ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಮೋ ಭಾರತದಲ್ಲಿ ಕಮಲದ್ದೇ ಪಾರುಪತ್ಯ

Mainashree
Updated On : 25 May 2014, 11:08 am

ನರೇಂದ್ರ ಮೋದಿ ಸಮ್ಮಿಶ್ರ ಸರ್ಕಾರ ಯುಗಕ್ಕೆ ಅಂತ್ಯ ಹಾಡಿದ್ದಾರೆ. ಇದೇ ಮೊದಲ ಬಾರಿ ಇಡೀ ದೇಶದಲ್ಲಿ ಚುನಾವಣಾ ಪ್ರಚಾರ ಅಧ್ಯಕ್ಷೀಯ ಚುನಾವಣೆ ಮಾದರಿಯಲ್ಲಿ ಒಬ್ಬ ವ್ಯಕ್ತಿಯ ಸುತ್ತ ಸುತ್ತಿದೆ. ಮೈದಾನವನ್ನು ಸಮರ್ಥವಾಗಿ ಬಳಸಿಕೊಂಡ ಮೋದಿ, ದೇಶದಲ್ಲಿ ಒಂದು ಅಲೆ ಸೃಷ್ಟಿಸಿದರು. ತಮ್ಮ ಚಾಣಾಕ್ಷತಂತ್ರಗಳ ಮೂಲಕ ಕೊನೆಯವರೆಗೂ ಅದನ್ನು ಕಾಪಾಡಿಕೊಂಡರು. ಘೋಷಣೆ, ಪ್ರಣಾಳಿಕೆಗಳಿಂದ ಹೊರತಾಗಿ ಒಬ್ಬನೇ ಒಬ್ಬ ವ್ಯಕ್ತಿಯನ್ನು ಇಡೀ ದೇಶ ಬೆಂಬಲಿಸಿದ್ದು ರಾಜಕೀಯ ತಜ್ಞರಿಗೂ ಅಚ್ಚರಿ ಮೂಡಿಸಿರುವ ವಿದ್ಯಮಾನ.
ಜನರ ನಿರೀಕ್ಷೆ ಮೋದಿ ಮೇಲೆ ಎಷ್ಟಿದೆ ಎನ್ನುವುದರ ಸಂಕೇತವಿದು. ಮೋದಿ ಗೆಲವನ್ನು ಕಾರ್ಪೊರೇಟ್ ವಲಯ ಸಹ ಅದ್ಧೂರಿಯಾಗಿ ಸ್ವಾಗತಿಸಿದೆ. ಷೇರುಪೇಟೆ ಸೂಚ್ಯಂಕ ಎತ್ತರಕ್ಕೆ ಏರುತ್ತಿದೆ. ಡಾಲರ್ ಎದುರು ರುಪಾಯಿ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಅಂದರೆ ಎಲ್ಲಾ ವಲಯಗಳೂ ಮೋದಿ ಬಗ್ಗೆ ಹೊಸ ಆಸೆ ಇಟ್ಟಕೊಂಡಿವೆ. ಅದರ ಅರಿವು ಖುದ್ದು ಮೋದಿಯವರಿಗೂ ಇದೆ. ಮಿಗಿಲಾಗಿ ಮೋದಿ ಗೆಲವಿನಲ್ಲಿ ಕಾರ್ಪೊರೇಟ್ ವಲಯದ ಪಾತ್ರವನ್ನೂ ಕಡೆಗಣಿಸುವಂತಿಲ್ಲ. ಆದಾಗ್ಯೂ 'ನನ್ನ ಸರ್ಕಾರ ವಿಶೇಷ ವ್ಯಕ್ತಿಗಳಿಗಾಗಿ ಇರುವ ಸರ್ಕಾರ ಅಲ್ಲ'  ಎನ್ನುವ ಸ್ಪಷ್ಟ ಮಾತನ್ನು ಫಲಿತಾಂಶ ಪ್ರಕಟವಾದ ನಂತರದ ಮೊದಲ ಭಾಷಣದಲ್ಲಿಯೇ ಹೇಳಿದ್ದಾರೆ ಮೋದಿ. 'ದೇಶದ ಜನರಿಗಾಗಿ ಬಿಡುವಿಲ್ಲದೇ ಅವಿರತ ಶ್ರಮಿಸುವ ಸಿಪಾಯಿ ನಾನು' ಎನ್ನುವ ಮೂಲಕ 'ಜನತಾ ಸರ್ಕಾರ'ದ ಕನಸು ಬಿತ್ತಿದ್ದಾರೆ ಮೋದಿ. ಆಡಳಿತಾತ್ಮಕವಾಗಿ ಮೋದಿ ಯಶಸ್ಸು ಸಾಧಿಸಬಲ್ಲರು ಎನ್ನುವುದರಲ್ಲಿ ಯಾರಿಗೂ ಅನುಮಾನವಿಲ್ಲ. ರಾಜಕೀಯವಾಗಿಯೂ ಮೋದಿ ಕ್ರಾಂತಿ ಇಲ್ಲಿಗೇ ನಿಲ್ಲುವುದಿಲ್ಲ ಎಂಬುದೂ ನಿಜ. 'ಮೋದಿ ಕಾಲ'ದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಹೇಗಿರಬಹುದು?
ಕಾಂಗ್ರೆಸ್ ಮುಕ್ತ ಭಾರತ
ಇದು ಮೋದಿ ಪ್ರಚಾರದುದ್ದಕ್ಕೂ ಪ್ರಸ್ತಾಪಿಸುತ್ತಿದ್ದ ಮಾತು. ನೂರು ವರ್ಷಗಳ ಇತಿಹಾಸ ಇರುವ ಪಕ್ಷವನ್ನು ಕೇವಲ 44 ಸ್ಥಾನಗಳಿಗೆ ತಂದು ನಿಲ್ಲಿಸುವ ಮೂಲಕ ಅದನ್ನು ಅಕ್ಷರಶಃ ನಿಜಗೊಳಿಸಿದ್ದಾರೆ ಮೋದಿ. ಹಾಗೆ ನೋಡಿದರೆ ಮೋದಿ ಅಲೆಗೆ ಮೊದಲ ಬಲಿಯೇ ಕಾಂಗ್ರೆಸ್. ನೆಹರು ಮನೆತನ ಶೇಕಡಾವಾರು ಮತಗಳಿಕೆಯಲ್ಲೂ ಹಿಂದೆ ಬಿದ್ದಿದೆ. ಇನ್ನುಮುಂದೆ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ರಾಜಕಾರಣ ಕಷ್ಟ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷದ ಸರ್ಕಾರ ಇರುವ ರಾಜ್ಯಗಳಲ್ಲಿ ಸ್ವಲ್ಪಮಟ್ಟಿಗೆ ಉಸಿರಾಡಬಹುದಷ್ಟೆ. ಒಂದು ತಲೆಮಾರಿನ ಮತದಾರರ ನಂತರ ಕಾಂಗ್ರೆಸ್ ನಾಮಾವಶೇಷವಾಗುವುದರಲ್ಲಿ ಅನುಮಾನವಿಲ್ಲ.
ಸರ್ಕಾರದಲ್ಲಿ ಪಾತ್ರವಿಲ್ಲ
ಮೋದಿ ಆರ್‌ಎಸ್‌ಎಸ್ ಪ್ರಚಾರಕರಾಗಿದ್ದರು ಖರೆ. ಅಪ್ಪಟ ಹಿಂದುತ್ವವಾದಿ ಎನ್ನುವುದೂ ನಿಜ. ಆದರೆ ಅಧಿಕಾರದ ವಿಚಾರ ಬಂದರೆ ಅವರದು ಭಿನ್ನ ನೆಲೆ. ಅಲ್ಲಿ ಅಭಿವೃದ್ಧಿಯೇ ಮುಖ್ಯ. ಗುಜರಾತ್‌ನಲ್ಲಿ ಅದನ್ನು ಸಾಧಿಸಿದ್ದಾರೆ ಕೂಡ. 14 ವರ್ಷ ಮುಖ್ಯಮಂತ್ರಿಯಾಗಿದ್ದರೂ ಗುಜರಾತ್‌ನಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್‌ಗೆ ಎಷ್ಟು ಬೇಕೊ ಅಷ್ಟೇ ಸಲುಗೆ ನೀಡಿದ್ದಾರೆ. ದೆಹಲಿಯಲ್ಲಿಯೂ ಅದನ್ನೇ ಮಾಡುತ್ತಾರೆ ಎನ್ನುವುದು ನಿಸ್ಸಂದೇಹ. ಮೋದಿ ಚಾಣಾಕ್ಷತೆಯ ಅರಿವಿರುವ ಬಿಜೆಪಿ, ಸಂಘ ಪರಿವಾರಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಸಾಹಸಕ್ಕೆ ಕೈ ಹಾಕಲಾರವು. ಗುಜರಾತ್‌ನಲ್ಲಿ ಮಾಡಿದಂತೆ ಬಿಜೆಪಿ, ಆರ್‌ಎಸ್‌ಎಸ್ ವರಿಷ್ಠರೊಂದಿಗೆ ಮೋದಿ ಆಗಾಗ ಚರ್ಚಿಸುತ್ತಾರೆ, ಆದರೆ ತಾವು ಅಂದುಕೊಂಡಿದ್ದನ್ನೇ ಮಾಡುತ್ತಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಸಂಘ ಪರಿವಾರದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು, ಆದರೆ ಸರ್ಕಾರದ ಒಳಕ್ಕೆ ಎಂದೂ ಬಿಟ್ಟುಕೊಂಡಿರಲಿಲ್ಲ. ವಾಜಪೇಯಿ ಅವಧಿಯಲ್ಲಿ ಮುರಳಿ ಮನೋಹರ ಜೋಶಿ ಮೂಲಕ ಪಠ್ಯದ ಕೇಸರೀಕರಣಕ್ಕೆ ಯತ್ನಿಸಿದ ರೀತಿಯ ಪ್ರಯತ್ನಗಳನ್ನೂ ಸಂಘ ಪರಿವಾರ ಮಾಡುವ ಸಾಧ್ಯತೆ ಕಡಿಮೆ.
