ಮೋದಿ ಸರ್ಕಾರ್
ಹಿಂದಿನ ಎನ್ಡಿಎ ಸರ್ಕಾರದಲ್ಲಿ ನಗರಾಭಿವೃದ್ಧಿ, ಕೃಷಿ ಖಾತೆ ಸಚಿವ...
ರಾಜನಾಥ್ ಸಿಂಗ್
ಕ್ಷೇತ್ರ: ಲಖನೌ
ವಿಶೇಷ: ಹಿಂದಿನ ಎನ್ಡಿಎ ಸರ್ಕಾರದಲ್ಲಿ ನಗರಾಭಿವೃದ್ಧಿ, ಕೃಷಿ ಖಾತೆ ಸಚಿವರಾಗಿದ್ದವರು. 2013ರ ಜನವರಿ 23ರಿಂದ ಅವರು ಬಿಜೆಪಿ ಅಧ್ಯಕ್ಷರಾಗಿದ್ದಾರೆ. 2004ರಲ್ಲಿಯೂ ಅವರು ಬಿಜೆಪಿಯ ಅಧ್ಯಕ್ಷರಾಗಿದ್ದರು. 1991ರಲ್ಲಿ ಉತ್ತರ ಪ್ರದೇಶ ಶಿಕ್ಷಣ ಸಚಿವರಾಗಿ ನಕಲು ತಡೆ ಕಾಯ್ದೆ ಜಾರಿಗೆ ತಂದವರು. 1997ರಲ್ಲಿ ಬಿಜೆಪಿಯ ಉತ್ತರಪ್ರದೇಶ ಘಟಕದ ಅಧ್ಯಕ್ಷರಾಗಿದ್ದವರು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ 2000-2002ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಪಕ್ಷ ಸಂಘಟನೆಯಲ್ಲಿ ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ಅವರು ನಿಷ್ಣಾತರು.
ಅರುಣ್ ಜೇಟ್ಲಿ
ಕ್ಷೇತ್ರ: ಅಮೃತಸರ. ಚುನಾವಣೆಯಲ್ಲಿ ಸೋಲು
ವಿಶೇಷ: 1998-2004ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ, ಕಾನೂನು ಮತ್ತು ನ್ಯಾಯ ಖಾತೆಯ ಸಚಿವರಾಗಿದ್ದವರು. ರಾಜ್ಯಸಭೆಯ ಸದಸ್ಯರಾಗಿರುವ ಅವರು ಪ್ರತಿಪಕ್ಷ ನಾಯಕರೂ ಹೌದು. ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿಯಾಗಿರುವ ಜೇಟ್ಲಿ ಪ್ರಮುಖ ಕೇಸುಗಳಲ್ಲಿ ವಾದಿಸಿದ್ದವರು. ವಿದ್ಯಾರ್ಥಿ ಜೀವನದ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದವರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವೇಳೆ ವಿದ್ಯಾರ್ಥಿ ಸಂಘದ ನಾಯಕರಾಗಿದ್ದವರು. ಪಕ್ಷದಲ್ಲಿ ಉಂಟಾಗುವ ಎಂಥಾ ಬಿಕ್ಕಟ್ಟಿನ ಪರಿಸ್ಥಿತಿಯನ್ನೂ ತಂತ್ರಗಾರಿಕೆಯಿಂದ ಪರಿಹರಿಸುವ ಖ್ಯಾತಿ.
ನಿತಿನ್ ಗಡ್ಕರಿ
ಕ್ಷೇತ್ರ: ನಾಗ್ಪುರ
ವಿಶೇಷ: ಮೂಲತಃ ಕೈಗಾರಿಕೋದ್ಯಮಿ. ಬಿಜೆಪಿಯ ಮಾಜಿ ಅಧ್ಯಕ್ಷ. ಭ್ರಷ್ಟಾಚಾರ ಆರೋಪಕ್ಕೆ ಈಡಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿದ್ದಾಗ ಲೋಕೋಪಯೋಗಿ ಸಚಿವರಾಗಿದ್ದವರು. ಈ ಸಂದರ್ಭದಲ್ಲಿ ಮುಂಬೈನಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಏಕಕಾಲದಲ್ಲಿ 65 ಫ್ಲೈಓವರ್ಗಳನ್ನು ನಿರ್ಮಿಸಲು ಕ್ರಮ ಕೈಗೊಂಡು ದೇಶಾದ್ಯಂತ ಸುದ್ದಿಯಾಗಿದ್ದರು. ಹೆಗ್ಗಳಿಕೆ ಏನೆಂದರೆ ನಿಗದಿತ ಸಮಯದಲ್ಲೇ ಅದನ್ನು ಪೂರ್ತಿ ಮಾಡಿಸಿದ್ದರು. ಇದರ ಜತೆಗೆ ಮುಂಬೈ-ಪುಣೆ ನಡುವಿನ ಯಶವಂತರಾವ್ ಚವಾಣ್ ಎಕ್ಸ್ಪ್ರೆಸ್ ಹೆದ್ದಾರಿಯ ನಿರ್ಮಾಣ ಗಡ್ಕರಿ ಅವಧಿಯಲ್ಲೇ ನಡೆದಿತ್ತು. ಬಾಲ್ಯದಿಂದಲೇ ಆರ್ಎಸ್ಎಸ್ ನಂಟು. ಜತೆಗೆ ಎಬಿವಿಪಿ ಜತೆಗೆ ಗುರುತಿಸಿಕೊಂಡಿದ್ದರು.
ಸುಷ್ಮಾ ಸ್ವರಾಜ್
ಕ್ಷೇತ್ರ: ವಿದಿಶಾ (ಮಧ್ಯಪ್ರದೇಶ)
ವಿಶೇಷ: ಹದಿನೈದನೇ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕಿಯಾಗಿದ್ದವರು. 1998ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದವರು. ಆದರೆ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. 1999ರ ಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ನಿಂತು ಸೋತಿದ್ದರು. ಎನ್ಡಿಎ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು. ಪ್ರಖರ ವಾಗ್ಮಿಯಾಗಿರುವ ಅವರು ದೆಹಲಿ ರಾಜಕೀಯ ಒಳಸುಳಿಗಳ ಸೂಕ್ಷ್ಮತೆಯನ್ನು ಅರಿತುಕೊಂಡವರು. ಬಿಜೆಪಿಯ ಹಿರಿಯ ನಾಯಕ ಆಡ್ವಾಣಿಯವರನ್ನು ತಮ್ಮ ಪ್ರೋತ್ಸಾಹಕ ಎಂದು ಬಿಂಬಿಸಿಕೊಂಡವರು.
