ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖರೀದಿಸುವವರು ಇಲ್ಲದ, ನೋಡುವವರೂ ಇಲ್ಲದ ಕನ್ನಡ ಚಿತ್ರರಂಗ

ಕನ್ನಡ ಚಿತ್ರರಂಗ ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಇಲ್ಲಿ ಚಿತ್ರಗಳನ್ನು ಖರೀದಿಸುವರು ಇಲ್ಲ, ನೋಡುವವರು ಇಲ್ಲ....

Mainashree
Updated On : 26 May 2014, 12:55 pm

- ಇದೇ ಕಾರಣಕ್ಕೆ ನಾನು ಗಾಂಧಿನಗರದಿಂದ ದೂರ ಇದ್ದೆ
- ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ನೆನಪು ಹಂಚಿಕೊಂಡ ನಿರ್ದೇಶಕ ಜೋಸೈಮನ್


ಬೆಂಗಳೂರು: ಕನ್ನಡ ಚಿತ್ರರಂಗ ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಇಲ್ಲಿ ಚಿತ್ರಗಳನ್ನು ಖರೀದಿಸುವರು ಇಲ್ಲ, ನೋಡುವವರು ಇಲ್ಲ. ಈ ಕಾರಣದಿಂದಲೇ ತಾವು ಗಾಂಧಿನಗರದಿಂದ ಈತನಕ ದೂರ ಉಳಿದಿದ್ದಾಗಿ ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಟ ಜೋಸೈಮನ್, ತಮ್ಮ ಸಿನಿ ಪಯಣದ ವಿರಾಮದ ದಿನಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ, ಬೆಳ್ಳಿ ಪರದೆಗೆ ಮತ್ತೆ ಬರುವೆ. ನಾನು ಕುಗ್ಗಿಲ್ಲ, ಆತ್ಮಸ್ಥೆರ್ಯವೂ ಕಳೆದು ಕೊಂಡಿಲ್ಲ. ವಯಸ್ಸಾಗಿದೆ ಎಂದು ವಿಶ್ರಾಂತಿ ಬಯಸಿಲ್ಲ ಎನ್ನುವ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಚಿತ್ರ ಪ್ರೇಮಿಗಳಿಗೆ ಕುತೂಹಲ ಮೂಡಿಸಿದರು. ಕರ್ನಾಚಕ ಚಲನಚಿತ್ರ ಅಕಾಡೆಮಿಯ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಶನಿವಾರ, ಮೂರು ದಶಕದ ತಮ್ಮ ಸಿನಿ ಪಯಣದ ಸಿಹಿ-ಕಹಿ ಘಟನೆಗಳನ್ನು ಸಭಿಕರೆದುರು ಅವರು ಮುಕ್ತವಾಗಿ ಹಂಚಿಕೊಂಡರು. ಅಂತರಂಗದಲ್ಲಿ ಉಳಿಸಿಕೊಂಡ ಭಾವನೆಗಳನ್ನು ಹೊರಹಾಕಿ ಹಗುರಾದರು.
ಆದರೆ ವಿಷ್ಣುವರ್ಧನ್ ಮತ್ತು ಸೈಮನ್ 'ಸಾಹಸ ಸಿಂಹ'ದಂತಹ ಯಶಸ್ವಿ ಚಿತ್ರದ ನಂತರ 9 ವರ್ಷ ಪರಸ್ಪರ ಮುನಿಸಿಕೊಂಡಂತೆ ದೂರವಾಗುಳಿದಿದ್ದಕ್ಕೆ ಕಾರಣ ಬಹಿರಂಗಪಡಿಸದೆ ಗುಪ್ತವಾಗಿಯೇ ಉಳಿಸಿಕೊಂಡರು.
'ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ನನ್ನ ನಡುವಿನ ಕೆಲವು ಸಂಗತಿಗಳು ಅದಕ್ಕೆ ಕಾರಣವಿರಬಹುದು. ವಿಷ್ಣು ಇಲ್ಲದ ದಿನಗಳಲ್ಲಿ ಅವುಗಳನ್ನು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಅವು ನನಗೆ ಮಾತ್ರ ಉಳಿಯಲಿ' ಎಂದಷ್ಟೇ ಪ್ರತಿಕ್ರಿಯಿಸಿದರು. ಶಂಕರ್‌ನಾಗ್ ಜೊತೆ ಸಿನಿಮಾ ಮಾಡುವ ದೊಡ್ಡ ಕನಸೊಂದು ಕನಸಾಗಿಯೇ ಉಳಿದಿದ್ದಕ್ಕೆ ನೋವು ವ್ಯಕ್ತಪಡಿಸಿದರು. ಅವರು ಕಾಲಶೀಟ್‌ಗೆ ಕೊಟಿದ್ದ 2 ಕಾಲಿ ಲೆಟರ್‌ಹೆಡ್ ತಮ್ಮ ಬಳಿಯೇ ಇವೆ ಎಂದರು.

ಮಂಡ್ಯ ಟು ಮದ್ರಾಸ್: ಜೋ ಸೈಮನ್ ಮೂಲ ಮಂಡ್ಯ. ರೈಸ್ ಮಿಲ್ ಕಾರ್ಮಿಕನ ಮಗ. ಬಾಲ್ಯದಲ್ಲಿಯೇ ಸಿನಿಮಾ ನಟನಾಗುವ ಕನಸು ಕಂಡು, ಅಣ್ಣನ ಮೂಲಕ ನನಸಾಗಿಸಿಕೊಳ್ಳಲು ಮದ್ರಾಸ್ ರೈಲು ಹತ್ತಿದವರು, ಹೆಸರಾಂತ ನಿರ್ದೇಶಕ ಗುಣಸಿಂಗ್ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿ, ಬೆಳ್ಳಿ ತೆರೆಯಲ್ಲಿ  ತಮ್ಮದೇ ಹೆಜ್ಜೆ ಮೂಡಿಸಿದವರು.
ಹೀಗಾಗಿ ಬೆಳ್ಳಿ ಹೆಜ್ಜೆಯಲ್ಲಿ ಅವರ ಮಾತು ಮಂಡ್ಯ ಟು ಮದ್ರಾಸ್ ರೈಲಿನ ಮೂಲಕವೇ ತೆರೆದುಕೊಂಡಿತು. ಮದ್ರಾಸ್‌ನಲ್ಲಿ ಮೇಕಪ್ ಬಾಯ್ ಆಗಿ, ಸಹಾಯಕ ಛಾಯಾಗ್ರಾಹಕನಾಗಿ, ನಂತರ ಕ್ಲಾಪ್ ಬಾಯ್ ಆಗಿ,'ಒಂದು ಪ್ರೇಮದ ಕಥೆ'ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕನಾಗಿ ಬೆಳ್ಳಿ ತೆರೆಗೆ ಪರಿಚಯವಾದ ಸಾಹಸದ ಹಿನ್ನೋಟವನ್ನು ತೆರೆದಿಡುವ ಮೂಲಕ ಕಷ್ಟಪಟ್ಟು ಆಕ್ಷನ್ ಕಟ್ ಹೇಳಿದ ಕತೆಯನ್ನು ಕಟ್ಟಿಕೊಟ್ಟರು.
ರಜನಿ ಅತ್ತ ಕ್ಷಣ: ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಭಾರತದ ಬೆಳ್ಳಿ ತೆರೆಗೆ ರಜನಿಕಾಂತ್ ಸೂಪರ್ ಸ್ಟಾರ್ ಎಂದೇ ಖ್ಯಾತಿ. ಆದರೆ ಒಂದು ಕಾಲಕ್ಕೆ ವಿಲನ್ ಪಾತ್ರ ಹುಡುಕಿಕೊಂಡು ಮೈಸೂರಿಗೆ ಬಂದಿದ್ದ ಅವರು, ಕೆ.ಎಸ್.ಆರ್. ದಾಸ್ ತಿರಸ್ಕರಿಸಿದ ಕಾರಣಕ್ಕೆ ಬಿಕ್ಕಿ  ಬಿಕ್ಕಿ ಅತ್ತು ಬಿಟ್ಟಿದ್ದರಂತೆ. ಆ ಕ್ಷಣಕ್ಕೆ ಜೋ ಸೈಮನ್ ಸಾಕ್ಷಿ. ಕಾರಣ ' ಲಕ್ಷ್ಮಿ ನಿವಾಸ' ಚಿತ್ರದ ವಿಲನ್ ಪಾತ್ರಕ್ಕೆ ರಜನಿ ಅವರನ್ನು ಕರೆತಂದಿದ್ದು ಸೈಮನ್. ಈ ಘಟನೆ ಹೇಳಿಕೊಂಡು ನಕ್ಕರು. ಕಾರಣ ರಜನಿ ಇವತ್ತು ಸೂಪರ್ ಸ್ಟಾರ್.

ಹಲವರಿಗೆ ಪ್ರಥಮ ಕಾಣಿಕೆ
ನಟ ಅರ್ಜುನ್ ಸರ್ಜಾ ಅವರನ್ನು ಮೊದಲ ಬಾರಿಗೆ ನಾಯಕನನ್ನಾಗಿ ಪರಿಚಯಿಸಿದ ಖ್ಯಾತಿ. ಹಾಗೆಯೇ ಮಂಜುಳಾ ಗುರುರಾಜ್ ಅವರನ್ನು ಚಿತ್ರ ಗೀತೆಗಳ ಗಾಯಕಿಯನ್ನಾಗಿ ಪರಿಚಯಿಸಿದ್ದು, ವಿಷ್ಣುವರ್ಧನ್ ಅವರಿಗೆ ಸಾಹಸ ಸಿಂಹ ಬಿರುದು ಬಂದಿದ್ದಕ್ಕೆ ಸೈಮನ್ ಕಾರಣ. ಇವೆಲ್ಲವನ್ನು  ಹೇಳಿಕೊಂಡು ಖುಷಿಪಟ್ಟರು. ಹೀಗೆ ತಮ್ಮ ಸಿನಿಮಾ ಪ್ರಯಾಣದ ಹಲವು ಸಂಗತಿಗಳನ್ನು ಸಭಿಕರೆದುರು ಹರಡಿಕೊಂಡ ಅವರು, ಬೆಳ್ಳಿ ಪರದೆಗೆ ಮತ್ತೆ ಬರುವೆ. ನಾನು ಕುಗ್ಗಿಲ್ಲ, ಆತ್ಮಸ್ಥೆರ್ಯವೂ ಕಳೆದು ಕೊಂಡಿಲ್ಲ. ವಯಸ್ಸಾಗಿದೆ ಎಂದು ವಿಶ್ರಾಂತಿ ಬಯಸಿಲ್ಲ ಎನ್ನುವ ಮೂಲಕ ಕುತೂಹಲ ಮೂಡಿಸಿದರು. ಪತ್ರಕರ್ತ ಸತ್ಯಮೂರ್ತಿ ಆನಂದೂರು ಅವರು, ಸೈಮನ್ ಸಿನಿಮಾ ಪ್ರಯಾಣದ ಹಲವು ಸಂಗತಿಗಳನ್ನು ಪ್ರಶ್ನಿಸುವ ಮೂಲಕ ಸುದೀರ್ಘ ಮಾತುಕತೆಗೆ ವೇದಿಕೆ ಒದಗಿಸಿದರು. ಅಕಾಡೆಮಿ  ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್,  ನಟ ಬ್ಯಾಂಕ್ ಜನಾರ್ದನ್, ಜಯಲಕ್ಷ್ಮಿ, ಗುಪ್ತ ಮತ್ತಿತರರು ಪಾಲ್ಗೊಂಡಿದ್ದರು. ಸೈಮನ್ ಪತ್ನಿ ಮತ್ತು ಪುತ್ರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement