ಕಾಂಗ್ರೆಸ್ ವಿಜಯ ಪತಾಕೆ
ಮನ್ಮುಲ್: 12 ಸ್ಥಾನಗಳ ಪೈಕಿ 7ರಲ್ಲಿ ಕಾಂಗ್ರೆಸ್, 5ರಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲವು
ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಕೈ ವಶವಾಗಿದೆ.
ಸೋಮವಾರ ನಡೆದ ಚುನಾವಣೆಯಲ್ಲಿ ಒಕ್ಕೂಟದ 12 ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ 34 ಮಂದಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಬೆಂಬಲಿಗರು 7 ಸ್ಥಾನಗಳನ್ನು, ಜೆಡಿಎಸ್ ಬೆಲಿಗರು 5 ಸ್ಥಾನಗಳನ್ನು ಪಡೆಯುವುದರ ಮೂಲಕ ಕಾಂಗ್ರೆಸ್‌ಗೆ ಬಲ ಬಂದಂತಾಗಿದೆ.
ಜಿಲ್ಲೆಯ 7 ತಾಲೂಕುಗಳ ಕೇಂದ್ರಗಳಲ್ಲಿನ 1007 ಮತದಾರರ ಪೈಕಿ 1004 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಹಿಳೆಯರಿಬ್ಬರು ಸ್ಪರ್ಧಿಸಿದ್ದು, ಮದ್ದೂರಿನಿಂದ ಎಂ.ರೂಪ, ಮಂಡ್ಯ ತಾಲೂಕಿನಿಂದ ಜೆ.ಸುಜಾತ ಅವರು ಸೋಲು ಕಂಡಿದ್ದಾರೆ. ಉಳಿದಂತೆ ಕಳೆದ ಬಾರಿ ಆಡಳಿತ ಮಂಡಳಿಯಲ್ಲಿದ್ದ ಬಹುತೇಕ ನಿರ್ದೇಶಕರು ಸೋಲನ್ನಪ್ಪಿದ್ದಾರೆ.
ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಹರೀಶ್ 64 ಮತಗಳನ್ನು ಪಡೆದು ಸೋಲೊಪ್ಪಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ಹೊಸ ಮುಖಗಳಿಗೆ ಹೆಚ್ಚು ಪ್ರಾತಿನಿದ್ಯತೆ ನೀಡಿದ್ದಾರೆ. ಚುನಾವಣಾಧಿಕಾರಿಗಳಾಗಿ ಮಂಡ್ಯ ಉಪವಿಭಾಗಾಧಿಕಾರಿ ಶಾಂತಾ ಹುಲ್ಮನಿ, ಸಹಾಯಕ ಚುನಾವಣಾಧಿಕಾರಿಯಾಗಿ ಮಂಡ್ಯ ತಹಸೀಲ್ದಾರ್ ಡಾ.ಮಮತಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿದರು. ಚುನಾವಣೆ ನಂತರ ಗೆದ್ದ ಅಭ್ಯರ್ಥಿಗಳ ಬೆಂಬಲಿಗರು ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಅಭ್ಯರ್ಥಿಗಳು ಪಡೆದ ಮತ ವಿವರ
ನಾಗಮಂಗಲ: ಬೆಟ್ಟಸ್ವಾಮಿಗೌಡ 126, ಡಿ.ಟಿ.ಕೃಷ್ಣೇಗೌಡ 103, ಕೆ.ಪಿ.ಶಿವನಂಜೇಗೌಡ 96, ಡಾ.ಕೆ.ಎಲ್.ಗಜೇಂದ್ರ 30.
ಕೆ.ಆರ್.ಪೇಟೆ: ಎಸ್.ಅಂಬರೀಷ್ 123, ಕೆ.ರವಿ 102, ಎಂ.ಬಿ.ಹರೀಶ್ 64, ಎ.ಎನ್.ಜಾನಕಿ ರಾಂ 53.
ಶ್ರೀರಂಗಪಟ್ಟಣ: ಬಿ.ಬೋರೇಗೌಡ 33, ರಾಮಕೃಷ್ಣ 29.
ಪಾಂಡವಪುರ: ಜಿ.ಇ.ರವಿಕುಮಾರ್ 63, ಪಿ.ಚಲುವರಾಜು 38, ಸಿ.ವಿ.ಗಿರೀಗೌಡ 13, ಎಲ್.ಸಿ.ಮಂಜುನಾಥ್ 9.
ಮಳವಳ್ಳಿ: ಬಿ.ಎಂ.ವಿಶ್ವನಾಥ್ 66, ಬಿ.ಗಂಗಾಧರ್ 37.
ಮದ್ದೂರು: ಕದಲೂರು ರಾಮಕೃಷ್ಣ 86, ಕೆ.ಎಂ.ಉಮೇಶ್ 62, ಪಿ.ರಾಮೇಗೌಡ 60, ಚಿಕ್ಕೋನಹಳ್ಳಿ ತಮ್ಮಯ್ಯ 35, ಎ.ಸಿ.ಸತೀಶ್ 35, ಎಂ.ರೂಪ 15, ಬಿ.ಬಿ.ಕುಶ್ 10.
ಮಂಡ್ಯ: ಯು.ಸಿ.ಶಿವಕುಮಾರ್ 116, ಬಿ.ಚಂದ್ರ 97, ಎಸ್.ಪಿ.ಮಹೇಶ್ 96, ಎಚ್.ಎಂ.ಶ್ಯಾಮ ಸುಂದರ್ 94, ಶ್ರೀಕಂಠೇಗೌಡ 65, ವೈ.ಬಿ.ಅಶೋಕ್ಗೌಡ 60, ಎಚ್.ಕೆ.ಕೃಷ್ಣೇಗೌಡ 6, ಜೆ.ಸುಜಾತ 4, ಎಸ್.ಕೃಷ್ಣ 3.
ಬಿರುಸಿನ ಮತದಾನ
ಮನ್ಮುಲ್ ನಿರ್ದೇಶಕರ ಸ್ಥಾನಕ್ಕೆ ಸೋಮವಾರ ನಗರದಲ್ಲಿ ನಡೆದ ಚುನಾವಣೆಯಲ್ಲಿ ಬಿರುಸಿನಿಂದ ಮತದಾನ ನಡೆಯಿತು. ನಗರದ ಶ್ರೀ ಲಕ್ಷ್ಮಿ ಜನಾರ್ದನ ಬಾಲಕಿಯರ ಪ್ರೌಢಶಾಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟವರೆಗೆ ಮತದಾನ ನಡೆಯಿತು. ಬೆಳಗ್ಗೆಯಿಂದಲೇ ಅಭ್ಯರ್ಥಿಗಳ ಬೆಂಬಲಿಗರು ಕೆ.ಆರ್. ರಸ್ತೆಯಲ್ಲಿ ಟೆಂಟುಗಳನ್ನು ಹಾಕಿಕೊಂಡು ಮತದಾರರ ಮನಮೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ನಗರದ ಜಯಚಾಮರಾಜ ಒಡೆಯರ್ ವೃತ್ತ, ವಿವಿ ರಸ್ತೆ, ಕೆ.ಆರ್. ರಸ್ತೆಗಳಲ್ಲಿ ಅಭ್ಯರ್ಥಿಗಳ ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ರಸ್ತೆ ತುಂಬೆಲ್ಲಾ ಅಭ್ಯರ್ಥಿಗಳ ಬೆಂಬಲಿಗರು ಮತದಾರರ ಮನಮೊಲಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದರು.
ಸಂಚಾರಕ್ಕೆ ಅಡಚಣೆ: ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ನಗರದ ಲಕ್ಷ್ಮಿ ಜನಾರ್ದನ ಬಾಲಕಿಯರ ಪ್ರೌಢಶಾಲೆಯಲ್ಲಿ ಮತದಾನ ನಡೆಯುತ್ತಿದ್ದ ಕಾರಣ ಕೆ.ಆರ್.ರಸ್ತೆ, ವಿವಿ ರಸ್ತೆ, ಸೇರಿದಂತೆ ಶಾಲೆಯ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ಗಣಪತಿ ದೇವಾಲಯದಿಂದ ಕಲಾಮಂದಿರಕ್ಕೆ ಹೋಗುವ ರಸ್ತೆಯವರೆಗೆ 100 ಮೀ. ಸಂಚಾರ ನಿಷೇಧಿಸಲಾಗಿತ್ತು. ಡಿಡಿಪಿಐ ಕಚೇರಿ ಕಡೆಯಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಶಾಲಾ ಆವರಣದಲ್ಲಿ ಅಭ್ಯರ್ಥಿಗಳು ಸೇರಿದಂತೆ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.