ವಕೀಲರ ಕಚೇರಿಯಲ್ಲಿ ಬೆಂಕಿ: ಇಬ್ಬರು ಸಜೀವ ದಹನ
'ನಾಲ್ಕನೇ ಮಹಡಿ ಸಣ್ಣ ಕಿಟಕಿಯಿಂದ ಕೈ ಮಾಡುತ್ತಿದ್ದ ವೃದ್ಧರಿಬ್ಬರು ಜೀವ...
ಬೆಂಗಳೂರು: 'ನಾಲ್ಕನೇ ಮಹಡಿ ಸಣ್ಣ ಕಿಟಕಿಯಿಂದ ಕೈ ಮಾಡುತ್ತಿದ್ದ ವೃದ್ಧರಿಬ್ಬರು ಜೀವ ಉಳಿಸುವಂತೆ ಅಂಗಲಾಚುತ್ತಿದ್ದರು. ಆ ಕಚೇರಿ ಬಾಗಿಲಲ್ಲೇ ಅಗ್ನಿ ನರ್ತನ ಜೋರಾಗಿದ್ದ ಕಾರಣ ಕಾಪಾಡಲು ಆಗದೆ ಸಾರ್ವಜನಿಕರು ಅಸಹಾಯಕರಾಗಿದ್ದರು. ಕಾಪಾಡಿ, ಕಾಪಾಡಿ... ಎನ್ನುತ್ತಲೆ ಸುಟ್ಟ ವಸ್ತುಗಳ ದಟ್ಟ ಹೊಗೆಯನ್ನು ಸೇವಿಸಿದ ಆ ಇಬ್ಬರು ಕೆಲವೇ ಕ್ಷಣಗಳಲ್ಲಿ ಜೀವ ಬಿಟ್ಟರು'
ಗಾಂಧಿನಗರ 3ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆಯಲ್ಲಿರುವ ಆನಂದ ನಿವಾಸ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಹಿರಿಯ ವಕೀಲರೊಬ್ಬರ ಕಚೇರಿಯಲ್ಲಿ ಜೀವ ಉಳಿಸಿಕೊಳ್ಳಲು ಅಂತಿಮ ಕ್ಷಣದಲ್ಲಿ ಅನುಭವಿಸಿದ ನೋವನ್ನು ಸೆಕ್ಯೂರಿಟಿ ಗಾರ್ಡ್ ಜಯಕುಮಾರ್ ವಿವರಿಸಿದರು. ಮಳಿಗೆಯೊಂದರ ಅಗ್ರಿಮೆಂಟ್ ಮಾಡಿಸಿಕೊಳ್ಳಲು ಬಂದಿದ್ದ ವಿಜಯ ನಗರ ನಿವಾಸಿ ವೃದ್ಧ ಸುಂದರ್(67) ಹಾಗೂ ಟೈಪಿಸ್ಟ್ ನಯಾಜ್(61) ಮೃತ ದುರ್ದೈವಿಗಳು. ಮಧ್ಯಾಹ್ನ 2.30ರ ಸುಮಾರಿಗೆ ಹಿರಿಯ ವಕೀಲ ಬಾಲಕೃಷ್ಣ ಎಂಬುವರಿಗೆ ಸೇರಿದ ಕಚೇರಿಯಲ್ಲಿ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಕಚೇರಿ ಒಳಗೆ ಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಒಳಗೆ ಹೋಗುವಷ್ಟರಲ್ಲಿ ಕಕ್ಷಿದಾರ ಸುಂದರ್ ಹಾಗೂ ನಯಾಜ್ ಮೃತಪಟ್ಟಿದ್ದರು. ಇಬ್ಬರಿಗೂ ಸ್ವಲ್ಪವೂ ಸುಟ್ಟ ಗಾಯಗಳಾಗಿಲ್ಲ. ಹೀಗಾಗಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ದೇವರಾಜ್ ತಿಳಿಸಿದರು.
ನೆಲಮಾಳಿಗೆ ಸೇರಿದಂತೆ ನಾಲ್ಕು ಮಹಡಿ ಇರುವ ಕಟ್ಟಡದಲ್ಲಿ ಚಿತ್ರದುರ್ಗ ಮೂಲದ ವಕೀಲ ಶ್ರೀಧರ್ (36), ಕಚೇರಿ ಸಹಾಯಕ ಸುನೀಲ್(38) ಹಾಗೂ ಟೈಲರ್ ಅಹ್ಮದ್ (55) ಹಾಗೂ ಮತ್ತೊಬ್ಬರು ಇದ್ದರು.
ಮೊದಲನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು ಕೆಳಗೆ ಇಳಿಯಲು ಹೋಗಿದ್ದಾರೆ.
ಆದರೆ, ಓಡಾಡಲು ಸಣ್ಣ ದಾರಿ ಮಾತ್ರ ಇದ್ದ ಕಾರಣ ಬೆಂಕಿಯ ಶಾಖ ಹಾಗೂ ಹೊಗೆಯಿಂದ ಕೆಳಗಿಳಿಯಲು ಸಾಧ್ಯವಾಗದೇ ಟೆರೇಸ್ ಮೇಲೆ ಹೋಗಿ ಸಹಾಯಕ್ಕೆ ಅಂಗಲಾಚಿದ್ದಾರೆ.
ಕಡತಗಳು, ಪುಸ್ತಕಗಳು, ಪೀಠೋಪಕರಣಗಳು ಕಚೇರಿಯಲ್ಲಿವೆ. ಕಂಪ್ಯೂಟರ್, ಫೈಬರ್ ವಸ್ತುಗಳು ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿದೆ. ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟಿದ್ದರಿಂದ ಕೆಟ್ಟ ಹೊಗೆ ಬಂದು ಸುಂದರ್ ಹಾಗೂ ನಯಾಜ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರ ಕಚೇರಿಯೊಳಗಿನ ಸಣ್ಣ ಚೇಂಬರ್ನಲ್ಲಿ ಕುಳಿತಿದ್ದ ಕಾರಣ. ಬೆಂಕಿ ಹೊತ್ತಿಕೊಂಡಿದ್ದು ಬೇಗ ಗೊತ್ತಾಗಿಲ್ಲ. ನಂತರ ತಪ್ಪಿಸಿಕೊಳ್ಳುವ ದಾರಿ ಮುಚ್ಚಿ ಹೋಗಿತ್ತು ಎಂದು ಅಗ್ನಿಶಾಮಕ ಅಧಿಕಾರಿ ಶಶಿಧರ್ ತಿಳಿಸಿದರು.
ಪಾರಾದ ಮಕ್ಕಳು: ತಂಗಿಯ ಮೂವರು ಮಕ್ಕಳು ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ ಚಾಕಲೇಟ್ ಹಾಗೂ ತಿಂಡಿ ಕೊಡಿಸಲು ಕಚೇರಿ ಸಹಾಯಕ ಹೊರಗೆ ಕರೆದುಕೊಂಡು ಹೋಗಿದ್ದ. ನಾನು ಹಾಗೂ ಕಿರಿಯ ವಕೀಲರು ಕಾಫಿ ಸೇವಿಸಲು ಹೋಗಿದ್ದೆವು. ನಾವೆಲ್ಲ ಕಚೇರಿ ಒಳಗಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಹಿರಿಯ ವಕೀಲ ಬಾಲಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು. ಮೃತ ನಯಾಜ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ನಿವೃತ್ತರಾಗಿದ್ದರು. ಕಳೆದ ಒಂದು ವರ್ಷದಿಂದ ಬಾಲಕೃಷ್ಣ ಅವರ ಕಚೇರಿಯಲ್ಲಿ ಟೈಪಿಂಗ್ ಮಾಡುತ್ತಿದ್ದರು.
ಸುಟ್ಟು ಕರಕಲು: ಕಚೇರಿ ಒಳಗೆ ಪಿಠೋಪಕರಣಗಳ ಜತೆಗೆ ನೂರಾರು ಪುಸ್ತಕಗಳು, ಹಲವು ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ರ್ಯಾಕ್ಗಳಲ್ಲಿ ಜೋಡಿಸಿಡಲಾಗಿತ್ತು. ಆದರೆ, ಬೆಂಕಿಯ ನರ್ತನಕ್ಕೆ ಎಲ್ಲವೂ ಸುಟ್ಟು ಕರಕಲಾಗಿದೆ.
ಮೇಲಿನಿಂದ ಹಾರುವ ಯತ್ನ
ಟೆರೇಸ್ ಮೇಲೆ ಹತ್ತಿದ್ದ ಮೂರ್ನಾಲ್ಕು ಜನ ಪ್ರಾಣ ಭಯದಿಂದ ಕೆಳಗೆ ಜಿಗಿಯುವುದಾಗಿ ಹೇಳುತ್ತಿದ್ದರು. ಕಟ್ಟಡ ಸುತ್ತಮುತ್ತ ಸೇರಿದ್ದ ಜನ ಬೇಡ ಎಂದು ಮನವಿ ಮಾಡಿದರು. ಅಲ್ಲದೇ ಅಗ್ನಿಶಾಮಕ ವಾಹನ ಬರುತ್ತಿದೆ ಎಂದು ಧೈರ್ಯ ಹೇಳಿದರು. ಹೀಗಾಗಿ ಅದೃಷ್ಟವಷಾತ್ ಹೆಚ್ಚಿನ ಜೀವಹಾನಿ ತಪ್ಪಿದೆ ಎಂದು ಇಡೀ ಘಟನೆಯನ್ನು ಕಣ್ಣಾರೆ ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಜಯಕುಮಾರ್.
ಒಂದು ವರ್ಷದ ಹಿಂದೆ ಅದೇ ಕಚೇರಿಯಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಆದರೆ, ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಮತ್ತೆ ಬೆಂಕಿ ಹತ್ತಿಕೊಂಡಿದ್ದು ಹೇಗೆ ಎನ್ನುವುದು ಗೊತ್ತಿಲ್ಲ.
-ಬಾಬುಲಾಲ್, ಸ್ಥಳೀಯ