ನಮ್ಮ ತಾಳಕ್ಕೆ ತಕ್ಕಂತೆ ಕುಣೀರಿ ಇಲ್ಲದಿದ್ರೆ ಗಂಟು ಮೂಟೆ ಕಟ್ರಿ
ಬೆಂಗಳೂರು: ಕೈ ಮುಗಿದುಕೊಂಡು, ನಾವು ಹೇಳಿದ ಹಾಗೆ ಕೆಲಸ ಮಾಡಿ. ಇಲ್ಲವಾದಲ್ಲಿ ಕಚೇರಿಯಿಂದ ಕಚೇರಿಗೆ ಪ್ರವಾಸ ಮಾಡಲು ಸೂಟ್ಕೇಸ್ ತುಂಬಿಟ್ಟುಕೊಳ್ಳಿ!
ನೂತನ ವರ್ಗಾವಣೆ ನೀತಿಯ ಮೂಲಕ ರಾಜ್ಯದ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೀಡಲು ಹೊರಟಿರುವ ಸಂದೇಶವಿದು. ಚುನಾವಣೆ ಪ್ರಣಾಳಿಕೆಯ ಅಂಶಗಳನ್ನು ಜಾರಿ ಮಾಡಲು 5 ವರ್ಷ ಕಾಲಾವಕಾಶ ಕೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ನಿಮ್ಮ ಅವಧಿ ಒಂದೇ ವರ್ಷ, ಎಲ್ಲ ಸಾಧನೆ ಮಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.
ರಾಜ್ಯ ಸರ್ಕಾರವು ಮೇ 20ರಂದು ಹೊರಡಿಸಿರುವ ನೂತನ ವರ್ಗಾವಣೆ ನೀತಿ ಪ್ರಕಾರ ಎಲ್ಲ ಗುಂಪು-ಎ ಹಾಗೂ ಬಿ ಹುದ್ದೆಗಳ ಸರ್ಕಾರಿ ಸಿಬ್ಬಂದಿಗಳ ಕನಿಷ್ಠ ಸೇವಾವಧಿಯನ್ನು 1 ವರ್ಷಕ್ಕೆ ಇಳಿಸಲಾಗಿದೆ. ಈ ಮೊದಲು ಅಧಿಕಾರಿಗಳ ಕನಿಷ್ಠ ಸೇವಾವಧಿ 3 ವರ್ಷಕ್ಕೆ ಮಿತಿಗೊಳಿಸಲಾಗಿತ್ತು. ನೂತನ ವರ್ಗಾವಣೆ ನೀತಿಯ ಮೂಲಕ ಹಿರಿಯ ಅಧಿಕಾರಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ. ತನ್ನ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ 1 ವರ್ಷದ ನಂತರ ನಿಮ್ಮ ಹುದ್ದೆ ಭದ್ರವಲ್ಲ ಎಂದು ಹೇಳುವುದೇ ಸರ್ಕಾರದ ಉದ್ದೇಶವಾಗಿದೆ.
ಇದರಿಂದ ಯಾವೊಬ್ಬ ಅಧಿಕಾರಿಯೂ ಮೈಚಳಿ ಬಿಟ್ಟು ಕೆಲಸ ಮಾಡುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ. 'ಪೊಲಿಟಿಕಲ್ ಬಾಸ್'ಗಳು ಹೇಳಿದಂತೆ ಕೇಳದೇ ಕೆಲಸ ಮಾಡಿದರೆ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಅಧಿಕಾರಿಗಳ ತಲೆಗೆ ಬಂದರೆ, ಸರ್ಕಾರಿ ನಿಯಮಕ್ಕಿಂತ ಮುಖ್ಯಮಂತ್ರಿ ಹಾಗೂ ಸಚಿವರು ಹೇಳುವುದೇ ನಿಯಮವಾಗುತ್ತದೆ. ಸರ್ಕಾರದ ಈ ತೀರ್ಮಾನದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕೇಂದ್ರದಲ್ಲಿಯೇ ಕನಿಷ್ಠ ಸೇವಾವಧಿಯು 2 ವರ್ಷವಿರುವಾಗ ರಾಜ್ಯದಲ್ಲಿ ಬದಲಾವಣೆ ಮಾಡಿರುವುದು ಸೂಕ್ತವಲ್ಲ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯ. ಮತ್ತೊಂದೆಡೆ ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ಪ್ರತಿ ಸಿಬ್ಬಂದಿಯ ಕನಿಷ್ಠ ಸೇವಾವಧಿ 2 ವರ್ಷವಾಗಿರಲೇಬೇಕು.
ಒಂದು ವರ್ಷದಲ್ಲಿ ಏನು ಮಾಡಬೇಕು?
ಹಣಕಾಸು, ಗೃಹ, ಶಿಕ್ಷಣ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಯಂತಹ ಇಲಾಖೆಗಳನ್ನು ಅರ್ಥೈಸಿಕೊಳ್ಳಲೇ ಅಧಿಕಾರಿಗಳಿಗೆ ಅರ್ಧ ವರ್ಷ ಕಳೆದುಹೋಗುತ್ತದೆ. ಮುಂದಿನ 6 ತಿಂಗಳಲ್ಲಿ ತನಗೆ ತೋಚಿದ ಕೆಲಸವನ್ನು ಅಧಿಕಾರಿ ಮಾಡುವಷ್ಟೊತ್ತಿಗೆ ವರ್ಗಾವಣೆಯ ಭೂತ ಕಾಡಲು ಆರಂಭಿಸುತ್ತದೆ. ಕುಟುಂಬ ಹಾಗೂ ಇತರ ಸಮಸ್ಯೆಗಳಿರುವ ಅಧಿಕಾರಿಗಳು ಅನಿವಾರ್ಯವಾಗಿ ರಾಜಕಾರಣಿಗಳ ಸಹವಾಸವೇ ಲೇಸು ಎಂಬ ತೀರ್ಮಾನಕ್ಕೆ ಬರುತ್ತಾರೆ. ಈ ಅವಧಿಯಲ್ಲಿ ಅಧಿಕಾರಿಗಳು ಇಲಾಖೆಯ ಅಭಿವೃದ್ಧಿಗೆ ಮಾಡಬೇಕಾದ ಕೆಲಸಕ್ಕಿಂತ ಕುರ್ಚಿ ಕಾಯುವ ಕೆಲಸದಲ್ಲಿಯೇ ಮಗ್ನರಾಗಿರುತ್ತಾರೆ. ಯಾವುದೇ ಸಚಿವರನ್ನು ಕೇಳಿದರೆ, 'ನಾವು ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷವಾಯಿತು, ಕಾದು ನೋಡಿ' ಎಂಬ ಹೇಳಿಕೆ ನೀಡುತ್ತಾರೆ. ಆದರೆ ಇದೇ ಸಚಿವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಇಂತಹ ಅವಕಾಶ ಕೊಡುವ ಪ್ರಯತ್ನಕ್ಕೆ ಎಳ್ಳು ನೀರು ಬಿಟ್ಟು, ಕನಿಷ್ಠ ಅವಧಿಯನ್ನು 1 ವರ್ಷಕ್ಕೆ ಇಳಿಸಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಖಡಕ್ ಅಧಿಕಾರಿಗಳಿಗೆ ವರ್ಗಾವಣೆ ಅಥವಾ ರಜೆಯ ಶಿಕ್ಷೆ ನೀಡಿದೆ. ಆ ಸಂದರ್ಭದಲ್ಲಿ ಕನಿಷ್ಠ ಸೇವಾವಧಿ ಕುರಿತಂತೆಯೇ ವಿವಾದ ಏರ್ಪಟ್ಟಿತ್ತು. ಇಂತಹ ವಿವಾದಗಳಿಗೆ ಎಡೆ ಮಾಡಕೊಡದಿರಲು ಸರ್ಕಾರ ಇಂತಹ ತಿದ್ದುಪಡಿ ಮಾಡಿದೆ ಎಂಬ ಮಾತುಗಳು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.
ರಾಜ್ಯ ಸರ್ಕಾರದ ನೂತನ ವರ್ಗಾವಣೆ ನೀತಿಯು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದು ಕಾಂಗ್ರೆಸ್ನ ಮಂತ್ರಿಗಳ ಪಾಲಿಗೆ 'ವರ್ಗಾವಣೆ ಭಾಗ್ಯ'ವಾಗುತ್ತದೆ. ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗೆ ಇದೊಂದು 'ದೌರ್ಭಾಗ್ಯ'
- ಜಗದೀಶ್ ಶೆಟ್ಟರ್, ವಿಧಾನಸಭಾ ಪ್ರತಿಪಕ್ಷ ನಾಯಕ
- ರಾಜೀವ ಹೆಗಡೆ