ಪ್ರಾದೇಶಿಕ ಪಕ್ಷಗಳ ಸಂಕಷ್ಟ
ಮೋದಿ ಅವರಿಂದಾಗಿ ಬಿಜೆಪಿಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದೆ. ಮೊದಲಿಗೆ ಆಗುವುದೆಂದರೆ ಬಿಹಾರ, ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಪಕ್ಷೇತರರ ಬೆಂಬಲದಿಂದ ನಡೆಯುತ್ತಿರುವ ಸರ್ಕಾರಗಳು ನಿಧಾನವಾಗಿ ಅಲುಗಾಡಲು ಶುರುವಾಗುತ್ತವೆ. ಈವರೆಗೆ ಅಸ್ತಿತ್ವ ಇಲ್ಲದಿದ್ದ ರಾಜ್ಯಗಳಲ್ಲಿಯೂ ಬಿಜೆಪಿ ನಿಧಾನವಾಗಿ ತಳವೂರುತ್ತದೆ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷ-ಮಮತಾ ವಿರುದ್ಧದ ಮತಗಳು ಬಿಜೆಪಿಯತ್ತ ವಾಲುತ್ತವೆ. ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪಕ್ಷದ ಬೇರುಗಳು ಇನ್ನಷ್ಟು ಬಲಗೊಂಡು, ಅಲ್ಲಿನ 'ಪ್ರಬಲ' ಪಕ್ಷಗಳು ಗಂಟುಮೂಟೆ ಕಟ್ಟುವ ಸ್ಥಿತಿ ನಿರ್ಮಾಣವಾಗಬಹುದು. ಇಡೀ ರಾಷ್ಟ್ರವನ್ನು ಬಿಜೆಪಿ ಮೆಲ್ಲಗೆ ಆವರಿಸಿಕೊಂಡು, ಬೇರು ಗಟ್ಟಿ ಮಾಡಿಕೊಳ್ಳುತ್ತದೆ. ಪ್ರಾದೇಶಿಕ ಪಕ್ಷಗಳ ಆಟಕ್ಕೆ ಅವಕಾಶ ಇಲ್ಲದಂತಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ. ಮೋದಿಯಿಂದ ಬಿಜೆಪಿ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪಕ್ಷವಾಗಿ ಬೆಳೆಯುತ್ತದೆ.
ಪ್ರಬಲ ಪಿಎಂಒ
ಮೋದಿ ಅವಧಿಯಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯ ರಾಜಕೀಯ ಪ್ರಭಾವದಿಂದ ಹೊರಬರುವುದು ದಿಟ.  ಅಲ್ಲಿನ್ನು ವಶೀಲಿಗಳಿಗೆ ಅವಕಾಶವಿರದು. ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರ ಸಲಹೆ ಪಡೆಯಲೂ ಹಿಂದೇಟು ಹಾಕುವುದಿಲ್ಲ. ಆದರೆ ಅಂತಿಮ ತೀರ್ಮಾನ ಮಾತ್ರ ಮೋದಿಯವರದ್ದೇ ಆಗಿರುತ್ತದೆ ಎನ್ನುವುದು ನಿಸ್ಸಂಶಯ. ಇನ್ನು ಅಧಿಕಾರಶಾಹಿಯನ್ನು ಪಳಗಿಸುವುದರಲ್ಲಿ ಮೋದಿ ನಿಸ್ಸೀಮರು. ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಡುತ್ತಾರೆ, ಜತೆಯಲ್ಲೇ ಹೊಣೆಗಾರಿಕೆಯನ್ನೂ ನಿಗದಿಪಡಿಸುತ್ತಾರೆ. ಯಾವ ಬಟನ್ ಅನ್ನು ಯಾವಾಗ ಒತ್ತಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement