ಕೊನೆಗೂ ಜನ ಕಾಯುತ್ತಿದ್ದ ದಿನ ಬಂತು
ಮೊದಲ ನಡೆಯಲ್ಲೇ ಸಿಕ್ಸರ್ ಬಾರಿಸಿರುವ ನರೇಂದ್ರ ಮೋದಿ ಅವರ...
ನವದೆಹಲಿ: ಮೊದಲ ನಡೆಯಲ್ಲೇ ಸಿಕ್ಸರ್ ಬಾರಿಸಿರುವ ನರೇಂದ್ರ ಮೋದಿ ಅವರ 'ಪಟ್ಟಾಭಿಷೇಕ' ಸಮಾರಂಭ ಹಲವು ದಾಖಲೆಗಳನ್ನು ನಿರ್ಮಿಸಲಿದೆ.
ಸಾರ್ಕ್ ದೇಶದಳ ಪ್ರಮುಖರ ಉಪಸ್ಥಿತಿ ಮಾತ್ರವೇ ಅಲ್ಲದೆ ರಾಷ್ಟ್ರಪತಿ ಭವನದ ಇತಿಹಾಸದಲ್ಲಿಯೇ ನಡೆಯುತ್ತಿರುವ ಅತ್ಯಂತ ದೊಡ್ಡ ಕಾರ್ಯಕ್ರಮವಿದು. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವಗಳಲ್ಲಿ 1500-2000 ಗಣ್ಯರು ಭಾಗವಹಿಸುವುದು ವಾಡಿಕೆ. ಮೋದಿ ಪ್ರಮಾಣಕ್ಕೆ ಅದರ ದುಪ್ಪಟ್ಟು ಸಂಖ್ಯೆಯ ಪ್ರತಿಷ್ಠಿತರು ಆಗಮಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯರೂ ಸೇರಿದಂತೆ ಇದೇ ಮೊದಲ ಸಲ ಎಲ್ಲ 777 ಸಂಸದರಿಗೂ ಆಮಂತ್ರಣ ನೀಡಲಾಗಿದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಭಾರತದಲ್ಲಿನ ರಾಯಭಾರಿಗಳಿಗೂ ಕರೆಯೋಲೆ ಕಳುಹಿಸಲಾಗಿದೆ. ನಿರ್ಗಮಿತ ಪ್ರಧಾನಿ ಡಾ.ಮನಮೋಹನ ಸಿಂಗ್ ಮತ್ತು ಅವರು ಸಂಪುಟ ಸದಸ್ಯರು, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಂಪುಟ ಕಸರತ್ತು: ಪ್ರಮಾಣ ಸ್ವೀಕಾರಕ್ಕೆ ಮುನ್ನಾದಿನವಾದ ಭಾನುವಾರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಅವರು ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದ್ದರು. ಪಕ್ಷದ ಹಿರಿಯ ನಾಯಕರು, ಆರ್ಎಸ್ಎಸ್ ಮುಖಂಡರುಗಳೊಂದಿಗೆ ಉಭಯ ನಾಯಕರು ಸರಣಿ ಸಭೆಗಳನ್ನು ನಡೆಸಿದರು. ಮಿತ್ರಪಕ್ಷ ಟಿಡಿಪಿ ನಾಯಕ ಎನ್.ಚಂದ್ರಬಾಬು ನಾಯ್ಡು ಸಹ ಮೋದಿ ಅವರನ್ನು ಭೇಟಿ ಮಾಡಿ ಸಂಪುಟ ಸೇರಬಹುದಾದ ತಮ್ಮ ಪಕ್ಷದ ಸಂಸದರ ಪಟ್ಟಿ ಹಸ್ತಾಂತರಿಸಿದರು.
ರಾಜನಾಥ ಸಿಂಗ್ ಸಂಪುಟ ಸೇರಲಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಜೆ.ಪಿ.ನಡ್ಡಾ ಬಿಜೆಪಿ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಮಧ್ಯಪ್ರದೇಶದ ಇಂದೋರ್ನಿಂದ 8ನೇ ಬಾರಿ ಆಯ್ಕೆಯಾಗಿರುವ ಸುಮಿತ್ರಾ ಮಹಾಜನ್ ಹೆಸರು ಸಂಪುಟ ಸೇರುವವರ ಪಟ್ಟಿಯಲ್ಲಿ ಕೇಳಿ ಬಂದಿತ್ತಾದರೂ ರಾತ್ರಿ ವೇಳೆಗೆ ಅವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲಾಯಿತು. ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಎನ್ಡಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಸಂಭವ ಇದೆ.
ದರ್ಬಾರ್ ಸಭಾಂಗಣ ಸುರಕ್ಷಿತ
ಪ್ರಧಾನಿಗಳ ಪ್ರಮಾಣ ವಚನ ಸಮಾರಂಭ ಸಾಂಪ್ರದಾಯಿಕವಾಗಿ ರಾಷ್ಟ್ರಪತಿ ಭವನದ ದರ್ಬಾರ್ ಸಭಾಂಗಣದಲ್ಲಿ ನಡೆಯುತ್ತದೆ. ಇದು ಅತ್ಯಂತ ಸುರಕ್ಷಿತ ಸ್ಥಳವೂ ಹೌದು. ಆದರೆ, ಸಭಾಂಗಣದ ಆಸನ ಸಾಮರ್ಥ್ಯ 500 ಮಾತ್ರ. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ಪ್ರತಿನಿಧಿಗಳೂ ಸೇರಿದಂತೆ ದೇಶ- ವಿದೇಶಗಳ ಗಣ್ಯಾತಿಗಣ್ಯರನ್ನು ಆಹ್ವಾನಿಸಲು ನಿರ್ಧರಿಸಿದ್ದರಿಂದ ರಾಷ್ಟ್ರಪತಿ ಭವನದ ಹೊರ ಆವರಣದಲ್ಲಿ ಸಮಾರಂಭ ನಡೆಯುತ್ತಿದೆ. ಈ ಹಿಂದೆ ಬಿಜೆಪಿ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರಪತಿ ಭವನದ ಹೊರ ಆವರಣದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ಚಂದ್ರಶೇಖರ್ ಹೊರ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಮೂರು ದಶಕಗಳ ನಂತರ ಮೊದಲ ಬಾರಿಗೆ ಏಕಪಕ್ಷ ಅಧಿಕಾರಕ್ಕೆ ಬಂದ ಸಂದರ್ಭವಾದ್ದರಿಂದ ಸಹಜವಾಗಿ ಬಿಜೆಪಿ ಮತ್ತು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ದೇಶ- ವಿದೇಶಗಳಿಂದ ಹೆಚ್ಚು ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ಹಿರಿಮೆಯನ್ನು ಸಾರಲು ಇದು ಅಂತಹ ಸುಸಂದರ್ಭವೂ ಹೌದು.