ಎಲ್ಲೆಲ್ಲೂ ಟ್ವಿಟರ್ ಜಾದೂ!
ನವದೆಹಲಿ: ಭಾರತದ ಲೋಕಸಭೆ ಚುನಾವಣೆಯಲ್ಲಿ 'ಟ್ವಿಟರ್' ಮಾಡಿದ ಜಾದೂ ವಿಶ್ವದೆಲ್ಲೆಡೆ ಯಶಸ್ವಿಯಾಗಬಹುದೇ? ಗೊತ್ತಿಲ್ಲ. ಆದರೆ ಆ ವಿಶ್ವಾಸದೊಂದಿಗೆ ಹೊರಟಿದೆ ಅಮೆರಿಕದ ಸಾಮಾಜಿಕ ಜಾಲತಾಣ ಕಂಪನಿ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ವೇಳೆ ಟ್ವಿಟರ್ ವಹಿಸಿದ ಪಾತ್ರ ಅಷ್ಟಿಷ್ಟಲ್ಲ. ಇಲ್ಲಿ ಬಳಸಿದ ಚುನಾವಣಾ ಕಾರ್ಯತಂತ್ರಗಳನ್ನು ಪ್ರಸಕ್ತ ವರ್ಷ ಚುನಾವಣೆ ನಡೆಯಲಿರುವ ಇತರೆ ರಾಷ್ಟ್ರಗಳಲ್ಲೂ ಬಳಸಲು ಟ್ವಿಟರ್ ಕಂಪನಿ ಮುಂದಾಗಿದೆ.
ಎಲ್ಲೆಲ್ಲೂ ಟ್ವಿಟರ್ ಮಾಯಾ
ಭಾರತದಲ್ಲಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಗಣ್ಯರು ಚುನಾವಣಾ ಪ್ರಚಾರಕ್ಕಾಗಿ ಟ್ವಿಟರ್ ವೇದಿಕೆಯನ್ನು ಬಳಸಿಕೊಂಡರು. ಜತೆಗೆ ಮೊಬೈಲ್ ಮತ್ತು ಮಾಧ್ಯಮ ಸಂಸ್ಥೆಗಳ ಜತೆ ಪಾಲುದಾರಿಕೆ ನಡೆಸಿ ಟ್ವೀಟ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವ್ಯಾಪಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಭಾರತದಲ್ಲಿ ಗೆದ್ದ 'ಟ್ವಿಟರ್' ಅನ್ನು ಪ್ರಸಕ್ತ ವರ್ಷ ಚುನಾವಣೆ ನಡೆಯಲಿರುವ ಬ್ರೆಜಿಲ್, ಇಂಡೋನೇಷ್ಯಾ ಹಾಗೂ ಅಮೆರಿಕವೂ ಬಳಸುವಂತೆ ಮಾಡುವುದು ಈಗ ಕಂಪನಿಯ ಉದ್ದೇಶ. ಹಾಗಾಗಿ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಟ್ವಿಟರ್ ಕಂಪನಿಯು ಭಾರತದಲ್ಲಿ ಕಲಿತ ಪಾಠಗಳನ್ನು ವಿದೇಶಗಳ ರಾಜಕೀಯ ಕಣದಲ್ಲಿ ಬಿತ್ತರಿಸಲು ಹೊರಟಿದೆ.