ವೆಂಕಯ್ಯ ನಾಯ್ಡು
ರಾಜ್ಯಸಭೆ ಸದಸ್ಯ
ವಿಶೇಷ: ಆಂಧ್ರಪ್ರದೇಶದ ನೆಲ್ಲೂರು ಮೂಲದವರಾಗಿರುವ ಅವರು ಸದ್ಯ ಕರ್ನಾಟಕದಿಂದ ರಾಜ್ಯಸಭೆ ಸದಸ್ಯ. 2002-2004ರ ಅವಧಿಯಲ್ಲಿ ಬಿಜೆಪಿಯ ಅಧ್ಯಕ್ಷರಾಗಿದ್ದವರು. ವಾಜಪೇಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದವರು. ಬಾಲ್ಯದಿಂದಲೇ ಆರ್ಎಸ್ಎಸ್ ಜತೆ ಒಡನಾಟ ರೂಢಿಸಿಕೊಂಡವರು. 1973-74ರಲ್ಲಿ ಆಂಧ್ರ ವಿವಿ ಕಾಲೇಜುಗಳ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿದ್ದವರು. ಎರಡು ಬಾರಿ ಹಿಂದಿನ ಆಂಧ್ರಪ್ರದೇಶದ ಉದಯಗಿರಿ ಕ್ಷೇತ್ರದಿಂದ ಶಾಸಕರಾಗಿದ್ದವರು. ಚತುರ ಮಾತುಗಾರನಾಗಿರುವ ವೆಂಕಯ್ಯ ನಾಯ್ಡು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಕೆಲವೊಂದು ಬಾರಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಈಗ ಮೋದಿ ಸಂಪುಟದಲ್ಲಿ ಸಚಿವರಾಗುತ್ತಿದ್ದಾರೆ.
ಡಿ.ವಿ. ಸದಾನಂದಗೌಡ
ಕ್ಷೇತ್ರ: ಬೆಂಗಳೂರು ಉತ್ತರ
ವಿಶೇಷ: ಹೆಸರೇ ಹೇಳುವಂತೆ ಸದಾ ನಗುತ್ತಲೇ ಇರುವವರು. ಮೃದು ಸ್ವಭಾವ, ಬಿಕ್ಕಟ್ಟು ನಿರ್ವಹಿಸುವಲ್ಲಿ
ಚತುರ. ವಿದ್ಯಾರ್ಥಿ ಜೀವನದಲ್ಲೇ ರಾಜಕೀಯದತ್ತ ಆಸಕ್ತಿ. ಕರ್ನಾಟಕದ ಸಹಕಾರ, ಕಾರ್ಮಿಕ ಚಳವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಕ್ಕಿಳಿದಾಗ ಕರ್ನಾಟಕದ ಮುಖ್ಯಮಂತ್ರಿ ಗದ್ದುಗೆಯೇರಿದವರು. ಅಲ್ಪಾವಧಿ ಆಡಳಿತ ನಡೆಸಿದರೂ, 'ಸಕಾಲ'ದಂತಹ ಜನಪ್ರಿಯ ಯೋಜನೆ ಜಾರಿಗೊಳಿಸಿದರು. ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಣೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಉಮಾಭಾರತಿ
ಕ್ಷೇತ್ರ: ಉತ್ತರಪ್ರದೇಶದ ಝಾನ್ಸಿ
ವಿಶೇಷ: 'ಸಾಧ್ವಿ'ಯಾಗಿದ್ದರೂ ಬೆಂಕಿಯುಂಡೆ. ಬಿಜೆಪಿಯ 'ಫೈರ್ ಬ್ರ್ಯಾಂಡ್' ಎಂದೇ ಪ್ರಸಿದ್ಧಿ. ಬಾಲ್ಯದಿಂದಲೇ ಪಕ್ಷದೊಂದಿಗೆ ನಂಟು. ವಾಜಪೇಯಿ ಆಡಳಿತಾವಧಿಯಲ್ಲಿಕೇಂದ್ರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿಯೂ ಸೇವೆ. ಒಂದು ಕಾಲದಲ್ಲಿ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ 'ಭಾರತೀಯ ಜನಶಕ್ತಿ ಪಕ್ಷ' ಸ್ಥಾಪನೆ. 2011ರಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆ. ರಾಮಜನ್ಮಭೂಮಿ ಚಳವಳಿಯಲ್ಲಿ ಪಾಲ್ಗೊಂಡ ಪ್ರಮುಖ ನಾಯಕರಲ್ಲಿ ಇವರೂ ಒಬ್ಬರು. ಈ ಬಾರಿ ಉತ್ತರಪ್ರದೇಶದ ಝಾನ್ಸಿಯಿಂದ ಕಣಕ್ಕಳಿದು ಜಯಗಳಿಸಿದ್ದಾರೆ.
ನಜ್ಮಾ ಹೆಫ್ತುಲ್ಲಾ
ಕ್ಷೇತ್ರ: ಮಧ್ಯಪ್ರದೇಶ(ರಾಜ್ಯಸಭೆ)
ಕಾಂಗ್ರೆಸ್ನಲ್ಲಿ ಬೆಳೆದು ಬಿಜೆಪಿಯಲ್ಲಿ ನೆಲೆ ಕಂಡುಕೊಂಡವರು. ಬಿಜೆಪಿಯಲ್ಲಿರುವ ಕೆಲವೇ ಮುಸ್ಲಿಮರ ಪೈಕಿ ಪ್ರಭಾವಿ ಮಹಿಳೆ. ಒಮ್ಮಿಂದೊಮ್ಮೆಲೇ ರಾಜಕೀಯದಲ್ಲಿ ಮೇಲೆ ಬಂದವರಲ್ಲ. 4 ಬಾರಿ ರಾಜ್ಯಸಭೆಗೆ ಆಯ್ಕೆ. ಬಿಜೆಪಿ ಉಪಾಧ್ಯಕ್ಷೆಯಾಗಿ ಸೇವೆ. 2007ರಲ್ಲಿ ಹಮೀದ್ ಅನ್ಸಾರಿ ವಿರುದ್ಧ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡವರು. ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಹೋರಾಡಿದವರು. ಮಹಿಳೆಯರ ಸ್ಥಿತಿಗತಿ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಗೆ ತೆರಳಿದ್ದ ಮಹಿಳಾ ನಿಯೋಗದ ನೇತೃತ್ವ ವಹಿಸಿದವರು.
ಗೋಪಿನಾಥ್ ಮುಂಡೆ
ಕ್ಷೇತ್ರ: ಮಹಾರಾಷ್ಟ್ರದ ಭೀಡ್
ವಿಶೇಷ: ಬಿಜೆಪಿ ಹಿರಿಯ ನಾಯಕ. ಬಿಜೆಪಿ ವಿದ್ಯಾರ್ಥಿ ಘಟಕ ಎಬಿವಿಪಿ ಮೂಲಕವೇ ರಾಜಕೀಯಕ್ಕೆ ಧುಮುಕಿದವರು. ದಿ. ಪ್ರಮೋದ್ ಮಹಾಜನ್ರ ಆತ್ಮೀಯ ಗೆಳೆಯ. ತುರ್ತು ಪರಿಸ್ಥಿತಿ ವೇಳೆ ಸರ್ಕಾರದ ವಿರುದ್ಧ ತೀವ್ರ ಹೋರಾಟ, ಜೈಲುವಾಸ. 'ಆರೆಸ್ಸೆಸ್ ಶಿಕ್ಷಾ ವರ್ಗ'ವೇ ಮುಂಡೆ ಜೀವನದ ಟರ್ನಿಂಗ್ ಪಾಯಿಂಟ್. ಅಲ್ಲಿಂದ ಮತ್ತೆ ತಿರುಗಿ ನೋಡದ ಮುಂಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಬಲಿಷ್ಠ ನಾಯಕನಾಗಿ ಉದಯ. ವಿಧಾನಸಭೆಯಲ್ಲಿ ಪ್ರತಿಪಕ್ಷನಾಯಕನಾಗಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸೇವೆ. ಪ್ರಮೋದ್ ಮಹಾಜನ್ ಜತೆ ಸೇರಿ ಮಹಾರಾಷ್ಟ್ರದಲ್ಲಿ ಬೇರುಮಟ್ಟದಲ್ಲಿ ಬಿಜೆಪಿಯನ್ನು ಬೆಳೆಸಿದವರು.
