ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೆಚ್ಚಾಗಲಿವೆ ರಾಜ್ಯದ ನಗರಸಭೆ ಸದಸ್ಯರ ಸ್ಥಾನ

Mainashree
Updated On : 23 May 2014, 10:57 am

ಶಿವಮೊಗ್ಗ: ಲೋಕಸಭೆ ಮಹಾಸಮರ ಮುಗಿಯುತ್ತಿದ್ದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸಂಚಲನ ಶುರುವಾಗಿದೆ. 2011ರ ಜನಗಣತಿ ಮಾಹಿತಿಯಂತೆ ವಾರ್ಡ್‌ಗಳ ಪುನರ್ ವಿಂಗಡನೆಗೆ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಈಗ ಜಿಲ್ಲಾಡಳಿತಗಳು ಕಾರ್ಯರೂಪಕ್ಕೆ ತರುತ್ತಿವೆ.
ಈಗಾಗಲೇ ಗ್ರಾಮ ಪಂಚಾಯಿತಿಗಳ ಪುನರ್ ವಿಗಂಡಣೆ, ಪರಿಷ್ಕರಣೆ ಹಾಗೂ ಕೇಂದ್ರಸ್ಥಾನ ಬದಲಾವಣೆಗೆ ರಚಿಸಲಾಗಿರುವ ಮಾಜಿ ಶಾಸಕ ಎಸ್.ಜಿ. ನಂಜಯ್ಯಮಠ ನೇತೃತ್ವದ ಸಮಿತಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಈ ಸಂಬಂಧ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದೆ. ಆದರೆ ಸರ್ಕಾರ ನಗರ ಸ್ಥಳೀಯ ಸಂಸ್ಥೆ ವಾರ್ಡ್‌ಗಳ ಪುನರ್ ವಿಂಗಡಣೆ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೇ ಕೊಟ್ಟಿದೆ.
ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ ಅಡಿ ಬರುವ ನಗರ ಸ್ಥಳೀಯ ಸಂಸ್ಥೆಗಳಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ನಡೆಯಲಿದೆ. ಮಹಾನಗರ ಪಾಲಿಕೆಗಳು ಈ ಕಾಯ್ದೆ ಅಡಿ ಬರುವುದಿಲ್ಲ.
ಜನಗಣತಿ ಆಧಾರ
ವಾರ್ಡ್‌ಗಳ ಪುನರ್ ವಿಂಗಡಣೆಗೆ ಮುಖ್ಯ ಆಧಾರವಾಗಿರುವುದು ಜನಗಣತಿ. 2011ರಲ್ಲಿ ಭಾರತ ಜನಗಣತಿ ನಂತರ ರಾಜ್ಯದ ಜನಸಂಖ್ಯೆ 6 ಕೋಟಿ ದಾಟಿದೆ. 2,36,25,962 ಜನರು ಪಟ್ಟಣ ಪ್ರದೇಶದಲ್ಲಿದ್ದಾರೆ. ಇದು ರಾಜ್ಯದ ಒಟ್ಟು ಜನಸಂಖ್ಯೆ 29.15ರಷ್ಟು. 2001ರ ಜನಗಣತಿಗೆ ಹೋಲಿಸಿದರೆ ಶೇಕಡಾ 4.68ರಷ್ಟು ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ ಪ್ರಕಾರ ವಾರ್ಡ್‌ಗಳ ಪುನರ್ ವಿಂಗಡಣೆ ಅನಿವಾರ್ಯ. ಪ್ರತಿ ಪಟ್ಟಣಗಳಲ್ಲೂ ಜನಸಂಖ್ಯೆ ಹೆಚ್ಚಾಗಿದ್ದು, ವಾರ್ಡ್‌ಗಳ ಸಂಖ್ಯೆಯೂ ಹೆಚ್ಚಾಗಲಿದೆ. ಅದಕ್ಕಾಗಿ ಮಾರ್ಗಸೂಚಿ ಪ್ರಕಟಿಸಿದೆ. ವಾರ್ಡ್‌ಗಳಲ್ಲಿ ಎಷ್ಟು ಜನಸಂಖ್ಯೆ ಇರಬೇಕೆಂಬುದನ್ನೂ ತಿಳಿಸಲಾಗಿದೆ.
ಆಕ್ಷೇಪಣೆ ಆಹ್ವಾನ
ಜಿಲ್ಲಾಧಿಕಾರಿಯವರು ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಪುನರ್ ವಿಂಗಡಣೆ ಸಂದರ್ಭದಲ್ಲಿ ಪ್ರಕಟಣೆ ನೀಡಿ, ಸಮೀಕ್ಷೆ ನಂತರದ ಕರಡನ್ನು ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸುತ್ತಾರೆ. ಈ ಸಂಬಂಧ ನಕಾಶೆಯನ್ನೂ ಸಿದ್ಧಪಡಿಸುತ್ತಾರೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ನಂತರ ಅಧಿಕೃತ ಘೋಷಣೆ ಹೊರಡಿಸುತ್ತಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಇನ್ನೂ ಕಾಲಾವಕಾಶವಿರುವುದ್ದು, ಅದಕ್ಕಿಂತ ಮುಂಚೆಯೇ ಅವಧಿ ಮುಗಿಯುವ ಸ್ಥಳೀಯ ಸಂಸ್ಥೆಗಳ ಸಮೀಕ್ಷೆ ನಡೆಸಲಿದ್ದಾರೆ. ಬಹುತೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನೂ ಮೂರುವರೆ ವರ್ಷಗಳ ಕಾಲಾವಕಾಶವಿದೆ. ಹಾಗಾಗಿ ವಾರ್ಡ್‌ಗಳ ಪುನರ್ ವಿಂಗಡಣೆ ಸಮೀಕ್ಷೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶಗಳು ಆರಂಭಿಸಿವೆ.
ಈ ಬಗ್ಗೆ ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಆರ್. ರಾಜಪ್ಪ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಶೀಘ್ರದಲ್ಲೇ ಅವಧಿ ಮುಗಿಯಲಿದ್ದ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವಾರ್ಡ್‌ಗಳ ಪುನರ್ ವಿಂಗಡಣೆ ಮುಗಿದಿದೆ. ಉಳಿದ ವಾರ್ಡ್‌ಗಳ ಸಮೀಕ್ಷೆಯನ್ನು ಸದ್ಯವೇ ಆರಂಭಿಸಲಿದ್ದೇವೆ. ಲೋಕಸಭೆ ಚುನಾವಣೆ ಕಾರಣ, ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿದ್ದ ಕಾರಣ ಇಷ್ಟು ದಿನ ವಾರ್ಡ್ ಪುನರ್ ವಿಂಗಡಣೆ ಆಗಿರಲಿಲ್ಲ. ಈಗ ಮಾರ್ಗಸೂಚಿ ತಲುಪಿದೆ ಎಂದಿದ್ದಾರೆ.

 ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement