'ಕಸ' ತಿನ್ನುವ ಸಾರಿಗೆ ಅಧಿಕಾರಿಗಳು
ಗದಗ: ಗದಗ ವಿಭಾಗದಲ್ಲಿ ವಾರಕ್ಕೊಮ್ಮೆ ಕಸ ಹೊರ ಹಾಕುವ ನೆಪದಲ್ಲಿ ಹಳೆಯ ಕಬ್ಬಿಣದ ವಸ್ತುಗಳನ್ನು ಸಾಗಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಗದಗ-ಹುಬ್ಬಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಮುಖ್ಯ ಘಟಕದಲ್ಲಿ ನಿತ್ಯ ಬಸ್ಗಳ ರಿಪೇರಿ ಆಗುತ್ತದೆ. ಅಂಥ ಬಸ್ಗಳಿಂದ ತೆಗೆಯುವ ಹಳೆ ವಸ್ತುಗಳನ್ನು ಟೆಂಡರ್ ಮೂಲಕ ಹರಾಜು ಹಾಕಬೇಕು. ಆದರೆ, ಅಲ್ಲಿ ಕೆಲವು ಸಿಬ್ಬಂದಿ ಹಾಗೂ ಅಧಿಕಾರಿಗಳು ಅಂಥ ವಸ್ತುಗಳನ್ನು ಕಸದ ರೂಪದಲ್ಲಿ ಹೊರ ಸಾಗಿಸುತ್ತಿದ್ದಾರೆ.
ನಿಯಮ ಏನು ಹೇಳುತ್ತದೆ?: ರಸ್ತೆ ಸಾರಿಗೆ ಸಂಸ್ಥೆ ನಿಯಮದ ಪ್ರಕಾರ ಮುಖ್ಯ ರಿಪೇರಿ ಘಟಕದ ಕಸವನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಈ ಕಸ ವಿಲೇವಾರಿಗೂ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಎರಡು ಇಂಚಿಗಿಂತ ಉದ್ದದ ಕಬ್ಬಿಣದ ವಸ್ತುಗಳು ಹಾಗೂ 250 ಗ್ರಾಂ ಗಿಂತ ಹೆಚ್ಚು ತೂಕದ ವಸ್ತುಗಳನ್ನು ಕಸದಲ್ಲಿ ಸೇರಿಸುವಂತಿಲ್ಲ. ಸಂಗ್ರಹವಾದ ಕಸವನ್ನು ಗುತ್ತಿಗೆದಾರರೇ ತಮ್ಮ ವಾಹನಗಳಲ್ಲಿ ಒಯ್ಯಬೇಕು. ಆದರೆ, ಗದಗ ವಿಭಾಗದಲ್ಲಿ ಸಾರಿಗೆ ಸಂಸ್ಥೆ ವಾಹನದಲ್ಲೇ ಕಸ ಸಾಗಿಸುತ್ತಾರೆ. ಗುತ್ತಿಗೆ ಪಡೆದವರು ಹೇಳಿದಲ್ಲಿಗೆ ಡಂಪ್ ಮಾಡಿ ಬರುತ್ತಾರೆ.
ಹೇಗೆ ನಡೆಯಿತು ರಿಯಾಲಿಟಿ ಚೆಕ್?:ಇಂಥ ಅಕ್ರಮದ ಬಗ್ಗೆ ಸಾರಿಗೆ ಸಂಸ್ಥೆಯ ಕೆಲವು ಪ್ರಾಮಾಣಿಕ ಸಿಬ್ಬಂದಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದರು. ಮೇ 15ರಂದು ಸಂಜೆ ಗದುಗಿನಿಂದ 10 ಕಿ.ಮೀ. ದೂರದ ಬಳಗಾನೂರು ರಸ್ತೆಯ ಹೊಲವೊಂದರಲ್ಲಿ ಸಂಸ್ಥೆಯ ಸರಕು ಸಾಗಾಣಿಕಾ ವಾಹನದಲ್ಲಿ ತಂದಿದ್ದ ವಸ್ತುಗಳನ್ನು ಹಾಕಲಾಯಿತು. ಸ್ಥಳಕ್ಕೆ ಹೋಗಿ ನೋಡಿದಾಗ ಕಸದ ಜತೆ ಹಲವು ಬೆಲೆಬಾಳುವ ವಸ್ತುಗಳು ಹೊರಬಂದಿದ್ದವು. ಈ ಕುರಿತು ಕೇಳಿದಾಗ, ಉತ್ತರಿಸಲು ಅಧಿಕಾರಿಗಳು ಮೇ 24ರ ವರೆಗೆ ಕಾಲಾವಕಾಶ ಕೇಳಿದರು.
ರಾಜ್ಯಾದ್ಯಂತ : ಈ ದಂಧೆ ರಾಜ್ಯಾದ್ಯಂತ ಇದೆಯಂತೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಇದು ವ್ಯಾಪಕವಾಗಿದೆ ಎಂದು ತಿಳಿದುಬಂದಿದೆ.
ಕಸದ ಜತೆ ವಸ್ತುಗಳ ಸಾಗಣೆ ನನ್ನ ಗಮನಕ್ಕೆ ಬಂದಿದೆ. ನಾನು ಮತ್ತು ನಮ್ಮ ಕೆಲವು ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದೇವೆ. ವಿಶೇಷ ತನಿಖಾಧಿಕಾರಿಗಳ ತಂಡವೂ ಸ್ಥಳಕ್ಕೆ ಭೇಟಿ ನೀಡಿದ್ದು, ಅವರ ವರದಿಗಾಗಿ ಕಾಯುತ್ತಿದ್ದೇವೆ.
- ಬಿ.ಎನ್. ಗದ್ದಿಕೇರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಗದಗ
ಶಿವಕುಮಾರ ಕುಷ್ಟಗಿ