ರೈಲು ದುರಂತ ನಲ್ವತ್ತು ಸಾವು
ನಿಂತಿದ್ದ ಗೂಡ್ಸ್ ರೈಲಿಗೆ ಅದೇ ಹಳಿಯ ಮೇಲೆ ಬಂದ...
ಲಖನೌ (ಉತ್ತರಪ್ರದೇಶ): ನಿಂತಿದ್ದ ಗೂಡ್ಸ್ ರೈಲಿಗೆ ಅದೇ ಹಳಿಯ ಮೇಲೆ ಬಂದ ಪ್ರಯಾಣಿಕರ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 40 ಮಂದಿ ಸಾವಿಗೀಡಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಲಖನೌದ ನೈರುತ್ಯ ದಿಕ್ಕಿಗೆ ಇರುವ ಖಲೀಲಾಬಾದ್ ಬಳಿಯ ಚುರೈಬ್ ರೇಲ್ವೆ ನಿಲ್ದಾಣದಲ್ಲಿ ಈ ದುರಂತ ನಡೆದಿದೆ.
ಘಟನೆಯ ಬಗ್ಗೆ ವಿವರಣೆ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಭರತ್‌ಲಾಲ್, ವೇಗವಾಗಿ ಸಾಗುತ್ತಿದ್ದ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಿನ ಚಾಲಕ, ರೈಲು ಚುರೈಬ್ ರೇಲ್ವೆ ನಿಲ್ದಾಣವನ್ನು ಪ್ರವೇಶಿಸುವ ಮುನ್ನ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾನೆ. ಆದರೆ, ವೇಗದಲ್ಲಿದ್ದ ರೈಲು ಹಳಿತಪ್ಪಿದ್ದರಿಂದ ಈ ಘಟನೆ ನಡೆದಿರುವುದಾಗಿ ತಿಳಿಸಿದರು.
ಅಪಘಾತದ ತೀವ್ರತೆಗೆ ಪ್ರಯಾಣಿಕ ರೈಲಿನ 6 ಬೋಗಿಗಳು ಹಳಿ ತಪ್ಪಿದವು. ಸುಮಾರು 40 ಪ್ರಯಾಣಿಕರು ಸಾವಿಗೀಡಾಗಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಭರತ್‌ಲಾಲ್ ತಿಳಿಸಿದ್ದಾರೆ.
ನಜ್ಜುಗುಜ್ಜಾಗಿರುವ ಬೋಗಿಗಳ ಮಧ್ಯೆ ಸಿಲುಕಿಕೊಂಡಿರುವ ಶವಗಳನ್ನು ಹಾಗೂ ಪ್ರಯಾಣಿಕರನ್ನು ಹೊರತಗೆಯುವ ಕೆಲಸ ಭರದಿಂದ ಸಾಗಿದ್ದು, ನಿಲ್ದಾಣದ ಮೂಲಕ ಸಾಗಬೇಕಿರುವ ಇತರ ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. ದುರಂತ ಸಂಭವಿಸಿದ ಬಳಿಕ ಚುರೈಬ್ ರೇಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಗಾಯಗೊಂಡವರ ಚಿಕಿತ್ಸೆ, ಔಷಧಿಗೆ ತಮ್ಮ ಸರ್ಕಾರ ಸಕಲ ನೆರವು ನೀಡಲಿದೆ ಎಂದಿದ್ದಾರೆ.
ಮೋದಿ ಕಳವಳ
ಘಟನೆಯ ಸುದ್ದಿ ತಿಳಿದ ಕೂಡಲೇ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ದುರಂತದ ಸುದ್ದಿ ಕಿವಿಗೆ ಬೀಳುತ್ತಲೇ ಸಂಪುಟ ಕಾರ್ಯದರ್ಶಿ ಅಜಿತ್ ಸೇಠ್ ಅವರೊಂದಿಗೆ ಮಾತನಾಡಿದ ಮೋದಿ, ಘಟನೆಯ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು.
ಸಿಂಗ್ ಶೋಕ
ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್ ಅಪಘಾತದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ಸಂತಾಪ ಸೂಚಿಸಿರುವ ಅವರು, ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ರೇಲ್ವೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.