ರಾಮ್ವಿಲಾಸ್ ಪಾಸ್ವಾನ್
ಕ್ಷೇತ್ರ: ಹಜೀಪುರ
ವಿಶೇಷ: ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ. ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ ಮೂಲಕ ರಾಜಕೀಯ ಪ್ರವೇಶ. 8 ಬಾರಿ ಲೋಕಸಭೆ ಸದಸ್ಯನಾಗಿ ಅನುಭವ. 1975ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ 2 ವರ್ಷ ಜೈಲುವಾಸ. 2000ದಲ್ಲಿ ಜೆಡಿಯುನಿಂದ ಹೊರಬಂದು ಎಲ್ಜೆಪಿ ಸ್ಥಾಪನೆ. ರಾಜ್ಯಸಭೆ ಮಾಜಿ ಸದಸ್ಯ. ಯುಪಿಎ ಜತೆ ಕೈಜೋಡಿಸಿ ಕೇಂದ್ರ ಸಚಿವ ಸ್ಥಾನ ಪಡೆದವರು. ಕಾರ್ಮಿಕ, ರೇಲ್ವೆ, ಸಂವಹನ, ಕಲ್ಲಿದ್ದಲು ಸಚಿವರಾಗಿ ಅನುಭವ. ಅತ್ಯಧಿಕ ಮತಗಳ ಅಂತರದಿಂದ ಗೆದ್ದು ವಿಶ್ವದಾಖಲೆ ಮಾಡಿದವರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿ, ಹಜೀಪುರ ಕ್ಷೇತ್ರದಿಂದ ಗೆದ್ದಿದ್ದಾರೆ.
ಕಲ್ರಾಜ್ ಮಿಶ್ರಾ
ದೇವರಿಯಾ (ಉತ್ತರ ಪ್ರದೇಶ), ಬಿಜೆಪಿ
ಹಿಂದಿನ ಎನ್ಡಿಎ ಸರ್ಕಾರದಲ್ಲಿ ಇವರು ಭಾಗಿಯಾಗಿರಲಿಲ್ಲ. ಉತ್ತರ ಪ್ರದೇಶದ ಘಾಸಿಯಾಪುರ್ ಮೂಲದವರಾದ ಇವರು, ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಆಗಿ ಸೇವೆ ಸಲ್ಲಿಸಿದ್ದಾರೆ. 1997ರಿಂದ 2000ರ ಅವಧಿಯಲ್ಲಿ ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು, ಲೋಕೋಪಯೋಗಿ ಇಲಾಖೆ, ವೈದ್ಯಕೀಯ ಶಿಕ್ಷಣ ಹಾಗೂ ಪ್ರವಾಸೋದ್ಯಮದಂಥ ದೊಡ್ಡ ಇಲಾಖೆಗಳನ್ನು ನಿರ್ವಹಿಸಿದ ಅನುಭವ ಗಳಿಸಿದ್ದಾರೆ. ಆನಂತರ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದ ಅವರು, ರಾಜ್ಯಸಭಾ ಸದಸ್ಯರೂ ಆಗಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಲಖನೌ ಶಾಸಕರಾಗಿದ್ದ ಅವರು, ಇದೀಗ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಮನೇಕಾ ಗಾಂಧಿ
ಪಿಲಿಭಿತ್ (ಉತ್ತರಪ್ರದೇಶ), ಬಿಜೆಪಿ
ನೆಹರೂ-ಗಾಂಧಿ ಕುಟುಂಬ ಸದಸ್ಯರಾದ ಇವರು ಕಳೆದ ಎನ್ಡಿಎ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ, ಸಂಸ್ಕೃತಿ ಇಲಾಖೆ, ಯೋಜನಾ ಅನುಷ್ಠಾನ ಹಾಗೂ ಸಾಂಖ್ಯಿಕ ಇಲಾಖೆಗಳ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಸ್ಥಾಪನೆಗೊಂಡ ಪಶುಸಂಗೋಪನಾ ಇಲಾಖೆಯನ್ನು ಕಟ್ಟುವಲ್ಲಿ ಶ್ರಮಿಸಿದವರಲ್ಲೊಬ್ಬರು. ಆರು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಮನೇಕಾ ಗಾಂಧಿ, ದೇಶದ ಹಿರಿಯ ಸಂಸದರಲ್ಲೊಬ್ಬರು. ಹಿಂದಿನ ಲೋಕಸಭೆಯ ಅವಧಿಯಲ್ಲಿ ಸರ್ಕಾರಿ ಆಶ್ವಾಸನೆಗಳ ಸಂಸದೀಯ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಕಳೆದ ಬಾರಿ ಸುಲ್ತಾನ್ಪುರದಿಂದ ಆಯ್ಕೆಯಾಗಿದ್ದ ಅವರು, ಈ ಬಾರಿ ಪಿಲಿಭಿತ್ನಿಂದ ಆಯ್ಕೆಯಾಗಿದ್ದಾರೆ.
ಅನಂತಕುಮಾರ್
ಬೆಂಗಳೂರು ದಕ್ಷಿಣ, ಬಿಜೆಪಿ
ಟೆಕಿ ಲೋಕದ ದಿಗ್ಗಜ, ಕಾಂಗ್ರೆಸ್ನ ನಂದನ್ ನಿಲೇಕಣಿ ಅವರನ್ನು ಸೋಲಿಸಿ, ಲೋಕಸಭೆಗೆ ಆಯ್ಕೆಯಾಗಿರುವ ಅನಂತ್, ಹಿಂದಿನ ಎನ್ಡಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಖಾತೆ ನಿರ್ವಹಿಸಿದ್ದಾರೆ. ಇದಲ್ಲದೇ, ಪ್ರವಾಸೋದ್ಯಮ, ಕ್ರೀಡೆ ಹಾಗೂ ಯುವಜನ, ಸಂಸ್ಕೃತಿ, ನಗರಾಭಿವೃದ್ಧಿ ಇಲಾಖೆಗಳನ್ನು ನಿರ್ವಹಿಸಿದ ಅನುಭವವೂ ಇದೆ. ರಾಷ್ಟ್ರಮಟ್ಟದ ಹಿರಿಯ ಬಿಜೆಪಿ ನಾಯಕರಲ್ಲಿ ಅನಂತ್ ಪ್ರಮುಖರು. 2003ರಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. 2004ರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 1996ರಲ್ಲಿ ಪ್ರಪ್ರಥಮ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಇವರು, ಈವರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸಿದ್ದಾರೆ.
