ಅಂದು ಮೂರು, ಇಂದು ಹದಿಮೂರು
ಅಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಉಪಪ್ರಧಾನಿ ಲಾಲಕೃಷ್ಣ ಅಡ್ವಾಣಿ...
ನರೇಂದ್ರ ಮೋದಿ ಸರ್ಕಾರದಲ್ಲಿ ಹಿಂದೆ ಬಿದ್ದ ಅನಂತಕುಮಾರ್ | ರೇಲ್ವೆ ಖಾತೆ ಸಚಿವರಾಗಬೇಕೆಂಬ ಬಹುದಿನದ ಆಸೆ ಹುಸಿ | ಆರನೇ ಸ್ಥಾನದಲ್ಲಿ ಪ್ರಮಾಣ, ರೇಲ್ವೆ ಖಾತೆ ಪಡೆಯಲಿರುವ ಡೀವಿ | ಚುನಾವಣೆ ವೇಳೆ ಅಡ್ಡಗಾಲು ಹಾಕಿದ್ದ ಅನಂತಗೆ ಸ್ಪಷ್ಟ ಸಂದೇಶ ರವಾನೆ
ಬೆಂಗಳೂರು: ವಿಧಿ ವಿಲಾಸ!
ಅಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಉಪಪ್ರಧಾನಿ ಲಾಲಕೃಷ್ಣ ಅಡ್ವಾಣಿ ಅವರ ನಂತರ ಪ್ರಮಾಣವಚನ ಸ್ವೀಕರಿಸಿದವರೇ ಅನಂತಕುಮಾರ್. ಸೋಮವಾರ ಮೋದಿ ಸರ್ಕಾರದಲ್ಲಿ ಅವರ ಹೆಸರು ಕರೆಯುವ ಹೊತ್ತಿಗೆ 12 ಮಂದಿ ಪ್ರಮಾಣವಚನ ಸ್ವೀಕರಿಸಿಯಾಗಿತ್ತು!
ಸತತ ಆರನೇ ಬಾರಿ ಬೆಂಗಳೂರು ದಕ್ಷಿಣದಿಂದ ಸಂಸದರಾಗಿ ಆಯ್ಕೆಯಾದ ಅನಂತಕುಮಾರ್ ಕೇಂದ್ರದಲ್ಲಿ ಈ ಹಿಂದೆಯೂ ಸಚಿವರಾಗಿದ್ದವರು. ಈ ಬಾರಿಯೂ ದೊಡ್ಡ ಖಾತೆ ನಿರೀಕ್ಷೆಯಿತ್ತು. ಆದರೆ ಮೋದಿ ಸರ್ಕಾರದಲ್ಲಿ ಅನಂತಕುಮಾರ್ ಹಿಂದೆ ಬಿದ್ದಿದ್ದಂತೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅನಂತಕುಮಾರ್ಗಿಂತ ಮೊದಲು ಪ್ರಮಾಣ ಸ್ವೀಕರಿಸಿದವರಲ್ಲಿ ರಾಜನಾಥಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯನಾಯ್ಡು ಅವರನ್ನು ಬಿಟ್ಟರೆ ಉಳಿದವರು ಪಕ್ಷದ ಸಂಸದೀಯ ಮಂಡಳಿ ಸದಸ್ಯರು ಕೂಡ ಅಲ್ಲ. ಅನಂತಕುಮಾರ್ ಬಹಳ ಸಮಯದಿಂದ ಪಕ್ಷದ ಸಂಸದೀಯ ಮಂಡಳಿ ಸದಸ್ಯತ್ವ ಹೊಂದಿದ್ದಾರೆ. ಮೋದಿ, ರಾಜನಾಥ ಸಿಂಗ್, ಸುಷ್ಮಾ, ಜೇಟ್ಲಿ, ವೆಂಕಯ್ಯ, ಗಡ್ಕರಿ ನಂತರ ಸದಾನಂದ ಗೌಡ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು. ಅನಂತಕುಮಾರ್ ಎರಡನೇ ಸಾಲಿನಲ್ಲಿ ಕುಳಿತಿದ್ದರು.
ಇನ್ನೊಂದು ವಿಶೇಷವೆಂದರೆ ಅನಂತಕುಮಾರ್ ಅವರಿಗೆ ರೈಲ್ವೆ ಸಚಿವರಾಗಬೇಕು ಎಂಬ ಆಸೆ ಬಹುಸಮಯದಿಂದ ಇದೆ. ಇದಕ್ಕೆ ಒಂದು ಭಾವನಾತ್ಮಕ ಕಾರಣವೂ ಇದೆ. ಅನಂತಕುಮಾರ್ ಅವರ ತಂದೆ ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ಬಾಲ್ಯವನ್ನು ಹುಬ್ಬಳ್ಳಿಯ ರೇಲ್ವೆ ಕಾಲೋನಿಯಲ್ಲಿ ಕಳೆದವರು. ಈ ಹಿನ್ನೆಲೆಯಲ್ಲಿ ಆ ಇಲಾಖೆಯ ಸಚಿವನಾಗಬೇಕೆಂಬ ಅದಮ್ಯ ಆಸೆ ಅವರಿಗೆ ಬಹುಕಾಲದಿಂದ ಇದೆ.
ಅದರಲ್ಲೂ ವಿಶೇಷವಾಗಿ ರಾಜ್ಯದಿಂದ ಮತ್ತು ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ವಿ. ಸದಾನಂದಗೌಡರು ಆರನೇಯವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಅನಂತಕುಮಾರ್ಗೆ ಸ್ಪಷ್ಟ ಸಂದೇಶ ರವಾನೆಯಾಗಿರುತ್ತದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಯಾಕೆಂದರೆ ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಬಯಸಿದಾಗ, ಮಾಜಿ ಸಚಿವ ಆರ್. ಅಶೋಕ ಅವರ ಮೂಲಕ ಅಡ್ಡಗಾಲಿಕ್ಕಿದ್ದು ಇದೇ ಅನಂತಕುಮಾರ್. ಸದಾನಂದ ಗೌಡರಂತಹ ನಾಯಕರು ಬೆಂಗಳೂರಿನಲ್ಲಿ ಬೆಳೆಯುವುದು ಅನಂತಕುಮಾರ್ ಮತ್ತು ಅಶೋಕ ಇಬ್ಬರಿಗೂ ಬೇಕಿರಲಿಲ್ಲ. ಗಾಯದ ಮೇಲೆ ಉಪ್ಪು ಸವರಿದಂತೆ ಸದಾನಂದಗೌಡರು ಗೆದ್ದಿದ್ದಲ್ಲದೇ, ಅನಂತಕುಮಾರ್ ಆಸೆಪಟ್ಟಿದ್ದ ರೇಲ್ವೆ ಖಾತೆಯನ್ನೇ ಪಡೆದಿರುವುದು ವಿಶೇಷ.
ಇನ್ನೂ ಸ್ವಲ್ಪ ಹಿಂದಿನ ವಿದ್ಯಮಾನಗಳನ್ನು ಗಮನಿಸಿದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಸದಾನಂದ ಗೌಡ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿಲಾಗಿತ್ತು. ಆಗ ಅನಂತಕುಮಾರ್ ಅವರು ಜಗದೀಶ ಶೆಟ್ಟರ್ ಅವರ ಪರ ನಿಂತಿದ್ದರು.
1998ರಲ್ಲಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಚಿವರನ್ನು ಹೆಸರಿನ ಮೊದಲ ಅಕ್ಷರದ ಆಧಾರದಲ್ಲಿ ಕರೆಯಲಾಗಿತ್ತು. ಅನಂತಕುಮಾರ್ ಅವರ ಹೆಸರು ಅಟಲ್, ಆಡ್ವಾಣಿಯವರ ನಂತರ ಮೂರನೇಯದಾಗಿ ಬರಲೂ ಅದೂ ಒಂದು ಕಾರಣವಿರಬಹುದು. ಆದರೆ ಮೋದಿ ಸರ್ಕಾರದಲ್ಲಿ ಅವರ ಹೆಸರು 13ನೇಯದಾಗಿ ಬರಲು ಸಾಕಷ್ಟು ಕಾರಣಗಳಿವೆ ಎಂದೇ ಹೇಳಲಾಗುತ್ತಿದೆ.
- ವಿನಾಯಕ ಭಟ್ಟ ಮೂರೂರು