ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿಗಾಗಿ ಷರೀಫನಾದ ನವಾಜ್

ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಅಧ್ಯಕ್ಷ...

ಅಮೃತಸರದ ಕಲಾವಿದನೊಬ್ಬ ಚಹಾ ಕಪ್‌ಗಳಿಂದ ಪ್ರಧಾನಿ ನರೇಂದ್ರಮೋದಿ ಚಿತ್ರ ಬಿಡಿಸುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು.
Mainashree
Updated On : 25 May 2014, 1:06 am

-27ರಂದು ಮೋದಿ ಜತೆ ನವಾಜ್ ದ್ವಿಪಕ್ಷೀಯ ಮಾತುಕತೆ

ಇಸ್ಲಾಮಾಬಾದ್:
ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ ಆಗಮಿಸುವುದು ಖಚಿತವಾಗಿದೆ. ಈ ಕುರಿತಂತೆ ಪಾಕ್‌ನ ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ಇಲಾಖೆಗಳು ಅಧಿಕೃತ ಹೇಳಿಕೆ ಹೊರಡಿಸಿವೆ. ಷರೀಫ್ ಅವರ ಭಾರತ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದು ಅಲ್ಲಿನ ಸೇನೆ. ಆದರೆ ಷರೀಫ್ ಅವರ ಸಹೋದರ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಒಪ್ಪಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಷರೀಫ್ ಅವರು ಭಾರತಕ್ಕೆ ಸೋಮವಾರ ಬೆಳಗ್ಗೆ ಆಗಮಿಸಲಿದ್ದಾರೆ.

ಆಶಾಭಾವ
ನವಾಜ್ ಷರೀಫ್ ಅವರ ಈ ಭೇಟಿ ಬಗ್ಗೆ ಪಾಕಿಸ್ತಾನ ತುಸು ಹೆಚ್ಚೇ ನಿರೀಕ್ಷೆ ಇಟ್ಟುಕೊಂಡಿದೆ. ಇದು ಕೇವಲ ಜೊತೆಯಾಗಿ ಫೋಟೋ ತೆಗೆಸಿಕೊಳ್ಳುವ ಅಥವಾ ಕೈಕುಲುಕುವ ಭೇಟಿಯಾಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಕೆಲವು ರಚನಾತ್ಮಕ ಚರ್ಚೆಗಳು ಮೋದಿ ಮತ್ತು ಷರೀಫ್ ಅವರ ಮಧ್ಯೆ ಜರುಗಲಿವೆ ಎಂದು ಪಿಎಂಎಲ್‌ಎನ್‌ನ ವಕ್ತಾರ ತಾರೀಖ್ ಅಜೀಜ್ ಹೇಳಿದ್ದಾರೆ.

ಭಿನ್ನಾಭಿಪ್ರಾಯ ಇಲ್ಲ
ನವಾಜ್ ಷರೀಫ್ ಅವರ ಭಾರತ ಭೇಟಿ ಸಂಬಂಧ ಸೇನೆ ಮತ್ತು ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ತಾರೀಖ್ ಅಜೀಜ್ ಸ್ಪಷ್ಟಪಡಿಸಿದ್ದಾರೆ. ಆದರೆ ನಾವು ಎಲ್ಲಾ ಇಲಾಖೆಗಳ ಜೊತೆ ಮಾತುಕತೆ ನಡೆಸಿ ಸಮನ್ವಯತೆ ಸಾಧಿಸಿದ್ದೇವೆ. ಇದಕ್ಕಾಗಿಯೇ ಎರಡು ದಿನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

27ಕ್ಕೆ ಮಾತುಕತೆ
ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭದಲ್ಲಿ ಷರೀಫ್ ಮತ್ತವರ ನಿಯೋಗ ಪಾಲ್ಗೊಳ್ಳಲಿದೆ. ಅಂದು ದೆಹಲಿಯಲ್ಲೇ ಉಳಿಯಲಿರುವ ಇದು, ಮಂಗಳವಾರ ಬೆಳಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದೆ. ಅಂದೇ ಅವರು ಪಾಕಿಸ್ತಾನಕ್ಕೆ ವಾಪಸಾಗಲಿದ್ದಾರೆ ಎಂದು ತಾರೀಖ್ ಅಜಿಮ್ ತಿಳಿಸಿದ್ದಾರೆ.


ಮಾಧ್ಯಮಗಳ ಬೆಂಬಲ

ಪಾಕಿಸ್ತಾನದ ರಾಜಕೀಯ ಲೆಕ್ಕಾಚಾರ ಏನೇ ಇರಲಿ, ಅಲ್ಲಿನ ಮಾಧ್ಯಮಗಳಂತೂ ಶರೀಫ್ ಕೈಗೊಳ್ಳಲಿರುವ ಭಾರತ ಪ್ರವಾಸಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಪಾಕಿಸ್ತಾನ ರೇಡಿಯೋ ಸೇರಿದಂತೆ, ಭಾರತದ ನೂತನ ಪ್ರಧಾನಿ ಹಾಗೂ ಶರೀಫ್ ಅವರೊಂದಿಗೆ ಭೇಟಿಗೆ ಸೃಷ್ಟಿಯಾಗಿರುವ ಈ ಅವಕಾಶ ಎರಡೂ ದೇಶಗಳ ಸಂಬಂಧಗಳ ವೃದ್ಧಿಗೆ ಹೊಸ ಅಧ್ಯಾಯವನ್ನು ತೆರೆಯಲಿದೆ ಎಂದು ಆಶಿಸಿವೆ.


ಕಾಂಗ್ರೆಸ್ ಭಿನ್ನ ರಾಗ
ನವಾಜ್ ಷರೀಫ್ ಭಾಗವಹಿಸುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಭಿನ್ನರಾಗ ಮುಂದುವರಿಸಿದೆ. '26/11 ದಾಳಿ ಬಳಿಕ ನಾವು ಪಾಕ್ ಪ್ರಧಾನಿಯನ್ನು ಆಮಂತ್ರಿಸಿರಲಿಲ್ಲ. ನಮ್ಮ ಪ್ರಧಾನಿಯನ್ನೂ ಕಳುಹಿಸಿರಲಿಲ್ಲ. ನಮ್ಮ ಕನಿಷ್ಠ ಬೇಡಿಕೆಯನ್ನೂ ಪರಿಗಣಿಸದ ದೇಶದೊಂದಿಗೆ ಫಲಪ್ರದ ಮಾತುಕತೆ ನಿರೀಕ್ಷಿಸುವುದಾದರೂ ಹೇಗೆ' ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ. ಭಯೋತ್ಪಾದನೆ, ದಾವೂದ್ ಹಸ್ತಾಂತರ ಮೊದಲಾದ ವಿಚಾರಗಳನ್ನು ಷರೀಫ್ ಜತೆಗೆ ಮೋದಿ ಪ್ರಸ್ತಾಪಿಸಲಿ ಎಂದು ಮನೀಷ್ ತಿವಾರಿ ಒತ್ತಾಯಿಸಿದ್ದಾರೆ.

ಎಂಡಿಎಂಕೆ ಪ್ರತಿಭಟನೆ

ಮೋದಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಭಾಗವಹಿಸುವುದನ್ನು ವಿರೋಧಿಸಿ ಮೇ 26ರಂದು ದೆಹಲಿ, ಚೆನ್ನೈಗಳಲ್ಲಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಎನ್‌ಡಿಎ ಅಂಗಪಕ್ಷ ಎಂಡಿಎಂಕೆ ನಿರ್ಧರಿಸಿದೆ. 'ನಾವು ಈಗಲೂ ಬಿಜೆಪಿ ಮತ್ತು ಮೋದಿ ಪರವಾಗಿದ್ದೇವೆ. ನಮ್ಮ ವಿರೋಧ ಇರುವುದು ರಾಜಪಕ್ಸೆಗೆ ಆಮಂತ್ರಣ ನೀಡಿರುವುದಕ್ಕೆ ಮಾತ್ರ. ಇದು ತಮಿಳರ ವಿಚಾರ ಒಳಗೊಂಡಿರುವುದರಿಂದ ದ್ರಾವಿಡ ಪಕ್ಷವಾಗಿ ಪ್ರತಿಭಟನೆ ದಾಖಲಿಸುವುದು ನಮ್ಮ ಕರ್ತವ್ಯ' ಎಂದು ಪಕ್ಷದ ಮುಖಂಡ ವೈಕೋ ತಿಳಿಸಿದ್ದಾರೆ.

ಪುಟ್ಟ ನಿಯೋಗ

ಪಾಕ್ ಪ್ರಧಾನಿಯೊಂದಿಗೆ ಈ ಬಾರಿ ಚಿಕ್ಕದೊಂದು
ನಿಯೋಗ ಬರುತ್ತಿದೆ. ಷರೀಫ್ ಪುತ್ರಿ ಮರಿಯಮ್, ಸಲಹೆಗಾರ ಸರ್ತಾರ್ ಅಜೀಜ್ ಮತ್ತು ವಿದೇಶಾಂಗ ಕಾರ್ಯದರ್ಶಿ ತಾರೀಖ್ ಫಾತೇಮಿ ಇರಲಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement