ಯುಪಿಎ ಸರ್ಕಾರದ ಕೊನೆ ವರ್ಗಾವಣೆಗೆ ತಡೆ
ನವದೆಹಲಿ: ಯುಪಿಎ ಸರ್ಕಾರ ಕೊನೆಯ ದಿನಗಳಲ್ಲಿ ನಡೆಸಿದ್ದ ಅಬಕಾರಿ ಮತ್ತು ಸುಂಕ ಇಲಾಖೆಯ 109 ಹಿರಿಯ ಅಧಿಕಾರಿಗಳ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೇ 16ರಂದು ಐವರು ಹೆಚ್ಚುವರಿ ಆಯುಕ್ತರು ಮತ್ತು ಮೇ 20ರಂದು 104 ಸಹಾಯಕ ಆಯುಕ್ತರನ್ನು ವರ್ಗ ಮಾಡಲಾಗಿತ್ತು. ಎರಡೂ ಆದೇಶಗಳನ್ನು ಶುಕ್ರವಾರ ತಡೆಹಿಡಿದಿರುವ ಕೇಂದ್ರೀಯ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ), ಮುಂದಿನ ಆದೇಶದವರೆಗೆ ಯಾರೂ ಹೊಸ ಹುದ್ದೆಗಳಲ್ಲಿ ಅಧಿಕಾರ ವಹಿಸಿಕೊಳ್ಳಬಾರದು ಎಂದು ಸೂಚಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವ್ಯಾಪ್ತಿಗೆ ಒಳಪಡುವ ಆದಾಯ ತೆರಿಗೆ ಇಲಾಖೆಯಲ್ಲಿಯೂ ಆಯುಕ್ತರ ಶ್ರೇಣಿಯ 140ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ. 'ಸಿಬಿಡಿಟಿ ವರ್ಗಾವಣೆ ಕುರಿತಾಗಿಯೂ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹಣಕಾಸು ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.