ಕರ್ನಾಟಕಕ್ಕೆ ಮೋದಿ ದೊಡ್ಡ ಕೊಡುಗೆ
ಆರನೇ ಬಾರಿಗೆ ಸಂಸತ್ ಪ್ರವೇಶ ಮಾಡಿದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ...
-ಹಿರಿತನದಲ್ಲಿ ಡಿ.ವಿ. ಸದಾನಂದಗೌಡರಿಗೆ ಬಡ್ತಿ?
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಆರನೇ ಬಾರಿಗೆ ಸಂಸತ್ ಪ್ರವೇಶ ಮಾಡಿದ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಜಿ.ಎಂ. ಸಿದ್ದೇಶ್ವರ್ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸುತ್ತಿರುವ ಅನಂತಕುಮಾರ್, ಬೆಂಗಳೂರು ಉತ್ತರ ಕ್ಷೇತ್ರ ಪ್ರತಿನಿಧಿಸುತ್ತಿರುವ ಸದಾನಂದಗೌಡ ಕ್ಯಾಬಿನೆಟ್ ದರ್ಜೆ ಪಡೆದಿದ್ದರೆ, ಮೂರನೇ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಜಿ.ಎಂ. ಸಿದ್ದೇಶ್ವರ ರಾಜ್ಯ ಸಚಿವರಾಗಿದ್ದಾರೆ. ಈ ಮೂಲಕ ಮೋದಿ ಕರ್ನಾಟಕಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಅವರ ಸಂಪುಟದ ಗಾತ್ರ ಮತ್ತು ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರ ಸಂಖ್ಯೆ ಗಮನಿಸಿದರೆ, ಕರ್ನಾಟಕಕ್ಕೆ ಹೆಚ್ಚಿನ ಪಾಲು ದಕ್ಕಿದೆ. ಯುಪಿಯ ಸರ್ಕಾರದ ಅವಧಿಯಲ್ಲಿ ನಾಲ್ವರು (ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್ ಹಾಗೂ ಮುನಿಯಪ್ಪ) ಕೇಂದ್ರ ಸಚಿವರಿದ್ದರು.
ಸದಾನಂದಗೌಡರಿಗೆ ಅದೃಷ್ಟ: ಸದಾನಂದಗೌಡರಿಗೆ ಅದೃಷ್ಟ ಒಲಿದಂತಿದೆ. ನರೇಂದ್ರಮೋದಿ ಅವರ ಸಂಪುಟದಲ್ಲಿ ಸ್ಥಾನ ಗಳಿಸಿದ್ದಷ್ಟೇ ಅಲ್ಲದೇ ಬಡ್ತಿಯನ್ನೂ ಪಡೆದಂತಿದೆ. ಪ್ರಮಾಣ ವಚನ ಬೋಧಿಸುವಾಗ ಹಿರಿತನವನ್ನಾಧರಿಸಿ ಹೆಸರುಗಳನ್ನು ಕರೆಯುವುದು ಸಂಸದೀಯ ಶಿಷ್ಟಾಚಾರ. ಆ ಲೆಕ್ಕದಲ್ಲಿ ಸದಾನಂದಗೌಡ ಅವರು ಏಳನೆಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಂದರೆ- ಅನಂತಕುಮಾರ್ 14ನೆಯವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನರೇಂದ್ರಮೋದಿ ಅವರ ನಂತರ, ರಾಜನಾಥ್ ಸಿಂಗ್, ಸುಷ್ಮಾಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಹಾಗೂ ನಿತಿನ್ ಗಡ್ಕರಿ ಪ್ರಮಾಣ ವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ ಆದ ನಂತರ ಸದಾನಂದಗೌಡರ ಸರದಿ. ಅಂದರೆ, ನರೇಂದ್ರಮೋದಿ ಅವರ ಸಂಪುಟದಲ್ಲಿ ಸದಾನಂದಗೌಡರ ಸ್ಥಾನ ಮಾನ ಏಳನೇ ಕ್ರಮಕ್ಕೆ ಏರಿದೆ. ಈ ಶಿಷ್ಚಾಚಾರವನ್ನೇ ಸಂಪುಟದಲ್ಲಿ ಅವರ ಸ್ಥಾನಮಾನಗಳನ್ನು ಸೂಚಿಸುತ್ತದೆ ಎಂಬುದನ್ನು ನಂಬಬಹುದಾದರೆ, ನರೇಂದ್ರ ಮೋದಿ ಸಂಪುಟದಲ್ಲಿ ಅನಂತಕುಮಾರ್ ಸ್ಥಾನ 14ಕ್ಕೆ ಇಳಿದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ, ಬಿಜೆಪಿ ರಾಷ್ಟ್ರೀಯ ಕೋರ್ ಕಮಿಟಿ ಸದಸ್ಯರೂ ಆಗಿರುವ ಅನಂತ್ಕುಮಾರ್ ಅವರು ಸಂಪುಟದಲ್ಲಿ ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಇರಬೇಕಿತ್ತು. ಈ ಹಿಂದೆ ವಾಜಪೇಯಿ ಸಂಪುಟದಲ್ಲಿ ನಗರಾಭಿವೃದ್ಧಿ, ನಾಗರಿಕ ವಿಮಾನ ಯಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಖಾತೆ ಪಡೆಯುವಲ್ಲೂ ಸದಾನಂದಗೌಡರದು ಅದೃಷ್ಟ. ರೇಲ್ವೆ ಖಾತೆ ಪಡೆಯುವ, ಅನಂತಕುಮಾರ್ ಅವರಿಗೆ ಸಂಸದೀಯ ವ್ಯವಹಾರಗಳ ಖಾತೆ ನೀಡುವ ಸಾಧ್ಯತೆ ಇದೆ. ಸಂಸದೀಯ ವ್ಯವಹಾರಗಳ ಖಾತೆ ಹೆಚ್ಚು ಗೌರವಯುತ ಖಾತೆ ಮತ್ತು ಅದನ್ನು ಸಂಸದೀಯ ಪಟುತ್ವ ಇರುವವರು ಮಾತ್ರ ನಿರ್ವಹಿಸಲು ಸಾಧ್ಯ. ಆರು ಬಾರಿ ಆಯ್ಕೆಯಾಗಿರುವ ಅನಂತಕುಮಾರ್ ಅತ್ಯುತ್ತಮ ಸಂಸದೀಯ ಪಟು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಖಾತೆಗೆ ದಕ್ಕುವ ಬಜೆಟ್ ಪ್ರಮಾಣ ಅತ್ಯಲ್ಪ.