ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಲಿತರ ಪ್ರವೇಶ: ದೇವರಿಗೆ ಗಂಗಾಸ್ನಾನ

Mainashree
Updated On : 25 May 2014, 9:25 am

ಚಿತ್ರದುರ್ಗ: ಇಡೀ ಜಗತ್ತು ತಳಕು ಬಳುಕಿನ ಆಧುನಿಕತೆಯಿಂದ ಕೂಡಿದ್ದರೂ ಸಮಾಜದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಪ್ರಸಂಗ ನಡೆದಿದೆ.
ಘಟನೆ ನಡೆದಿರುವುದು ಹೊಸದುರ್ಗ ತಾಲೂಕಿನ ದೊಡ್ಡಘಟ್ಟ ಎಂಬ ಗ್ರಾಮದಲ್ಲಿ. ಇತ್ತೀಚೆಗೆ ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಾದಿಗ ಜನಾಂಗದವರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದರು. ಇದರಿಂದ ದೇಗುಲ ಅಪವಿತ್ರವಾಯಿತು ಎಂಬ ಕಾರಣಕ್ಕೆ ಗ್ರಾಮಸ್ಥರು ಶ್ರೀ ರಾಮಾಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಹಾಸನ ಜಿಲ್ಲೆಯ ರಾಮೇಶ್ವರ ವಜ್ರಕ್ಕೆ ಗಂಗಾಸ್ನಾನಕ್ಕೆ ತೆಗೆದುಕೊಂಡು ಹೋಗಿ ಬಂದರು. ವಿಶೇಷ ಏನೆಂದರೆ ಗಂಗಾಸ್ನಾನಕ್ಕೆ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಿ ಬಂದಿದ್ದು ದೇವಾಲಯದ ಇತಿಹಾಸದಲ್ಲಿ ಇದೇ ಮೊದಲು. ಗಂಗಾಸ್ನಾನಕ್ಕೆ ತಹಸೀಲ್ದಾರರ ಅನುಮತಿಯನ್ನೂ ಗ್ರಾಮಸ್ಥರು ಪಡೆದುಕೊಂಡಿದ್ದರು.
ನಾಡಿನಾದ್ಯಂತ ಈ ದೇವಾಲಯ ಪ್ರಸಿದ್ಧಿ ಪಡೆದಿದೆ. ದೂರದ ಊರುಗಳಿಂದಲೂ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.
ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರು. ರಾಮಾಂಜನೇಯ ಸ್ವಾಮಿ ಮತ್ತು ಗ್ರಾಮದಲ್ಲಿರುವ ದುರ್ಗಮ್ಮ ದೇವಿಗೆ ಎಲ್ಲರೂ ಒಂದಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಅಂಬು ಹೊಡೆಯುತ್ತಿದ್ದರು. ಈಗ ಬಂದಿರುವ ಸಮಸ್ಯೆಗೆ ಮೂಲ ಕಾರಣವಾಗಿದ್ದು ದೇವಾಲಯ ಸಮಿತಿಯಿಂದ ನಿರ್ಮಿಸಲಾದ 12 ಅಂಗಡಿ ಮಳಿಗೆಗಳು. ಈ ಪೈಕಿ ದುರ್ಗಮ್ಮ ದೇವಿ ದೇವಾಲಯದ ನಿರ್ವಹಣೆಗೆ 3 ಮಳಿಗೆಗಳನ್ನು ಬಿಟ್ಟುಕೊಡುವಂತೆ ಗ್ರಾಮದ ಅಂಬೇಡ್ಕರ್ ಯುವಕರ ಸಂಘ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಪಂಚಾಯಿತಿ ನಡೆದು ತಹಸೀಲ್ದಾರರು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಸಮ್ಮುಖದಲ್ಲಿ 2 ಮಳಿಗೆಗಳನ್ನು ಸಂಘಕ್ಕೆ ನೀಡುವಂತೆ ತೀರ್ಮಾನವಾಗಿತ್ತು. ಮಳಿಗೆಗಳಿಗೆ ದುರ್ಗಮ್ಮ ದೇವಿ ಹೆಸರಿಡುವಂತೆ ಯುವಕರು ಒತ್ತಾಯ ಮಾಡಿದ್ದರು. ಇದಕ್ಕೆ ಒಪ್ಪದ ದೇವಾಲಯ ಸಮಿತಿ ಮಳಿಗೆಗಳನ್ನು ನೀಡಲಿಲ್ಲ. ಅಲ್ಲದೆ ದಸರಾ ಸಂದರ್ಭದಲ್ಲಿ ಅಂಬು ಹೊಡೆಯುವುದಕ್ಕೆ ದುರ್ಗಮ್ಮ ದೇವಿ ದೇವಾಲಯವನ್ನೂ ಕೈ ಬಿಟ್ಟರು. ಊರಿನಲ್ಲಿ ನಡೆಯುತ್ತಿರುವ ಎಲ್ಲ ಧಾರ್ಮಿಕ ಕೆಲಸಗಳಲ್ಲಿ ಮಾದಿಗರನ್ನು ನಿರ್ಲಕ್ಷಿಸಿ ಅಘೋಷಿತ ಬಹಿಷ್ಕಾರ ಹಾಕಿದ್ದಾರೆಂದು ಆರೋಪಿಸುತ್ತಾರೆ ದಲಿತ ಮುಖಂಡ ಹನುಮಂತಪ್ಪ ದುರ್ಗ.
ದೇವಾಲಯಕ್ಕೆ ಎಲ್ಲರಿಗೂ ಪ್ರವೇಶ ನೀಡಲಾಗುತ್ತದೆ. ಗ್ರಾಮಸ್ಥರು ಗಂಗಾಸ್ನಾನಕ್ಕೆ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಲು ಅನುಮತಿ ಕೇಳಿದ್ದರು. ಅನುಮತಿ ನೀಡಲಾಗಿತ್ತು ಎನ್ನುತ್ತಾರೆ ತಹಸೀಲ್ದಾರ್ ಲಕ್ಷ್ಮಣಪ್ಪ.
ಇಷ್ಟು ವರ್ಷಗಳವರೆಗೆ ಎಂದಿಗೂ ಗಂಗಾಸ್ನಾನಕ್ಕೆ ದೇವರನ್ನು ಕರೆದೊಯ್ಯದ ಗ್ರಾಮಸ್ಥರು ಈ ಬಾರಿ ತೆಗೆದುಕೊಂಡು ಹೋಗಲು ಮಾದಿಗರ ದೇವಾಲಯ ಪ್ರವೇಶವೇ ಕಾರಣ. ಇದರಿಂದ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದು ಖಚಿತ. ಸರ್ಕಾರವೇ ಅಸ್ಪೃಶ್ಯತೆ ಆಚರಣೆಗೆ ಅನುಮತಿ ನೀಡಿದಂತಾಗಿದೆ. ಈ ಬಗ್ಗೆ ದೇವಾಲಯ ಪ್ರವೇಶಕ್ಕೆ ಎಲ್ಲರಿಗೂ ಅನುಮತಿ ನೀಡಬೇಕು ಎನ್ನುತ್ತಾರೆ ಜಿಪಂ ಸದಸ್ಯ ಎಂ. ಲಕ್ಷ್ಮಣ್.
ಪ್ರಕ್ಷುಬ್ಧ ವಾತಾವರಣ: ಈ ಬೆಳವಣಿಗೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ಮಾದಿಗರಿಗೆ ಮುಜರಾಯಿ ಇಲಾಖೆ ದೇವಾಲಯಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾದಿಗ ಮಹಾಸಭಾ ಮೇ 26ರಂದು ಹೊಸದುರ್ಗದವರೆಗೆ ಕಾಲ್ನಡಿಗೆ ಜಾಗೃತಿ ಜಾಥಾ ಹಮ್ಮಿಕೊಂಡಿದೆ.

 ಕ.ಮ. ರವಿಶಂಕರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement