ಸಚಿವ ಸ್ಥಾನ ಯಾರಪ್ಪನ ಮನೆ ಸ್ವತ್ತಲ್ಲ
ತಗೀಲಿ ಬಿಡ್ರೀ, ಇಲ್ಲೇ ಇರೋದಿಕ್ಕೇನು ಸಚಿವ ಸ್ಥಾನ ಯಾರಪ್ಪನ..
ಕ.ಪ್ರ. ವಾರ್ತೆ |ಬೆಂಗಳೂರು |ಮೇ 23
ತಗೀಲಿ ಬಿಡ್ರೀ, ಇಲ್ಲೇ ಇರೋದಿಕ್ಕೇನು ಸಚಿವ ಸ್ಥಾನ ಯಾರಪ್ಪನ ಮನೆ ಸ್ವತ್ತಲ್ಲ. ತೆಗೆದು ಹಾಕಿದ್ರೆ ಸೀದಾ ಹೆಲಿಕಾಪ್ಟರ್ ಹತ್ಕೊಂಡ್ ಊರಿಗೆ ಹೋಗ್ತಿನಿ. ಮಾಡ್ಲಿಕ್ಕೆ ಅಲ್ಲಿ ಬಾಳ್ ಕೆಲ್ಸ ಐತಿ...! ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಂಪುಟದಿಂದ ತಮ್ಮನ್ನು ತೆಗೆಯಲಾಗುತ್ತಿದೆ ಎಂಬ ಸುದ್ದಿಗಳಿಗೆ ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ನೀಡಿದ ಪ್ರತಿಕ್ರಿಯೆ ಇದು.
ನಗರದ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಿಂದ ತಮ್ಮನ್ನು ತೆಗೆಯಲಾಗುತ್ತದೆ ಎಂಬ ಸುದ್ದಿಗಳನ್ನು ಅಲ್ಲಗಳೆದರು. ಇದು ಕೇವಲ ಮಾಧ್ಯಮದ ಸೃಷ್ಟಿ. ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದಲ್ಲಿ ಅಂತಹ ಯಾವುದೇ ನಿರ್ಧಾರಗಳು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
'ಚುನಾವಣೆಯ ಸೋಲನ್ನು ಮಾನದಂಡವಾಗಿಸಿ ನನ್ನನ್ನು ಸಂಪುಟದಿಂದ ತೆಗೆದು ಹಾಕುವುದಾದರೆ, ನನ್ನಂತೆಯೇ ಉಳಿದ 25ಕ್ಕೂ ಹೆಚ್ಚು ಸಚಿವರಿದ್ದಾರೆ. ಚುನಾವಣೆ ಸೋಲಿಗೆ ಅವರೂ ಜವಾಬ್ದಾರರು. ಅವರನ್ನೂ ಸಂಪುಟದಿಂದ ತೆಗೆದು ಹಾಕಬೇಕಾಗುತ್ತದೆ' ಎಂದು ಪರೋಕ್ಷವಾಗಿ ಪಕ್ಷದ ನಿಲುವನ್ನು ಪ್ರಶ್ನಿಸಿದರು. ಒಂದು ವೇಳೆ ನಿಮ್ಮನ್ನು ಸಂಪುಟದಿಂದ ತೆಗೆದರೆ? ಸುದ್ದಿಗಾರರು ಹಾಕಿದ ಮರು ಪ್ರಶ್ನೆಗೆ ಕೊಂಚ ಸಿಟ್ಟಿನಲ್ಲಿಯೇ ಉತ್ತರಿಸಿದ ಅವರು, 'ತೆಗೀಲಿ ಬಿಡ್ರೀ, ಇಲ್ಲೆ ಇರೋದಿಕ್ಕೇನು ಸಚಿವ ಸ್ಥಾನ ಯಾರಪ್ಪನ ಮನೆ ಸ್ವತ್ತಲ್ಲ. ತೆಗೆದು ಹಾಕಿದರೆ ಸೀದಾ ಹೆಲಿಕಾಪ್ಟರ್ ಹತ್ಕೊಂಡ್ ಊರಿಗೆ ಹೋಗ್ತಿನಿ. ಮಾಡ್ಲಿಕ್ಕೆ ಅಲ್ಲಿ ಬಾಳ್ ಕೆಲ್ಸ ಐತಿ'ಎಂದು ಖಾತೆ ಹಿಂಪಡೆಯುವ ಸುದ್ದಿಯ ಹಿನ್ನೆಲೆಯಲ್ಲಿ ಉಂಟಾದ ತಮ್ಮೊಳಗಿನ ದುಗುಡ ಹೊರಹಾಕಿದರು.
ಹೇಳಿಕೆ ನೋಡಿದರೆ, ಸಚಿವ ಸ್ಥಾನ ನಿಮಗೆ ಸಾಕಾಗಿದೆ ಅಂತನಿಸುತ್ತೇ? ಎಂಬ ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ 'ಹೌದು, ಸಾಕಾಗಿದೆ'ಎಂದು ನಕ್ಕು ಸುಮ್ಮನಾದರು.
ಸೋಲಿಗೆ ಮೋದಿ ಅಲೆ ಕಾರಣ
ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೋಲಿಗೆ ಮೋದಿ ಅಲೆಯೇ ಪ್ರಮುಖ ಕಾರಣ ಎಂಬುದಾಗಿ ಒಪ್ಪಿಕೊಂಡ ಅವರು, ಅಲೆಯೋ, ಸುನಾಮಿಯೋ, ನಾವು ಕೊಚ್ಚಿಕೊಂಡು ಹೋದೆವು ಎಂದು ಅಸಹಾಯಕತೆಯಲ್ಲಿ ಸೋಲಿನ ಕಾರಣವನ್ನು ವಿವರಿಸಿದರು. ಮತದಾನಕ್ಕೂ ಪೂರ್ವದಲ್ಲಿ ಕ್ಷೇತ್ರದ ಉದ್ದಕ್ಕೂ ಕಾಂಗ್ರೆಸ್ ಪರವಾದ ಅಲೆಯಿತ್ತು. ಕಾಂಗ್ರೆಸ್ ಗೆಲ್ಲುವುದು ಖಚಿತವೆಂದೇ ಭಾವಿಸಲಾಗಿತ್ತು. ಅದರೆ ಫಲಿತಾಂಶ ಪ್ರಕಟವಾದಾಗ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದವು. ದಾವಣಗೆರೆ ವಿಧಾನಸಭೆ ಕ್ಷೇತ್ರದಲ್ಲಿಯೇ 23 ಸಾವಿರ ಮತಗಳ ಹಿನ್ನಡೆ ಉಂಟಾಯಿತು. ಇದೇ ರೀತಿ, ಹೊನ್ನಾಳಿ, ಚನ್ನಗಿರಿ, ಹರಿಹರದಲ್ಲಿ ಕಾಂಗ್ರೆಸ್‌ಗೆ 2ನೇ ಸ್ಥಾನ. ಉಳಿದಂತೆ ಮಾಯಕೊಂಡ, ಹರಪನಹಳ್ಳಿ ಸೇರಿದಂತೆ ಉಳಿದೆಡೆ ಉತ್ತಮ ಮತ ಪಡೆದರೂ ಮೋದಿ ಅಲೆಯ ಅರ್ಭಟಕ್ಕೆ ಕಾಂಗ್ರೆಸೆ ಸೋಲಬೇಕಾಯಿತು ಎಂದು ಅವರು ಹೇಳಿದರು.