ಸೋನಿಯಾ ಆಯ್ಕೆ
ನಿರೀಕ್ಷೆಯಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾಗಾಂಧಿ...
-ಸೋಲಿನಿಂದ ನೋವಾಗಿದೆ, ಆತ್ಮಾವಲೋಕನ ಮಾಡಿಕೊಳ್ಳೋಣ
ನವದೆಹಲಿ: ನಿರೀಕ್ಷೆಯಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾಗಾಂಧಿ ಮರು ಆಯ್ಕೆ ಆಗಿದ್ದಾರೆ.
ಶನಿವಾರ ನಡೆದ ಕಾಂಗ್ರೆಸ್ ಲೋಕಸಭಾ ಸದಸ್ಯರ ಸೋನಿಯಾಗಾಂಧಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದರೂ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷ ಕೇವಲ 44 ಸ್ಥಾನಗಳನ್ನು ಪಡೆದು ಅಧಿಕೃತ ವಿರೋಧ ಪಕ್ಷವಾಗುವ ಅರ್ಹತೆಯನ್ನೂ ಕಳೆದುಕೊಂಡಿದೆ. ಕಾರ್ಯಕಾರಿ ಸಮಿತಿಯಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿ ಮೇಲೆ ನಿಷ್ಠೆ ವ್ಯಕ್ತಪಡಿಸಿದಂತೆ, ಸಂಸದೀಯ ಪಕ್ಷದ ಸಭೆಯಲ್ಲೂ ಉಭಯ ನಾಯಕರ ನಾಯಕತ್ವದಲ್ಲೇ ಪಕ್ಷವನ್ನು ಪುನಶ್ಚೇತನಗೊಳಿಸುವ ನಿರ್ಣಯ ಅಂಗೀಕರಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾಗಾಂಧಿ ಹೆಸರು ಪ್ರಸ್ತಾಪಿಸಿದರು. ವೀರಪ್ಪಮೊಯ್ಲಿ ಸೇರಿದಂತೆ ಹಲವು ನಾಯಕರು ಅನುಮೋದಿಸಿದರು. ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಮಾತನಾಡಿದ ಸೋನಿಯಾಗಾಂಧಿ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸಲಿದೆ ಎಂದರು.
ನಾವು ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡೋಣ, ಜನಪರ ವಿಷಯಗಳನ್ನು ಪ್ರಸ್ತಾಪಿಸೋಣ. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಅವರಿಗೆಲ್ಲ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಸೋಲಿನಿಂದ ನನಗೆ ನೋವಾಗಿದೆ. ಜನರ ಅಸಮಾಧಾನ ಮತ್ತು ಆಶೋತ್ತರಗಳನ್ನು ನಾವು ಸರಿಯಾಗಿ ಅಂದಾಜಿಸಲಿಲ್ಲ. ಆದರೆ, ನಾವು ವೈಯಕ್ತಿಕವಾಗಿ, ಸಾಮೂಹಿಕವಾಗಿ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಅನ್ನು ಮತ್ತಷ್ಟು ಪ್ರಬಲವಾಗಿ ರೂಪಿಸಲು ಪ್ರಯತ್ನಿಸುತ್ತೇನೆ. ಹಿಂದೆಯೂ ಕಾಂಗ್ರೆಸ್ಗೆ ಸೋಲು ಗೆಲುವು ಹೊಸದೇನಲ್ಲ. ಹಿಂದೆಯೂ ಸೋತು ಗೆದ್ದಿದೆ. ನಾವು ಮರು ಸಂಘಟಿತರಾಗಿ ಪುನಶ್ಚೇತನಗೊಳ್ಳಬೇಕಿದೆ ಎಂದರು. ಮನಮೋಹನ್ ಸಿಂಗ್ ಪ್ರಬುದ್ಧ ಹಾಗೂ ಗೌರವಯುತ ನಾಯಕತ್ವ ನೀಡಿದ್ದಾರೆಂದೂ ಸೋನಿಯಾಗಾಂಧಿ ಶ್ಲಾಘಿಸಿದರು. ಪ್ರಧಾನಿ ಆಗಿ ಆಯ್ಕೆಯಾಗಿರುವ ನರೇಂದ್ರಮೋದಿ ಅವರನ್ನು ಅಭಿನಂದಿಸಿದರು.
ಖರ್ಗೆಗಿಲ್ಲ ಸದನ ನಾಯಕತ್ವ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗುವ ಸಾಧ್ಯತೆ ಇಲ್ಲ. ಲೋಕಸಭೆಯಲ್ಲಿ ರಾಹುಲ್ಗಾಂಧಿ ಕಾಂಗ್ರೆಸ್ ಸದನದ ನಾಯಕನಾಗಬೇಕು ಎಂದು ವೀರಪ್ಪಮೊಯ್ಲಿ ಸೇರಿದಂತೆ ಹಲವು ನಾಯಕರು ಪ್ರಸ್ತಾಪಿಸಿದರು. ಆದರೆ, ರಾಹುಲ್ಗಾಂಧಿ ನಿರಾಕರಿಸಿದರು. ಈ ಸ್ಥಾನಕ್ಕೆ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಶನಿವಾರ ಸಂಸದೀಯ ಪಕ್ಷದ ಸಭೆಯಲ್ಲಿ ಸದನದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಆಯ್ಕೆ ಮಾಡುವ ಅಧಿಕಾರವನ್ನು ಸೋನಿಯಾಗಾಂಧಿ ಅವರಿಗೆ ನೀಡಲಾಯಿತು. ಒಂದೆರಡು ದಿನಗಳಲ್ಲಿ ಲೋಕಸಭೆ ಸದನ ನಾಯಕರಾಗಿ ಕಮಲ್ ನಾಥ್, ರಾಜ್ಯಸಭಾ ಸದನ ನಾಯಕರಾಗಿ ಎ.ಕೆ. ಆಂಟೋನಿ ಅವರನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.