ರವಿಶಂಕರ್ ಪ್ರಸಾದ್
ರಾಜ್ಯಸಭೆ ಸದಸ್ಯ, ಬಿಜೆಪಿ
ಮೂಲತಃ ಬಿಹಾರದ ಬಿಜೆಪಿ ನಾಯಕರಾಗಿರುವ ಇವರು, ಸುಪ್ರೀಂ ಕೋರ್ಟ್ನ ವಕೀಲರೂ ಹೌದು. ಬಿಜೆಪಿಯಲ್ಲಿನ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರಾಗಿರುವ ಇವರು, ಹಾಲಿ ರಾಜ್ಯಸಭೆಯ ಪ್ರತಿಪಕ್ಷ ಉಪನಾಯಕರಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಈಗ ಇವರದ್ದು ಮೂರನೇ ಅವಧಿ. ಹಿಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಗಣಿ ಮತ್ತು ಕಲ್ಲಿದ್ದಲು, ಮಾಹಿತಿ ಹಾಗೂ ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರರೂ ಆಗಿರುವ ಇವರು, ಹಿಂದೆ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾಗಿದ್ದಾಗ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದ ಹಿರಿಮೆ ಹೊಂದಿದ್ದಾರೆ.
ಅಶೋಕ ಗಣಪತಿ ರಾಜು
ವಿಜಯನಗರ, ತೆಲುಗುದೇಶಂ
ಸತತ ಆರನೇ ಬಾರಿಗೆ ಸಂಸತ್ ಪ್ರವೇಶಿಸಿರುವ ಇವರು, ತೆಲುಗುದೇಶಂ (ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು ಅವರ ಆಪ್ತರು. 1978ರಲ್ಲಿ ಜನತಾಪಕ್ಷದ ಮೂಲಕ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, 1983, 1985, 1989, 1999 ಹಾಗೂ 2009ರಲ್ಲಿ ಗೆಲವು ಸಾಧಿಸಿದ್ದರು. ಈ ಹಿಂದೆ, ಎನ್.ಟಿ. ರಾಮರಾವ್ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು, ಅಬಕಾರಿ, ವಾಣಿಜ್ಯ ತೆರಿಗೆಯಂಥ ಮಹತ್ತರ ಖಾತೆಗಳನ್ನು ನಿರ್ವಹಿಸಿದ್ದರು. ಆನಂತರ, ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರದಲ್ಲಿ ಹಣಕಾಸು, ಶಾಸಕಾಂಗ ವ್ಯವಹಾರ ಹಾಗೂ ಕಂದಾಯ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಅನಂತ ಗಂಗಾರಾಮ್ ಗಿತೆ
ಕ್ಷೇತ್ರ: ರಾಯಗಡ (ಮಹಾರಾಷ್ಟ್ರ), ಶಿವಸೇನೆ
ಶಿವಸೇನೆಯ ಹಳೆ ಹುಲಿ. ಕೇಂದ್ರದ ಮಾಜಿ ಸಚಿವ (2002-04). ಮುಂಬೈ ಮುನ್ಸಿಪಲ್ ಕೌನ್ಸಿಲ್ ಸದಸ್ಯನಾಗಿ ರಾಜಕೀಯ ಆರಂಭ. 1996ರಲ್ಲಿ ರತ್ನಗಿರಿ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ, ಶಿವಸೇನೆ ಮುಖ್ಯ ಸಚೇತಕ ಹುದ್ದೆ. ಮುಂದಿನ ಮೂರು ಚುನಾವಣೆಗಳಲ್ಲೂ ಅದೇ ಕ್ಷೇತ್ರದಿಂದ ಆಯ್ಕೆ. 2009ರಲ್ಲಿ ರಾಯಗಡದಲ್ಲಿ ಹಾಲಿ ಸಂಸದರಾಗಿದ್ದ ಎ.ಆರ್.ಅಂತುಳೆ ವಿರುದ್ಧ ಗೆಲವು. ಈ ಬಾರಿ ಅದೇ ಕ್ಷೇತ್ರದಿಂದ ಪುನರಾಯ್ಕೆ, ೆಲೋಕಸಭೆಯಲ್ಲಿ ಶಿವಸೇನೆ ಸಂಸದೀಯ ಪಕ್ಷದ ನಾಯಕ. ವಾಜಪೇಯಿ ಸಂಪುಟದಲ್ಲಿ ಹಣಕಾಸು, ಬ್ಯಾಂಕಿಂಗ್ ಮತ್ತು ವೆಚ್ಚ ಖಾತೆ ರಾಜ್ಯ ಸಚಿವರಾಗಿ ಅನುಭವ.
ಹರ್ಸಿಮ್ರತ್ ಕೌರ್ ಬಾದಲೆ
ಕ್ಷೇತ್ರ: ಬಠಿಂಡಾ, ಶಿರೋಮಣಿ ಅಕಾಲಿದಳ
ರಾಜಕೀಯ ಕುಟುಂಬದ ಸದಸ್ಯೆ. ಪತಿ ಸುಖ್ಬೀರ್ ಸಿಂಗ್ ಬಾದಲ್ ಪಂಜಾಬ್ ಉಪಮುಖ್ಯಮಂತ್ರಿ, ಮಾವ ಪ್ರಕಾಶ್ ಸಿಂಗ್ ಬಾದಲ್ ಮುಖ್ಯಮಂತ್ರಿ. ಸತತ ಎರಡನೇ ಬಾರಿ ಲೋಕಸಭೆಗೆ ಆಯ್ಕೆ. ತಮ್ಮ ಆಸಕ್ತಿಯ ವಸ್ತ್ರ ವಿನ್ಯಾಸದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕೆಲಕಾಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಸಹ. 1984ರ ಸಿಖ್ ದಂಗೆ ಸಂತ್ರಸ್ತರ ಕುರಿತು 2009ರ ಡಿಸೆಂಬರ್ 3ರಂದು ಲೋಕಸಭೆಯಲ್ಲಿ ಮಾತನಾಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಪಂಜಾಬ್ನಲ್ಲಿ ಬಾಲಕಿಯರು, ಮರಗಳ ರಕ್ಷಣೆಗಾಗಿ 'ನಹಿ ಚಾನ್' (ಮುಗ್ಧ ಜೀವಗಳು) ಎಂಬ ಆಂದೋಲನವನ್ನು ಕೆಲವರ್ಷಗಳ ಹಿಂದೆ ಹುಟ್ಟುಹಾಕಿದ್ದಾರೆ.
ನರೇಂದ್ರ ಸಿಂಗ್ ತೋಮರ್
ಕ್ಷೇತ್ರ: ಗ್ವಾಲಿಯರ್ (ಮಧ್ಯಪ್ರದೇಶ), ಬಿಜೆಪಿ
ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಹಾಲಿ ಪಕ್ಷದ ರಾಜ್ಯಾಧ್ಯಕ್ಷ. ಗ್ವಾಲಿಯರ್ ಬಳಿಯ ಮೊರಾರ್ ಗ್ರಾಮದಲ್ಲಿ ಜನನ. ಜಿವಾಜಿ ವಿಶ್ವವಿದ್ಯಾಲಯದ ಪದವೀಧರ. ವೃತ್ತಿಯಲ್ಲಿ ಕೃಷಿಕ. ಲೋಕಸಭೆಯಲ್ಲಿ ಗ್ವಾಲಿಯರ್ ಕ್ಷೇತ್ರವನ್ನು ಸತತ ಎರಡನೇ ಸಲ ಪ್ರತಿನಿಧಿಸುತ್ತಿದ್ದಾರೆ. ಮುನ್ನಾ ಭಯ್ಯಾ ಇವರ ನಿಕ್ನೇಮ್. ಈ ಹೆಸರು ಇಟ್ಟವರು ಮಧ್ಯಪ್ರದೇಶ ಸಚಿವ ಬಾಬುಲಾಲ್ ಗೌರ್. ಆಡಳಿತದ ಅನುಭವದಲ್ಲೂ ಹಿರಿಯ. ಗ್ವಾಲಿಯರ್ ಮಹಾನಗರ ಪಾಲಿಕೆ ಸದಸ್ಯ, ಎರಡು ಸಲ ವಿಧಾನಸಭೆ ಸದಸ್ಯ, ಮಧ್ಯಪ್ರದೇಶ ಸಚಿವ (2003-07). 2009ರಲ್ಲಿ ಐದು ತಿಂಗಳ ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.
ಜ್ಯುಯಲ್ ಒರಾಮ್
ಕ್ಷೇತ್ರ: ಸುಂದರಗಡ (ಒಡಿಶಾ), ಬಿಜೆಪಿ
ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಒಬ್ಬರು. ಹಾಲಿ ಪಕ್ಷದ ರಾಜ್ಯಾಧ್ಯಕ್ಷ. ಗ್ವಾಲಿಯರ್ ಬಳಿಯ ಮೊರಾರ್ ಗ್ರಾಮದಲ್ಲಿ ಜನನ. ಜಿವಾಜಿ ವಿಶ್ವವಿದ್ಯಾಲಯದ ಪದವೀಧರ. ವೃತ್ತಿಯಲ್ಲಿ ಕೃಷಿಕ. ಲೋಕಸಭೆಯಲ್ಲಿ ಗ್ವಾಲಿಯರ್ ಕ್ಷೇತ್ರವನ್ನು ಸತತ ಎರಡನೇ ಸಲ ಪ್ರತಿನಿಧಿಸುತ್ತಿದ್ದಾರೆ. ಮುನ್ನಾ ಭಯ್ಯಾ ಇವರ ನಿಕ್ನೇಮ್. ಈ ಹೆಸರು ಇಟ್ಟವರು ಮಧ್ಯಪ್ರದೇಶ ಸಚಿವ ಬಾಬುಲಾಲ್ ಗೌರ್. ಆಡಳಿತದ ಅನುಭವದಲ್ಲೂ ಹಿರಿಯ. ಗ್ವಾಲಿಯರ್ ಮಹಾನಗರ ಪಾಲಿಕೆ ಸದಸ್ಯ, ಎರಡು ಸಲ ವಿಧಾನಸಭೆ ಸದಸ್ಯ, ಮಧ್ಯಪ್ರದೇಶ ಸಚಿವ (2003-07). 2009ರಲ್ಲಿ ಐದು ತಿಂಗಳ ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು.
ರಾಧಾ ಮೋಹನ್ ಸಿಂಗ್
ಕ್ಷೇತ್ರ: ಪೂರ್ವ ಚಂಪಾರಣ್ (ಬಿಹಾರ), ಬಿಜೆಪಿ
ಆರ್ಎಸ್ಎಸ್ನ ನಿಷ್ಠಾವಂತ ಕಾರ್ಯಕರ್ತ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ. ಬಳಿಕ ಎಬಿವಿಪಿ ಕಾರ್ಯಕರ್ತ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದರು. ಬಿ.ಎ ಪದವೀಧರ. ವೃತ್ತಿಯಲ್ಲಿ ಕೃಷಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ. 1989ರಲ್ಲಿ 9ನೇ ಲೋಕಸಭೆಗೆ ಆಯ್ಕೆ. ಬಳಿಕ 11, 13, 15, 16ನೇ ಲೋಕಸಭೆಗಳಿಗೂ ಆಯ್ಕೆ. ಸಂಸತ್ತಿನ ಹಲವು ಸಮಿತಿಗಳಲ್ಲಿ ಸದಸ್ಯನಾಗಿ ಸೇವೆ. ಸಂಸದರಾಗಿ ಗ್ರಾಮೀಣಾಭಿವೃದ್ಧಿ, ಪರಿಶಿಷ್ಟ ಜಾತಿ-ಪಂಗಡಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಬಿಹಾರ ಕ್ರಿಕೆಟ್ ಸಂಸ್ಥೆ ಮಾಜಿ ಉಪಾಧ್ಯಕ್ಷ ಸಹ.
ಸಂತೋಷ್ ಕುಮಾರ್ ಗಂಗ್ವಾರ್
ಬರೇಲಿ (ಉತ್ತರ ಪ್ರದೇಶ), ಬಿಜೆಪಿ
ಹಿಂದಿನ ಎನ್ಡಿಎ ಸರ್ಕಾರದಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದರೊಂದಿಗೆ ಸಂಸದೀಯ ವ್ಯವಹಾರಗಳ ಖಾತೆಯನ್ನು ಹೆಚ್ಚುವರಿಯಾಗಿ ಅವರಿಗೆ ವಹಿಸಲಾಗಿತ್ತು. 1998ರಲ್ಲಿ ಬರೇಲಿಯಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಅವರು, 2009ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು 2.40 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸಿ, ಲೋಕಸಭೆ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಘಟಕದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಪ್ರಧಾನ ಕಾರ್ಯದರ್ಶಿಯಾಗಿ 3 ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಶ್ರೀಪಾದ ನಾಯ್ಕ್
ಅಡ್ಪಾಯ್ (ಗೋವಾ ಉತ್ತರ), ಬಿಜೆಪಿ
ಅಡ್ಪಾಯ್ನಲ್ಲಿ 1952ರಲ್ಲಿ ಜನಿಸಿದ್ದ ಅವರು, 1999ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದರು. ಆನಂತರ, 2004, 2009 ಚುನಾವಣೆಗಳಲ್ಲೂ ಜಯ ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಅವರು 1 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಗೋವಾ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಫ್ರಾನ್ಸಿಸ್ ಡಿಸೋಜಾ ಅವರ ಆಪ್ತರಾಗಿರುವ ಶ್ರೀಪಾದ್ ಅವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡುವಂತೆ ಫ್ರಾನ್ಸಿಸ್ ಅವರೇ ಮೋದಿ ಅವರಲ್ಲಿ ಮನವಿ ಮಾಡಿದ್ದರೆನ್ನಲಾಗಿದೆ. ಇದಲ್ಲದೇ, ಪಣಜಿ (ಗೋವಾ ರಾಜಧಾನಿ)ಯ ಯೋಗ ಸಮಿತಿಯ ಬೆಂಬಲವೂ ಶ್ರೀಪಾದ್ ಅವರಿಗಿದ್ದು, ಗೋವಾ ಬಿಜೆಪಿಯ ಪ್ರಬಲ ಧುರೀಣ.
ಪ್ರಕಾಶ್ ಜಾವಡೇಕರ್
ರಾಜ್ಯಸಭಾ ಸದಸ್ಯ, ಬಿಜೆಪಿ
ಮಹಾರಾಷ್ಟ್ರದಿಂದ 2008ರಲ್ಲಿ ರಾಜ್ಯಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಈವರೆಗೂ ಅವರು ಅದೇ ಸ್ಥಾನದಲ್ಲೇ ಮುಂದುವರಿದಿದ್ದು, ಬಿಜೆಪಿಯ ರಾಷ್ಟ್ರಮಟ್ಟದ ನಾಯಕರಲ್ಲಿ ಗುರುತಿಸಿಕೊಂಡವರು. ಬಿಜೆಪಿಯ ಅಧಿಕೃತ ವಕ್ತಾರರೂ ಆಗಿರುವ ಅವರು, ವಿದ್ಯಾರ್ಥಿ ಜೀವನದಲ್ಲೇ ಹೊಂದಿದ್ದ ಎಬಿವಿಪಿ ಸಖ್ಯದೊಂದಿಗೆ ಬಿಜೆಪಿಗೆ ಕಾಲಿಟ್ಟಿದ್ದರು. ಪ್ರಕಾಶ್ ಅವರ ತಂದೆ ಕೇಶವ ಕೃಷ್ಣ ಜಾವಡೇಕರ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಸ್ನೇಹಿತ ಹಾಗೂ ಪರಿಚಾರಕ. ಹಿಂದೂ ಮಹಾಸಭಾದ ಪುಣೆ ಘಟಕದ ನಾಯಕರಾಗಿದ್ದವರು. ಅದೇ ಜಾಡಿನಲ್ಲೇ ಬೆಳೆದ ಪ್ರಕಾಶ್ ಜಾವಡೇಕರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಧರ್ಮೇಂದ್ರ ಪ್ರಧಾನ್
ರಾಜ್ಯಸಭಾ ಸದಸ್ಯ, ಬಿಜೆಪಿ
ಬಿಹಾರ ರಾಜ್ಯದ ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್, 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 14ನೇ ಲೋಕಸಭೆ ಚುನಾವಣೆಯಲ್ಲಿ ಅವರು ಒಡಿಶಾದ ದೇವಗಡ ಕ್ಷೇತ್ರದಿಂದ ಗೆಲವು ಪಡೆದು ಲೋಕಸಭೆ ಪ್ರವೇಶಿಸಿದ್ದರು. ಆರ್ಎಸ್ಎಸ್ ಮೂಲದ ಅವರು ಆನಂತರ ಬಿಜೆಪಿಗೆ ಪ್ರವೇಶ ಪಡೆದಿದ್ದರು. ಇವರ ತಂದೆ ಡಾ. ದೇಬೇಂದ್ರ ಪ್ರಧಾನ್ ಅವರೂ ಬಿಜೆಪಿ ಸಂಸದರಾಗಿದ್ದರು. 2011ರಲ್ಲಿ ಪಕ್ಷದ ಮಹಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಅವರು, ಅದೇ ಸಂದರ್ಭದಲ್ಲಿ ಜಾರ್ಖಂಡ್ ರಾಜ್ಯ ಬಿಜೆಪಿ ಉಸ್ತುವಾರಿಯನ್ನೂ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದರು. ಉತ್ತಮ ಸಂಘಟಕರಾಗಿರುವ ಅವರು, ಸಚಿವರಾಗುವ ಅವಕಾಶ ಪಡೆಯುತ್ತಿರುವುದು ಇದೇ ಮೊದಲು.
ಸರ್ಬಾನಂದ ಸೋನೊವಾಲ್
ಲಖೀಂಪುರ್ (ಅಸ್ಸಾಂ), ಬಿಜೆಪಿ
1992ರಿಂದ 1999ರವರೆಗೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ನ ಅಧ್ಯಕ್ಷರಾಗಿದ್ದ ಇವರು, 2004ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. 2011ರವರೆಗೆ ಅವರು ಅಸ್ಸಾಂ ಗಣ ಪರಿಷತ್ನ ಸದಸ್ಯರಾಗಿದ್ದರು. ಆನಂತರ ಬಿಜೆಪಿಗೆ ಸೇರ್ಪಡೆಗೊಂಡ ಅವರು, ಲಖೀಂಪುರ್ ಕ್ಷೇತ್ರದಿಂದ ಸಂಸದರಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಅಸ್ಸಾಂನೊಳಕ್ಕೆ ಬರುತ್ತಿದ್ದ ಬಾಂಗ್ಲಾದೇಶಿ ಪ್ರಜೆಗಳನ್ನು ನಿರ್ಬಂಧಿಸುವ ಸಲುವಾಗಿ ಜಾರಿಗೊಂಡ 'ಅಕ್ರಮ ವಲಸಿಗರ ಗುರುತುಪತ್ತೆ ನ್ಯಾಯಾಧಿಕರಣ (ಐಎಂಡಿಟಿ)'ವನ್ನು ಜಾರಿಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಪಿಯೂಶ್ ಗೋಯೆಲ್
ರಾಜ್ಯಸಭಾ ಸದಸ್ಯ, ಬಿಜೆಪಿ
ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿರುವ ಪಿಯೂಶ್ ಗೋಯೆಲ್, ಕಳೆದ 20 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಬಿಜೆಪಿಯ ಮಾಹಿತಿ ಸಂವಹನ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಲೋಕಸಭೆಯ ಅವಧಿಯಲ್ಲಿ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಸದಸ್ಯರಾಗಿದ್ದ ಅವರು, ರಕ್ಷಣಾ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗಿನ ರಾಜಕೀಯ ಜೀವನದಲ್ಲಿ ಅವರು ಬಿಜೆಪಿ ಪಕ್ಷದೊಳಗೆ ಹಲವಾರು ಮಹತ್ತರ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನದಿ ಜೋಡಣೆ ಟಾಸ್ಕ್ ಫೋರ್ಸ್ಗೆ ಸದಸ್ಯರನ್ನಾಗಿಸಿ ಇವರನ್ನು ಅಂದಿನ ಎನ್ಡಿಎ ಸರ್ಕಾರ ನಾಮನಿರ್ದೇಶನ ಮಾಡಿತ್ತು.
ಡಾ. ಜಿತೇಂದ್ರಸಿಂಗ್
ಉಧಾಂಪುರ್ (ಜಮ್ಮು- ಕಾಶ್ಮೀರ), ಬಿಜೆಪಿ
ಮಧುಮೇಹ ತಜ್ಞರಾದ ಇವರು, ಈ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮಧುಮೇಹ ಹಾಗೂ ನಿಸ್ತಂತು ಶಾಸ್ತ್ರದ ಚಿಕಿತ್ಸಾಲಯ ಹೊಂದಿದ್ದಾರೆ. ಉತ್ತಮ ಲೇಖಕರಾಗಿಯೂ ಹೆಸರು ಪಡೆದಿರುವ ಅವರು, ಆರೋಗ್ಯ ವಿಚಾರಗಳನ್ನಾಧರಿಸಿ ಈವರೆಗೆ 8 ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ಬಿಜೆಪಿಯೊಂದಿಗೆ ಒಡನಾಟ ಹೊಂದಿರುವ ಅವರು, ಹಾಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಹೌದು. ಅಲ್ಲದೇ, ಜಮ್ಮು ಕಾಶ್ಮೀರ ಬಿಜೆಪಿ ಘಟಕದ ವಕ್ತಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಶ್ಮೀರದಿಂದ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್
ಬಿಜೆಪಿ ವಕ್ತಾರೆ
ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಮಾಡಿದ ಇವರು ಕೆಲವು ಕಾಲ ಬಿಬಿಸಿ ವರ್ಲ್ಡ್ನಲ್ಲಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಪ್ರೈಸ್ವಾಟರ್ಹೌಸ್ ಕೂಪರ್ಸ್ ಎಂಬ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಇವರು ರಾಜಕಾರಣಿ, ರಾಜಕೀಯ ವಿಶ್ಲೇಷಕ, ಟಿವಿ ನಿರೂಪಕರಾಗಿರುವ ಡಾ. ಪರಾಕಲ ಪ್ರಭಾಕರ್ ಎಂಬುವರನ್ನು ವಿವಾಹವಾಗಿದ್ದಾರೆ. ನಿರ್ಮಲಾ ಉತ್ತಮ ವಾಗ್ಮಿಯಾಗಿದ್ದು, ಎದುರಾಳಿಗಳನ್ನು ಮಾತಿನ ಮೊನಚಿನಲ್ಲೇ ಚುಚ್ಚಬಲ್ಲರು. ಮಹಿಳೆಯಾಗಿದ್ದರೂ ಯಾರಿಗೂ ಕಮ್ಮಿ ಇಲ್ಲದಂತೆ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿಕೊಂಡು ಬಂದಿದ್ದಾರೆ.
ಸಂಜೀವ್ ಬಲಿಯಾನ್
ಮುಜಫ್ಫರ್ನಗರ್, ಉತ್ತರಪ್ರದೇಶ, ಬಿಜೆಪಿ
ಜಾಟ್ ಸಮುದಾಯದ ಈ ನಾಯಕ ಮುಜಫ್ಫರ್ನಗರ ಗಲಭೆಯಲ್ಲಿ ಆರೋಪಗಳನ್ನು ಎದುರಿಸಿದರೂ, ಮುಸ್ಲಿಂ ಮತ್ತು ಜಾಟ್ ಸಂತ್ರಸ್ತರಿಗೆ ಸೂರು ಒದಗಿಸಿ ಜನಮನ್ನಣೆ ಗಳಿಸಿದರು. ದುಲ್ಹೆರಾ ಗ್ರಾಮದ ಪ್ರಧಾನ್ ಆಗಿದ್ದ ಸಂಜೀವ್ ಮುಜಫ್ಫರ್ನಗರದಲ್ಲಿನ ಸಮಾಜವಾದಿ ಪಕ್ಷದ 10 ವರ್ಷಗಳ ಅಧಿಪತ್ಯವನ್ನು ಕೊನೆಗೊಳಿಸಿ 4 ಲಕ್ಷಕ್ಕೂ ಹೆಚ್ಚಿನ ಮತ ಪಡೆದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆಶ್ಚರ್ಯವೆಂದರೆ ಈ ಬಾರಿ ಮುಸ್ಲಿಂ ಮತ್ತು ಜಾಟ್ಮತಗಳೆರಡೂ ಇವರ ತೆಕ್ಕೆಗೆ ಹೋಗಿವೆ ಎನ್ನಲಾಗುತ್ತಿದೆ. ಉತ್ತರಪ್ರದೇ
ಮನ್ಸುಖ್ಭಾಯ್
ಭರೂಚ್, ಗುಜರಾತ್, ಬಿಜೆಪಿ
ಗುಜರಾತ್ನ 56 ವರ್ಷದ ಮನ್ಸುಖ್ ಭಾಯ್ ವಾಸ್ವಾ, ನರೇಂದ್ರ ಮೋದಿ ನಂತರ ಹೊಸ ಸರ್ಕಾರದಲ್ಲಿರುವ ಗುಜರಾತ್ನ ಮತ್ತೊಬ್ಬ ಸಂಸದ. ಭರೂಚ್ ಕ್ಷೇತ್ರದಿಂದ ಆಯ್ಕೆಯಾಗಿರುವ ಇವರು ಮೋದಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. 2012ರಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರಬಂಡವಾಳ ಹೂಡಿಕೆಯನ್ನು ವಿರೋಧಿಸಿ ಸುಷ್ಮಾ ಸ್ವರಾಜ್ ಅವರು ಸಲ್ಲಿಸಿದ್ದ ಮಂಡನೆಗೆ ಸಹಿ ಹಾಕದೇ ಸುದ್ದಿಯಾಗಿದ್ದರು.
ದಾದಾರಾವ್ ದಾನ್ವೆ
ಜಲ್ನಾ, ಮಹಾರಾಷ್ಟ್ರ, ಬಿಜೆಪಿ
ಮಹಾರಾಷ್ಟ್ರದ 59 ವರ್ಷದ ಈ ನಾಯಕ ಮರಾಠವಾಡದ ಜಲ್ನಾ ಕ್ಷೇತ್ರದಿಂದ 4ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ಪ್ರಬಲ ಮರಾಠ ಸಮುದಾಯಕ್ಕೆ ಸೇರಿದ ದಾನ್ವೆ, ಗೋಪಿನಾಥ್ ಮುಂಡೆಯವರನಿಷ್ಠಾವಂತ ಅನುಯಾಯಿಯೂ ಹೌದು. ಈ ಬಾರಿಯ ಚುನಾವಣೆಯಲ್ಲಿ ದಾನ್ವೆ 591428 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ವಿಲಾಸ್ ಕೇಶವರಾವ್ ಅವರನ್ನು 20,6798 ಮತಗಳ ಅಂತರದಿಂದ ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ.
ಸುದರ್ಶನ್ ಭಗತ್
ಲೋಹರ್ದಾಗಾ, ಜಾರ್ಖಂಡ್, ಬಿಜೆಪಿ
ಜಾರ್ಖಂಡ್ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಹರ್ದಾಗಾ ಕ್ಷೇತ್ರವೂ ಒಂದು. ಪರಿಶಿಷ್ಟ ಪಂಗಡದ ನಾಯಕರಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಸತತ ಎರಡನೆಯ ಬಾರಿಗೆ 49 ವರ್ಷದ ಸುದರ್ಶನ್ ಭಗತ್ ಕಾಂಗ್ರೆಸ್ನ ರಾಮೇಶ್ವರ್ ಓರೋವೋನ್ ಎದುರ ಗೆಲುವು ಸಾಧಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಬಿಹಾರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹೆಸರು ಗಳಿಸಿದ ಸುದರ್ಶನ್, ಜಾರ್ಖಂಡ್ ಮುಕ್ತಿ ಮೋರ್ಚಾದ ಸದ್ಯರಾಗಿಯೂ ದುಡಿದವರು.
ವಿಷ್ಣುದೇವ್ ಸಹಾಯ್
ರಾಯ್ಗಢ, ಛತ್ತೀಸ್ಗಢ, ಬಿಜೆಪಿ
'ರಾಯಗಢದ ರಾಜನೆಂದೇ' ಸ್ಥಳೀಯರಿಂದ ಕರೆಸಿಕೊಳ್ಳುವ ವಿಷ್ಣುದೇವ ಸಹಾಯ, ಸತತ 4ನೇ ಬಾರಿಗೆ ಆ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಸಹಾಯ್ ಸುಮಾರು 6 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, 2004ರ ಲೋಕಸಭಾ ಚುನಾವಣೆಯಲ್ಲಿ 20 ಸಾವಿರ ಅಂತರದಿಂದ ಮತ್ತು 2009ರಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಈ ಬಾರಿ ತಮ್ಮ ಹಿಂದಿನ ಎಲ್ಲಾ ರೆಕಾರ್ಡ್ಗಳನ್ನು ಮುರಿದು ಕಾಂಗ್ರೆಸ್ನ ಅಭ್ಯರ್ಥಿ ಆರತಿ ಸಿಂಹ ಅವರನ್ನು 2 ಲಕ್ಷ, 16 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಜಿ.ಎಂ. ಸಿದ್ದೇಶ್ವರ್
ದಾವಣಗೆರೆ (ಕರ್ನಾಟಕ), ಬಿಜೆಪಿ
ವಿಶೇಷ: ಇವರು ದಾವಣಗೆರೆ ಲೋಕಸಭೆ ಕ್ಷೇತ್ರದ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕ. ಸ್ವತಃ ಉದ್ಯಮಿ ಮತ್ತು ಕೃಷಿಕರಾಗಿರುವ ಇವರು, ಉತ್ತಮ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದಾರೆ. 15ನೇ ಲೋಕಸಭೆ ಸಂಸದರ ಸಾಧನೆಯಲ್ಲಿ ಇವರದ್ದು 2ನೇ ಸ್ಥಾನ! ಸಂಸತ್ನಲ್ಲಿ ಹಾಗೂ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ವಿವಿಧ ಅಧ್ಯಯನ ಸಂಸ್ಥೆಗಳು ಈ ವರದಿ ನೀಡಿವೆ. ಇವರು 2004ರಲ್ಲಿ ನಡೆದ 14ನೇ ಲೋಕಸಭಾ ಚುನಾವಣೆಯಲ್ಲಿ ಸಂಸತ್ ಪ್ರವೇಶಿಸಿದ್ದರು. ಈ ಮೊದಲು ದಾವಣಗೆರೆ ಕ್ಷೇತ್ರದಿಂದ ಅವರ ತಂದೆ ಜಿ. ಮಲ್ಲಿಕಾರ್ಜುನಪ್ಪ ಆಯ್ಕೆಯಾಗಿದ್ದರು. ಸಿದ್ದೇಶ್ವರ್ 2009-10ರಲ್ಲಿ ರಾಜ್ಯದಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2004ರಿಂದ ಸತತವಾಗಿ 3ನೇ ಭಾರಿ ಸಂಸತ್ ಪ್ರವೇಶಿಸಿದ್ದಾರೆ.
ಮನೋಜ್ ಸಿನ್ಹಾ
ಘಾಸಿಪುರ್ (ಉತ್ತರ ಪ್ರದೇಶ), ಬಿಜೆಪಿ
ವಿಶೇಷ: ವಾರಾಣಸಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. 1989ರಿಂದ 1996ರವರೆಗೆ ರಾಷ್ಟ್ರೀಯ ಮಂಡಳಿಯಲ್ಲಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಸಂಸತ್ ಪ್ರವೇಶ ಪಡೆದರು. ಇವರು ವಿದ್ಯಾಭ್ಯಾಸದ ಅವಧಿಯಲ್ಲೇ ರಾಜಕೀಯದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದರು. ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ 1983ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದರು.
ಉಪೇಂದ್ರ ಕುಶ್ವಾಹ
ರಾಜ್ಯಸಭೆ ಮಾಜಿ ಸದಸ್ಯ
ವಿಶೇಷ: ಇವರು 1985ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಆಗಲೇ (1985-88) ಯುವ ಲೋಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರದ (1988-93) ಅವಧಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿ ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಪಡೆದರು. 2002-2004ರಲ್ಲಿ ಬಿಹಾರ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಅಂದರೆ 2013ರಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು ಹುಟ್ಟುಹಾಕಿದರು.
ಪಿ. ರಾಧಾಕೃಷ್ಣನ್
ಕನ್ಯಾಕುಮಾರಿ (ತಮಿಳುನಾಡು), ಬಿಜೆಪಿ
ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿರುವ ಇವರು ಪ್ರಸ್ತುತ ಅಲ್ಲಿನ ರಾಜ್ಯಾಧ್ಯಕ್ಷರಾಗಿದ್ದಾರೆ. 2009ರಲ್ಲಿ ಕನ್ಯಾಕುಮಾರಿ ಹಾಗೂ 2011ರಲ್ಲಿ ನಾಗರ್ಕೋಯಿಲ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಆದರೆ ಇದೀಗ 2014ರ ಚುನಾವಣೆಯಲ್ಲಿ ಮೋದಿ ಅಲೆಯ ಲಾಭ ಪಡೆದು ಭರ್ಜರಿ ಮತ ಪಡೆದು ಸಂಸತ್ ಪ್ರವೇಶಿಸಿದ್ದಾರೆ. ವಾಜಪೇಯಿ ಸರ್ಕಾರದ ಅವಧಿಯಲ್ಲಿ ಯುವಜನ ವ್ಯವಹಾರ ಮತ್ತು ವಸತಿ ಹಾಗೂ ನಗರ ಬಡತನ ನಿರ್ಮೂಲನೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಿರೆನ್ ರಿಜಿಜು
ಪಶ್ಚಿಮಕ್ಷೇತ್ರ ಅರುಣಾಚಲ, ಬಿಜೆಪಿ
ಇವರು 2009ರ ಲೋಕಸಭಾ ಚುನಾವಣೆಯಲ್ಲಿ ಸಂಸತ್ ಪ್ರವೇಶಿಸಿದ್ದರು. ಇದೀಗ ಪ್ರಸಕ್ತ ಸಾಲಿನಲ್ಲೂ ಸಂಸದರಾಗಿ ಆಯ್ಕೆಯಾಗುವ ಮೂಲಕ ತಮ್ಮ ಆಡಳಿತವನ್ನು ಜನ ಸಮರ್ಥಿಸಿಕೊಂಡಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. ಇವರ ಕಠಿಣ ಪರಿಶ್ರಮ ಹಾಗೂ ನಿಷ್ಠೆಯನ್ನು ಪರಿಗಣಿಸಿ ಪಕ್ಷದಲ್ಲಿ ಉತ್ತಮ ಹುದ್ದೆಗಳನ್ನು ನೀಡಲಾಗಿದೆ. ಜತೆಗೆ ಇಂಧನಕ್ಕೆ ಸಂಬಂಧಿಸಿದ ಸ್ಥಾಯಿಸಮಿತಿಯಲ್ಲಿ ಪೆಟ್ರೋಲಿಯಂ, ಅನಿಲಕ್ಕೆ ಸಂಬಂಧಿಸಿದ ಸಲಹಾ ಸಮಿತಿಗೆ ಹಾಗೂ ಆದಿವಾಸಿ ಕಲ್ಯಾಣ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಪಾಲ್ ಗುರ್ಜಾಲ್
ಫರೀದಾಬಾದ್ (ಹರ್ಯಾಣ), ಬಿಜೆಪಿ
ಇವರು ಕಾಲೇಜು ದಿನಗಳಿಂದಲೇ ರಾಜಕೀಯದತ್ತ ಆಕರ್ಷಿತರಾದವರು. ಅಂದೇ ವಿದ್ಯಾರ್ಥಿಗಳ ಪರ ಹೋರಾಟ ಮಾಡಿ ನಾಯಕರೆನಿಸಿಕೊಂಡಿದ್ದರು. ಹಲವಾರು ಪ್ರತಿಭಟನೆಗಳಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಆಗ ಅವರು ಕಲಿಯುತ್ತಿದ್ದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.