ವೃತ್ತಿಶಿಕ್ಷಣ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ
ಕೆಲ ತಿದ್ದುಪಡಿಗಳೊಂದಿಗೆ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ...
-2015-16ನೇ ಶೈಕ್ಷಣಿಕ ವರ್ಷದಿಂದ ಜಾರಿ
ಕ.ಪ್ರ. ವಾರ್ತೆ | ಬೆಂಗಳೂರು |ಮೇ 24
ಕೆಲ ತಿದ್ದುಪಡಿಗಳೊಂದಿಗೆ ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ-2006ನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಳೆಗಾಲದ ಅಧಿವೇಶನದಲ್ಲಿ ಕಾಯಿದೆಗೆ ಸಣ್ಣಪುಟ್ಟ ತಿದ್ದುಪಡಿ ತಂದು 2015-16ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲು ವಿಧಾನಸೌಧದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹತ್ತಾರು ಗೋಲ್ಮಾಲ್ಗಳಿಗೆ ಈ ಕಾಯಿದೆಯಿಂದ ಮಾತ್ರ ಪರಿಹಾರ ನೀಡಲು ಸಾಧ್ಯವಿದೆ ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆ ಜಾರಿಗೆ ಮತ್ತೆ ರಾಜ್ಯ ಸರ್ಕಾರ ಮುಂದಾಗಿದೆ.
ಆದರೆ ಈ ಬಾರಿ ಕಾಯಿದೆ ಜಾರಿಗೆ ಮುನ್ನ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಖಾಸಗಿ ಕಾಲೇಜು ಹಾಗೂ ರಾಜಕೀಯ ಪಕ್ಷಗಳೊಡನೆ ವಿಸ್ತೃತ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಕಾಯಿದೆ ತಿದ್ದುಪಡಿ ಕುರಿತಂತೆ ಕಾನೂನು ಇಲಾಖೆಯ ನೆರವನ್ನು ಕೂಡ ಕೋರಲಾಗಿದೆ. ಇದರೊಂದಿಗೆ ಬಹು ನಿರೀಕ್ಷಿತ 2006ರ ಕಾಯಿದೆಯನ್ನು ಕೆಲ ಬದಲಾವಣೆಯೊಂದಿಗೆ ಜಾರಿ ಮಾಡುವುದು ನಿಶ್ಚಿತವಾಗಿದೆ.
ಕಳೆದ ಡಿಸೆಂಬರ್ನಲ್ಲಿಯೇ ಕಾಯಿದೆ ಜಾರಿಗೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಎರಡು ಸಮಿತಿ ರಚಿಸಲಾಗಿತ್ತು. ಆದರೆ ವಿದ್ಯಾರ್ಥಿ ಸಂಘಟನೆ ಹಾಗೂ ರಾಜಕೀಯ ಮುಖಂಡರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಕಾಯಿದೆ ಕೈಬಿಟ್ಟು ಕಳೆದ 7 ವರ್ಷದಿಂದ ನಡೆದುಬಂದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸೀಟು ಹಂಚಿಕೆ ಹಾಗೂ ಶುಲ್ಕಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ನಿಯಮದಲ್ಲಿ ಬದಲಾವಣೆ?
ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ ಜಾರಿಯಿಂದ ಖಾಸಗಿ ಕಾಲೇಜುಗಳ ಶುಲ್ಕ ವ್ಯಾಪಕವಾಗಿ ಏರುತ್ತದೆ ಎಂಬ ದೊಡ್ಡ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಪ್ರತಿಷ್ಠಿತ ಕಾಲೇಜುಗಳ ಶುಲ್ಕವು ಲಕ್ಷ ರುಪಾಯಿಯ ಆಸುಪಾಸಿನಲ್ಲಿರಬಹುದು ಎಂಬ ಮಾತು ಕೂಡ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜುಗಳ ಗರಿಷ್ಠ ಶುಲ್ಕಕ್ಕೆ ಸಂಬಂಧಿಸಿ ನಿಯಂತ್ರಣ ಹೇರಿ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಒಟ್ಟಾರೆ ಕಾಲೇಜುಗಳ ಶುಲ್ಕವು ಒಂದು ಮಿತಿ ದಾಟದಂತೆ ಕಾಯಿದೆಯಲ್ಲಿಯೇ ನಿಯಮ ರೂಪಿಸಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಕೆಲ ಖಾಸಗಿ ಕಾಲೇಜುಗಳು ವಿರೋಧ ವ್ಯಕ್ತಪಡಿಸಿದ್ದರೂ, ಒಟ್ಟಾರೆ ಕಾಯಿದೆ ಜಾರಿಯಾಗುವುದನ್ನು ಸ್ವಾಗತಿಸಿವೆ.
2006ರ ಕಾಯಿದೆ ಪ್ರಕಾರವೂ ಎರಡು ಪರೀಕ್ಷೆ ನಡೆಸಲು ಅವಕಾಶವಿದೆ. ಆದರೆ ಸೀಟ್ ಬ್ಲಾಕಿಂಗ್ ಹಾಗೂ ಕಾಮೆಡ್-ಕೆ ಗಲಾಟೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಸುವ ಬಗೆಗೂ ಸಭೆಯಲ್ಲಿ ಚರ್ಚೆ ನಡೆದಿದೆ.
ಆದರೆ ಇವೆಲ್ಲ ವಿಚಾರಗಳಿಗೆ ಸಂಬಂಧಿಸಿ ಮುಂದಿನ ಎರಡು ತಿಂಗಳಲ್ಲಿ ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ತಜ್ಞರು, ರಾಜಕೀಯ ಪಕ್ಷಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸರಣಿ ಸಭೆ ನಡೆಸಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯ ಶಿಕ್ಷಣ ರಾಜ್ಯ ಸಚಿವ ಶರಣಪ್ರಕಾಶ್ ಪಾಟೀಲ್, 'ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯಿದೆ ಜಾರಿಗೆ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು. ವಿದ್ಯಾರ್ಥಿಗಳ ಹಿತವನ್ನು ಸರ್ಕಾರ ಬಲಿಕೊಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.
ಸೂಪರ್ ನ್ಯೂಮರಿಕ್ ಸೀಟು ಹಂಚಿಕೆಗೆ ಹೊಸ ನಿಯಮ
ಬೆಂಗಳೂರು: ಸೂಪರ್ ನ್ಯೂಮರಿಕ್ ಕೋಟಾ (ಎಸ್ಎನ್ಕ್ಯೂ) ಸೀಟು ಹಂಚಿಕೆಗೆ ರಾಜ್ಯ ಸರ್ಕಾರ ನೂತನ ನಿಯಮ ರೂಪಿಸಿದೆ.
ವಿದ್ಯಾರ್ಥಿಗಳ ಆದಾಯ ಹಾಗೂ ಅಂಕ ಆಧರಿಸಿ ಸೀಟುಗಳನ್ನು ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಎಸ್ಎನ್ಕ್ಯೂ ಸೀಟುಗಳು ಲಭ್ಯವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಎಸ್ಎನ್ಕ್ಯೂ ಸೀಟುಗಳಿಗೆ ಆದಾಯ ಮಿತಿಯನ್ನು 6 ಲಕ್ಷಕ್ಕೆ ಏರಿಸಲಾಗಿದೆ. ಆದರೆ ಇದರಿಂದ ಕಡಿಮೆ ಆದಾಯವಿರುವ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ 1 ಲಕ್ಷದೊಳಗೆ ಆದಾಯ ಹೊಂದಿದ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯದಲ್ಲಿ ಸೀಟು ನೀಡಲಾಗುವುದು. ನಂತರ 1 ಲಕ್ಷದಿಂದ 2 ಲಕ್ಷ, 2 ಲಕ್ಷದಿಂದ 3 ಲಕ್ಷ, 3 ಲಕ್ಷದಿಂದ 4.30 ಲಕ್ಷ, 4.30 ಲಕ್ಷದಿಂದ 6 ಲಕ್ಷ ಎಂಬ ಒಟ್ಟು 6 ವಿಭಾಗಗಳನ್ನು ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು. ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಎಐಸಿಟಿಇ ಎಸ್ಎನ್ಕ್ಯೂ ಸೀಟುಗಳ ನಿಯಮವನ್ನು ಪ್ರಾರಂಭಿಸಿದ್ದವು. ಆದರೆ ಆದಾಯ ಮಿತಿಯ ಪ್ರಮಾಣ ಹೆಚ್ಚಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ವಾಸ್ತವದಲ್ಲಿ ಸೀಟು ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕಡಿಮೆ ಆದಾಯವಿರುವವರಿಗೆ ಮೊದಲ ಆದ್ಯತೆಯಂತೆ ಸೀಟು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ದೇಶಪಾಂಡೆ ತಿಳಿಸಿದರು.
ರಾಜ್ಯದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಕೋರ್ಸ್ಗಳಲ್ಲಿ ಒಟ್ಟಾರೆ 10 ಸಾವಿರಕ್ಕೂ ಅಧಿಕ ಎಸ್ಎನ್ಕ್ಯೂ ಸೀಟುಗಳಿವೆ. ಈ ನಿಯಮ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ.