ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ, ರಾಜನಾಥ್ ಭೇಟಿಗೆ ಕ್ಯೂ

ಸೋಮವಾರ ನಡೆಯಲಿರುವ ನೂತನ ಪ್ರಧಾನಿಯ ಪ್ರಮಾಣ ವಚನದ...

Mainashree
Updated On : 24 May 2014, 11:04 am

ನವದೆಹಲಿ: ಸೋಮವಾರ ನಡೆಯಲಿರುವ ನೂತನ ಪ್ರಧಾನಿಯ ಪ್ರಮಾಣ ವಚನದ ಬಿಡುವಿಲ್ಲದ ತಯಾರಿಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಬಿಜೆಪಿಯ ಹಿರಿಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದರು.
ಮೋದಿಯವರ ಆಪ್ತ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ. ನದ್ದಾ ಅವರು ಗುಜರಾತ್ ಭವನಕ್ಕೆ ಆಗಮಿಸಿ ಮೋದಿಯವನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆನಂತರ, ಅಮಿತ್ ಶಾ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು.
ಅಮಿತ್ ಶಾ ನಂತರ, ಮೋದಿಯವನ್ನು ಭೇಟಿಯಾಗಿದ್ದು ಪಕ್ಷದ ಮಾಜಿ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು. ಮೋದಿಯೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಅವರು ನಿರ್ಗಮಿಸಿದ ಬಳಿ, ನಿಯೋಜಿತ ಪ್ರಧಾನಿಯನ್ನು ಭೇಟಿ ಮಾಡಲು ಉಮಾ ಭಾರತಿ ಆಗಮಿಸಿದರು. ಉಮಾ ಅವರು ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನು, ಉಮಾ ಭಾರತಿ ಅವರ ನಂತರ ಮೋದಿ ಅವರನ್ನು ಭೇಟಿ ಮಾಡಿದ್ದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಮುಖ್ಯಸ್ಥ ರಾಮದಾಸ್ ಅಥವಾಲೆ. ರಾಮದಾಸ್ ಅವರು ಮೋದಿ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುವದು ಬಹುತೇಕ ಖಚಿತವಾಗಿದೆ. ಅತ್ತ, ಅಶೋಕ ರಸ್ತೆಯಲ್ಲಿನ ರಾಜನಾಥ್ ಸಿಂಗ್ ಅವರ ನಿವಾಸಕ್ಕೂ ಬಹುತೇಕ ನಾಯಕರು ಭೇಟಿ ನೀಡಿದರು. ಇವರಲ್ಲಿ ಮೇನಕಾ ಗಾಂಧಿ, ಉದಿತ್ ರಾಜ್, ದೆಹಲಿ ಬಿಜೆಪಿ ಘಟಕದ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ವಿಜಯ್ ಗೋಯೆಲ್ ಹಾಗೂ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಐ.ಡಿ. ಸ್ವಾಮಿ ಪ್ರಮುಖರು.
ಬಿಜೆಪಿ ರಾಷ್ಟ್ರೀಯ ಮಹಾ ಕಾರ್ಯದರ್ಶಿ ರಾಮ್ ಲಾಲ್ ಸಹ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು.
ಈ ಪ್ರಮುಖರಷ್ಟೇ ಅಲ್ಲದೇ, ಹಲವಾರು ಬಿಜೆಪಿಯ ಮುಖಂಡರು ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ಬಂದು ಹೋಗುವುದು ದಿನವಿಡೀ ನಡೆದೇ ಇತ್ತು.

ಸಮರ್ಥರ ಪುಟ್ಟ ಸಂಪುಟ
ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಸಲ ಆಪ್ತರ ಬಳಿ ತಮ್ಮ ಸಚಿವ ಸಂಪುಟದ ಕುರಿತು ಸುಳಿವು ನೀಡಿದ್ದಾರೆ. ಮೂಲಗಳ ಪ್ರಕಾರ ಮೋದಿ ಸಂಪುಟ 'ಸಮರ್ಥರ ಪುಟ್ಟ ಸಂಪುಟ' ಆಗಿರುತ್ತದೆ. ಪರಸ್ಪರ ಸಂಬಂಧ ಇರುವ ಇಲಾಖೆಗಳನ್ನು ವಿಲೀನಗೊಳಿಸಿ ಸರ್ಕಾರದ ಗಾತ್ರ ಕಡಿತ ಮಾಡಲು ಉದ್ದೇಶಿಸಿರುವ ಮೋದಿ, ಸಂಪುಟ ರಚನೆಯಲ್ಲೂ ಅದೇ ತತ್ವ ಪಾಲಿಸಲಿದ್ದಾರೆ. ಶನಿವಾರ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಮುಖಂಡರೊಂದಿಗೆ ಮೋದಿ ಸಂಪುಟ ರಚನೆ ಸಂಬಂಧ ಸಾಲುಸಾಲು ಸಭೆ ನಡೆಸಿದರು.  ರಾಜನಾಥ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅನಂತಕುಮಾರ್, ಅರುಣ್ ಶೌರಿ, ರಾಜೀವ್ ಪ್ರತಾಪ್ ರೂಡಿ, ರವಿಶಂಕರ ಪ್ರಸಾದ್ ಅವರು ಮೋದಿ ಸಂಪುಟ ಸೇರುವುದು ಖಚಿತ. ಮಿತ್ರಪಕ್ಷಗಳಾದ ಶಿವಸೇನೆ, ಟಿಡಿಪಿ, ಅಕಾಲಿದಳ, ಎಲ್‌ಜಿಪಿಗಳಿಗೂ ಸ್ಥಾನ ಸಿಗಲಿದೆ. ಅಗತ್ಯ ಬಿದ್ದರೆ ಕೆಲವು ತಿಂಗಳ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಲಾಗಿದೆ. ಎನ್‌ಡಿಎ ಅಂಗಪಕ್ಷವಾಗಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖ್ಯಸ್ಥ ರಾಮದಾಸ್ ಅಥವಳೆ ಶನಿವಾರ ಮೋದಿ ಅವರನ್ನು ಭೇಟಿ ಮಾಡಿದ್ದರು. ಅವರೂ ಸಚಿವಾಕಾಂಕ್ಷಿ. ಆದರೆ ಸಚಿವ ಸ್ಥಾನ ಸಿಗುವ ಬಗ್ಗೆ ಇನ್ನೂ ಭರವಸೆ ಸಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement