ಎನ್ಡಿಎ ಸರ್ಕಾರದ ಬಗ್ಗೆ ಸಕಾರಾತ್ಮಕ ಧೋರಣೆ: ಬಿಜೆಡಿ
ಭುವನೇಶ್ವರ: ಕೇಂದ್ರದ ಹೊಸ ಎನ್ಡಿಎ ಸರ್ಕಾರದ ಬಗ್ಗೆ ನಮ್ಮ ಪಕ್ಷ ಸಕಾರಾತ್ಮಕ ಧೋರಣೆ ಹೊಂದಿರಲಿದೆ. ದೇಶ ಮತ್ತು ಒಡಿಶಾದ ಹಿತಾಸಕ್ತಿಯ ವಿಚಾರ ಬಂದಾಗ ಕೇಂದ್ರ ಸರ್ಕಾರಕ್ಕೆ ಬೆಂಬಲವನ್ನೂ ನೀಡಲಿದೆ. ಇದು ಮೋದಿ ಅಲೆಯ ನಡುವೆಯೂ ಒಡಿಶಾದಲ್ಲಿ 22 ಸ್ಥಾನಗಳನ್ನು ಗೆದ್ದ ಬಿಜೆಡಿ ಮಾತು. ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸಮಾನ ಅಂತರ ಕಾಪಾಡಿಕೊಳ್ಳುವ ನಿಲುವಿಗೆ ಬದ್ಧವಾಗಿದೆ. ಆದರೆ ಒಡಿಶಾದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರವಿದ್ದರೆ ಎನ್ಡಿಎಗೆ ಬೆಂಬಲ ನೀಡಲು ಸಿದ್ಧ. ಅದಕ್ಕೆ ವಿರುದ್ಧದ ನಿರ್ಧಾರವನ್ನು ಖಂಡಿಸಲೂ ಸಿದ್ಧ ಎಂದು ಬಿಜೆಡಿ ಸಂಸದೀಯ ಸಮಿತಿ ನಾಯಕ ಭರ್ತುಹಾರಿ ಮೆಹ್ತಾಬ್ ಹೇಳಿದ್ದಾರೆ. ಈ ಎಲ್ಲ ನಿರ್ಧಾರಗಳನ್ನು ನವೀನ್ ಪಟ್ನಾಯಕ್ ನೇತೃತ್ವದಬಿಜೆಡಿ ಸಂಸದೀಯ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.