ಯುಕೆಪಿ ಸ್ವಾಧೀನ ಭೂಮಿ ಸರ್ಕಾರಕ್ಕೆ ನೋಂದಣಿ: ಸೂಚನೆ
ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ಒಂದು ಮತ್ತು ಎರಡರಲ್ಲಿ ವಶಪಡಿಸಿಕೊಂಡು ಪರಿಹಾರ ನೀಡಲಾದ ಭೂಮಿಯನ್ನು ತಕ್ಷಣವೇ ಸರ್ಕಾರದ ಹೆಸರಿಗೆ ನೋಂದಣಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತ ಶಿವಯೋಗಿ ಕಳಸದ ಸೂಚನೆ ನೀಡಿದರು.
ಬಾಗಲಕೋಟೆ ಬಿಟಿಡಿಎ ಸಭಾಂಗಣದಲ್ಲಿ ಸೋಮವಾರ ನಡೆದ ಬಾಗಲಕೋಟೆ, ರಾಯಚೂರು, ಬಿಜಾಪುರ, ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಭೂ ಸ್ವಾಧೀನ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೃಷ್ಣಾ ಮೇಲ್ದಂಡೆಗೆ ವಶಪಡಿಸಿಕೊಂಡು ಪರಿಹಾರ ನೀಡಿದ್ದರೂ ಆ ಭೂಮಿ ಕಾಗದಪತ್ರ ಹಾಗೂ ದಾಖಲಾತಿಗಳು ಮಾತ್ರ ಇನ್ನೂ ರೈತರ ಹೆಸರಿನಲ್ಲಿವೆ. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರದೆ ತುರ್ತು ಆದ್ಯತೆಯಾಗಿ ಪರಿಗಣಿಸಿ 15 ದಿನದ ಒಳಗಾಗಿ ಎಲ್ಲ ಭೂ ದಾಖಲಾತಿಗಳು ಸರ್ಕಾರದ ಹೆಸರಿಗೆ ನೋಂದಣಿ ಮಾಡಿ ವರ್ಗಾವಣೆಯಾಗುವಂತೆ ನೋಡಿಕೊಳ್ಳಬೇಕು. ಯುಕೆಪಿಯ 1, 2ನೇ ಹಂತದಲ್ಲಿ ಸಂತ್ರಸ್ತರಿಗೆ ನೀಡಬೇಕಾದ ಸುಮಾರು 7 ಸಾವಿರದಷ್ಟು ಹಕ್ಕು ಪತ್ರಗಳು ಬಾಕಿ ಇವೆ. ಅಧಿಕಾರಿಗಳು ಆರ್‌ಸಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ವಿಚಾರಿಸಿ ಹಕ್ಕು ಪತ್ರ ವಿತರಿಸಬೇಕು. ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ನೀಡುವ 22 ಸಾವಿರ ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕು. ಮನೆ ನಿರ್ಮಾಣ ಖಚಿತಪಡಿಸಿಕೊಂಡು ವರದಿ ಮಾಡುವಂತೆ ನಿರ್ದೇಶನ ನೀಡಿದರು.