಕ್ಷಗಳ ಸದಸ್ಯರಿಗೂ ಆಹ್ವಾನವಿದೆ
ಇಬ್ಬರು ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ರಿಗೆ ಆಹ್ವಾನ
ಮಾಜಿ ಪ್ರಧಾನಿಗಳಾದ ಡಾ. ಮನಮೋಹನ್ಸಿಂಗ್ ಮತ್ತು ಎಚ್.ಡಿ. ದೇವೇಗೌಡ ಪಾಲ್ಗೊಳ್ಳುವ ನಿರೀಕ್ಷೆ
ಸಾರ್ಕ್ ರಾಷ್ಟ್ರಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೋ, ಇಲ್ಲವೋ ಎಂಬುದನ್ನು ಶುಕ್ರವಾರ ಘೋಷಿಸಲಾಗುತ್ತದೆ. ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ, ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಬರುವುದು ಖಚಿತ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಜಪಾನ್ಗೆ ತೆರಳುತ್ತಿದ್ದು, ದೇಶದ ಸ್ಪೀಕರ್ ಅನ್ನು ಕಳುಹಿಸುವ ಭರವಸೆ ನೀಡಿದ್ದಾರೆ.
ರಾಷ್ಟ್ರಪತಿ ಭವನದ ಆವರಣದಲ್ಲಿ ಮೂರು ಹಂತದ ಆಸನ ವ್ಯವಸ್ಥೆ. ಪ್ರಧಾನಿಯೊಬ್ಬರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇಲ್ಲಿ ಮೂರನೇ ಬಾರಿ.
ರಾಷ್ಟ್ರಪತಿ ಭವನದ ಮೆಟ್ಟಿಲುಗಳನ್ನು ಇಳಿದು ಬರುತ್ತಿದ್ದಂತೆಯೇ ಸಿಗುವ ಆವರಣದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ.
ಮೋದಿ ಅವರು ಎಲ್ಲ ವಿಚಾರಗಳನ್ನೂ ಗುಪ್ತವಾಗಿಟ್ಟುಕೊಂಡಿದ್ದಾರೆ. ಹಾಗಾಗಿ ಸೋಮವಾರ ಮೋದಿ ಜತೆ ಯಾರ್ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರ ಪಕ್ಷವು ಒಟ್ಟು 282 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದು, ಒಟ್ಟಾರೆ ಎನ್ಡಿಎ 336 ಸ್ಥಾನಗಳಲ್ಲಿ ಜಯ ಗಳಿಸಿದೆ.