ಮೋದಿ ರಾಜಯೋಗ
ಕೋಮುವಾದ ವರ್ಸಸ್ ಜಾತ್ಯತೀತತೆ ಮುಗಿದ ಅಧ್ಯಾಯ. ಜನರಿಗೆ ಹಿಂದುತ್ವ, ಭಾರತೀಯತೆಯ ಚರ್ಚೆ ಬೇಕಾಗಿಲ್ಲ. ಅವರು ಚರ್ಚಿಸುತ್ತಿರುವುದು ಉದ್ಯೋಗ, ಜಿಡಿಪಿ, ಆರ್ಥಿಕತೆ ಕುರಿತು. ಅವರಿಗೆ ಬೇಕಿರುವುದು ಭ್ರಷ್ಟಾಚಾರದ ಕೂಪದಿಂದ ದೇಶವನ್ನು ಪಾರು ಮಾಡುವ, ಅಭಿವೃದ್ಧಿಯತ್ತ ಮುನ್ನಡೆಸುವ ಪಕ್ಷ ಎನ್ನುವುದನ್ನು ರಾಜನಾಥ ಸಿಂಗ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಪಕ್ಷದಲ್ಲಿ ಎಲ್ಲರಿಗಿಂತಲೂ ಮೋದಿಯೇ ಜನಪ್ರಿಯ ನಾಯಕ ಎನ್ನುವುದನ್ನೂ ಅವರು ಊಹಿಸಿದ್ದರು.
ಅಂದು ಆಡ್ವಾಣಿ-ಅಟಲ್. ಇಂದು ರಾಜನಾಥ್-ಮೋದಿ. ಎಂಟನೇ ಲೋಕಸಭೆಯಲ್ಲಿ ಕೇವಲ 2 ಸ್ಥಾನ, 16ನೇ ಲೋಕಸಭೆಯಲ್ಲಿ 282 ಸ್ಥಾನ. ಬದಲಾದ ಕಾಲಘಟ್ಟದಲ್ಲಿ ಬಿಜೆಪಿಯೂ ಬದಲಾಗಿದೆ. ಅದರ ಪ್ರಚಾರ ಶೈಲಿ ಬದಲಾಗಿದೆ. ಪಕ್ಷದ ಜೊತೆಯಲ್ಲೇ ನಾಯಕರೂ ಬದಲಾಗಿದ್ದಾರೆ. ಅದೆಲ್ಲದರ ಫಲವೇ ಐತಿಹಾಸಿಕ ಗೆಲವು. ಪಕ್ಷದಲ್ಲಿ ಆಗಿರುವ ಬದಲಾವಣೆಗೆ ರಾಜನಾಥ್ ಮುಖ್ಯ ಪಾತ್ರವಹಿಸಿದರೆ, ದಿಗ್ವಿಜಯದಲ್ಲಿ ಮೋದಿಯದು ಪ್ರಮುಖ ಪಾತ್ರ. 'ಯೆಸ್, ನಾವು ಮಾಡಬಲ್ಲೆವು. ಯೆಸ್, ನಾವು ಮಾಡುತ್ತೇವೆ' ಎನ್ನುವ ಮಂತ್ರವನ್ನು ಇಬ್ಬರೂ ಪಠಿಸುತ್ತಲೇ ಸಾಗಿದರು. ಸಾಮಾನ್ಯವಾಗಿ ಇಬ್ಬರೂ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವುದು ಹಿಂದಿಯಲ್ಲಿ. ಈ ಬಾರಿ ಹಿಂದಿ ಪ್ರಬಲವಾಗಿರುವ ರಾಜ್ಯಗಳು, ಬಿಜೆಪಿ ಬಲವಾಗಿಲ್ಲದ ದಕ್ಷಿಣ ಭಾರತದ ರಾಜ್ಯಗಳಲ್ಲೂ ತಮ್ಮ ಮಾತಿನ ನಡುನಡುವೆ ಸಣ್ಣಪುಟ್ಟ ಇಂಗ್ಲಿಷ್ ವಾಕ್ಯಗಳನ್ನು ಬಳಸಲುತೊಡಗಿದರು. ಇವೆಲ್ಲ ಪುಟ್ಟಪುಟ್ಟ ಬದಲಾವಣೆಗಳು, ಆದರೆ ಜನ ಮಾತ್ರ ಸ್ಪಷ್ಟವಾಗಿ ಗುರುತಿಸಿದರು.
