ಮೋದಿ ಖಾತೆಯಲ್ಲಿ...?
ನವದೆಹಲಿ: ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಬಗ್ಗೆ ಹಲವು ದಿನಗಳಿಂದ ಹಲವಾರು ಹೆಸರುಗಳು ಹರಿದಾಡುತ್ತಿವೆ. ಆದರೆ ಖಚಿತವಾಗಿ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ವಿಚಾರ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಮುಖರ ಹೆಸರು ವಿವಿಧ ಖಾತೆಗಳಿಗೆ ಕೇಳಿಬರುತ್ತಿದೆ. ಬಿಜೆಪಿ ವತಿಯಿಂದ ರಾಜನಾಥ್ ಸಿಂಗ್, ವೆಂಕಯ್ಯನಾಯ್ಡು, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ರವಿಶಂಕರ ಪ್ರಸಾದ್, ಗೋಪಿನಾಥ ಮುಂಡೆ, ರಾಮ್‌ವಿಲಾಸ್ ಪಾಸ್ವಾನ್, ತಾವರ್‌ಚಂದ್ ಗೆಹ್ಲೊಟ್, ಶಾಂತಕುಮಾರ್, ಮನೇಕಾ ಗಾಂಧಿ, ಮುಖ್ತಾರ್ ಅಬ್ಬಾಸ್ ನಖ್ವಿ, ಸಂತೋಷ್ ಗಂಗ್ವಾರ್, ಮೋದಿಯವರ ಜತೆಗೆ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಹಿರಿಯ ನಾಯಕರಾದ ಕಲ್‌ರಾಜ್ ಮಿಶ್ರಾ ಡಾ.ಎಂ.ಎಂ.ಜೋಶಿಯವರಿಗೂ ಪ್ರಮುಖ ಹುದ್ದೆಗಳೇ ದೊರೆಯಲಿವೆ ಎಂದು ಹೇಳಲಾಗಿದೆ. ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಯೋಜನಾ ಆಯೋಗದ ಉಪಾಧ್ಯಕ್ಷ ಅಥವಾ ಸಲಹಾಗಾರ ಹುದ್ದೆ ಲಭಿಸುವ ಸಾಧ್ಯತೆ ಇದೆ. ಅರ್ಟಾರ್ನಿ ಜನರಲ್ ಹುದ್ದೆಗೆ ಜನಪ್ರಿಯ ನ್ಯಾಯವಾದಿಗಳಾದ ಉದಯ್ ಲಲಿತ್ ಮತ್ತು ಮುಕುಲ್ ರೋಹಟಗಿ ಪೈಪೋಟಿಯಲ್ಲಿದ್ದಾರೆ.