ಹೊಸ ಇಮೇಜ್ ಹೊಸ ನೀತಿ
ಪಕ್ಷಕ್ಕೆ ಹೊಸ ಇಮೇಜ್ ನೀಡುವ ಮುನ್ನ ತಮ್ಮನ್ನು ತಾವೇ ಬದಲಿಸಿಕೊಳ್ಳಲು ರಾಜನಾಥ್ ನಿರ್ಧರಿಸಿದ್ದರು. ಅದು ಅವರ ವ್ಯಕ್ತಿತ್ವದಲ್ಲಿ ಫಲಿತಗೊಂಡಿತ್ತು. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹಿರಿಯ ನಾಯಕರಿಗೂ ನೇರವಾಗಿ ಹೇಳುವ ಮನಸ್ಥಿತಿಯನ್ನು ಅವರು ಬೆಳೆಸಿಕೊಂಡಿದ್ದರು. ಅಲ್ಲಿಯವರೆಗೆ ಬಿಜೆಪಿಯಲ್ಲಿ ಹಿರಿತನ, ಅನುಭವಕ್ಕೆ ಮನ್ನಣೆ ನೀಡುವ ಸಂಪ್ರದಾಯವಿತ್ತು. ಬಿಜೆಪಿಯನ್ನು ಗೆಲ್ಲಿಸಲು ಹಳೆಯ ಸಂಪ್ರದಾಯಗಳನ್ನೆಲ್ಲ ಬದಿಗಿರಿಸುವುದು ಅನಿವಾರ್ಯ ಎನ್ನುವ ಸತ್ಯವನ್ನು ಅಧ್ಯಕ್ಷರು ಮನಗಂಡಿದ್ದರು. ಪಕ್ಷದ ಸೈದ್ಧಾಂತಿಕ ಪಾಲುದಾರ, ಮಾರ್ಗದರ್ಶಕನಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿರೀಕ್ಷೆ, ಪಕ್ಷಕ್ಕೆ ಹೊಸತನ ನೀಡುವುದು ಇವೆರಡರ ನಡುವೆ ಸಮನ್ವಯ ಸಾಧಿಸುವ ಸವಾಲೂ ಎದುರಿಗಿತ್ತು. ಕೋಮುವಾದ ವರ್ಸಸ್ ಜಾತ್ಯತೀತತೆ ಮುಗಿದ ಅಧ್ಯಾಯ. ಜನರಿಗೆ ಹಿಂದುತ್ವ, ಭಾರತೀಯತೆಯ ಚರ್ಚೆ ಬೇಕಾಗಿಲ್ಲ. ಅವರು ಚರ್ಚಿಸುತ್ತಿರುವುದು ಉದ್ಯೋಗ, ಜಿಡಿಪಿ, ಆರ್ಥಿಕತೆ ಕುರಿತು. ಅವರಿಗೆ ಬೇಕಿರುವುದು ಭ್ರಷ್ಟಾಚಾರದ ಕೂಪದಿಂದ ದೇಶವನ್ನು ಪಾರು ಮಾಡುವ, ಅಭಿವೃದ್ಧಿಯತ್ತ ಮುನ್ನಡೆಸುವ ಪಕ್ಷ ಎನ್ನುವುದನ್ನು ಅಧ್ಯಕ್ಷರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅದನ್ನು ಆರ್‌ಎಸ್‌ಎಸ್ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟದ್ದು ಮಾತ್ರವಲ್ಲ, 'ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವ ಸಾಂಸ್ಕೃತಿಕ ರಾಷ್ಟ್ರೀಯತೆಗಿಂತ ಹೆಚ್ಚಿನದನ್ನು ಅಪೇಕ್ಷಿಸಕೂಡದು' ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿಬಿಟ್ಟರು. ಅದಕ್ಕೆ ಸಂಘದ ಸಮ್ಮತಿಯೂ ಸಿಕ್ಕಿಬಿಟ್ಟಿತು. ಅಲ್ಲಿಗೆ ಒಂದು ಹಂತದ ಯುದ್ಧ ಗೆದ್ದಂತಾಗಿತ್ತು. ಯಂಗ್ ಲುಕ್ ಪಡೆದ, ಭದ್ರವಾಗಿ ನಿಂತಿದ್ದ ಪಕ್ಷವನ್ನು ಕಾರ್ಯಕರ್ತರು, ಸಂಘದ ಸ್ವಯಂಸೇವಕರು ದೇಶದ ಮೂಲೆಮೂಲೆಗೂ ತಲುಪಿಸಿದರು. ಬೂತ್‌ಮಟ್ಟದಲ್ಲೂ ಪಕ್ಷದ ಸಮಿತಿಗಳು ರಚನೆಯಾದವು.
ಮೋದಿ ಘೋಷಣೆ
ರಾಜನಾಥ ಸಿಂಗ್ ಅವರಿಗೆ ಚೆನ್ನಾಗಿ ಗೊತ್ತಿತ್ತು, ಪಕ್ಷದಲ್ಲಿ ತಮ್ಮೆಲ್ಲರಿಗಿಂತ ನರೇಂದ್ರ ಮೋದಿಯೇ ಜನಪ್ರಿಯ ನಾಯಕ ಎಂದು. ಸಂಸದೀಯ ಮಂಡಳಿಯ ಸದಸ್ಯರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ತೀರ್ಮಾನ ಕೈಗೊಂಡರು. ಆ ಮೇಲೆ ಶುರುವಾಯಿತು ನೋಡಿ ಸಮರಾಭ್ಯಾಸ. ಪಕ್ಷ ಈ ಸಲ ಪ್ರಚಾರದಲ್ಲಿ ಅಳವಡಿಸಿಕೊಂಡ ತಂತ್ರವೂ ಪರಿಣಾಮಕಾರಿಯಾಗಿತ್ತು. ಆರಂಭದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ, ಹಗರಣಗಳನ್ನು ಪ್ರಸ್ತಾಪಿಸುತ್ತಿದ್ದ ನಾಯಕರು ಚುನಾವಣೆ ಸಮೀಪಿಸುತ್ತಿರುವಂತೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಕುರಿತಾಗಿಯಷ್ಟೇ ಮಾತನಾಡತೊಡಗಿದರು. ಇದ್ದಕ್ಕಿದ್ದಂತೆ ಆದ ಈ ಬದಲಾವಣೆಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ತಿಳಿಯದೇ ಎದುರಾಳಿಗಳು ಕಕ್ಕಾಬಿಕ್ಕಿಯಾದರು. 'ಚಾಯ್ ಪೆ ಚರ್ಚಾ' ಸೇರಿದಂತೆ ಜನರೊಂದಿಗೆ ನೇರವಾಗಿ ಸಂಭಾಷಿಸುವ ಸಾಧ್ಯತೆಗಳನ್ನೆಲ್ಲ ಪಕ್ಷ ಚೆನ್ನಾಗಿ ಬಳಸಿಕೊಂಡಿತು. ಚುನಾವಣೆ ಘೋಷಣೆಗೆ ಮುನ್ನ ರ್ಯಾಲಿಗಳಲ್ಲಿ ಜಂಟಿಯಾಗಿ ಭಾಗವಹಿಸುತ್ತಿದ್ದ ರಾಜನಾಥ್, ಮೋದಿ ಆ ಬಳಿಕ ಏಕಾಂಗಿಯಾಗಿ ರ್ಯಾಲಿಗಳಲ್ಲಿ ಭಾಗವಹಿಸತೊಡಗಿದರು. ಅದು ಹೆಚ್ಚು ರ್ಯಾಲಿಗಳ ಮೂಲಕ ಅಧಿಕ ಜನರನ್ನು ತಲುಪುವ ತಂತ್ರದ ಭಾಗವೇ ಆಗಿತ್ತು.